ನಾಗರಾಜ್ ಹೆತ್ತೂರು, ಹಾಸನ
‘‘ಕೇಳ್ರಪ್ಪೋಕೇಳ್ರಿ... ಗ್ರಾಮದ ಹೊಲೆಯನೊಬ್ಬ ದೇವಸ್ಥಾನಕ್ಕೆ ನುಗ್ಗಿ ದೇವಾಲಯ ಮಲಿನ ಮಾಡಿದ್ದಾನೆ. ಎಲ್ಲರೂ ಪಂಚಾಯಿತಿ ಕಟ್ಟೆಯ ಹತ್ತಿರ ಬರಬೇಕು. ಬರದಿದ್ದರೆ ಅವರನ್ನು ಊರಿಂದ ಆಚೆ ಇಡಲಾಗುತ್ತದೆ ಬೆಳ್ಳಂಬೆಳಗ್ಗೆ ಅವರು ಬಡಿದ ತಮಟೆಯ ಸದ್ದು ಅವರ ಕಿವಿಗೆ ಬಿದ್ದ ಕೂಡಲೆ ಅಕ್ಷರಶಃ ಅವರು ಪಾತಾಳಕ್ಕೆ ಇಳಿದು ಹೋಗಿದ್ದರು. ತಾವೇನು ಮಾಡಬಾರದ ಮಹಾಪರಾಧ ಮಾಡಿದೆವು. ಯಾವ ಕಾರಣಕ್ಕೆ ಈ ಪಂಚಾಯಿತಿ ಎಂದು ಮಾತನಾಡಿಕೊಂಡರು. ಹೌದು..!
ಜಾತಿಯನ್ನೇ ಹೊತ್ತು ಮಲಗಿಕೊಂಡಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸೀ ಸಮೀಪದ ಬಾಗೀವಾಳು ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರಿಗೆ ಬಹಿಷ್ಕಾರ ಹಾಕಿ ಅಪವಿತ್ರಗೊಂಡಿದೆ ಎಂದು ಅದಕ್ಕೆ ಬೀಗ ಜಡಿದು ತೀವ್ರ ವಿವಾದ ಸೃಷ್ಟಿಸಿದ ಪ್ರಕರಣ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಜಿಲ್ಲಾಡಳಿತ ಮಧ್ಯ ಪ್ರವೇಶದಿಂದ ತಿಳಿಯಾಗಿದೆ. ಆದರೆ ದೇವಸ್ಥಾನವನ್ನು ಅಪವಿತ್ರಗೊಳಿಸಿದವರ ಬಗ್ಗೆ ಅಸಮಾಧಾನ ಇನ್ನೂ ಹಾಗೆಯೇ ಇದೆ. ಅಸ್ಪಶ್ಯತೆ , ಅಸಮಾನತೆ ವಿರುದ್ಧ ಎಷ್ಟೇ ದೊಡ್ಡ ಕಾನೂನು ಇದ್ದರೂ ಮತ್ತೆ ಮತ್ತೆ ನಡೆಯುತ್ತಲೇ ಇರುತ್ತವೆ ಎನ್ನುವುದಕ್ಕೆ ಈ ಘಟನೆ ಉದಾಹರಣೆಯಾಗಿ ನಮ್ಮ ಮುಂದಿದೆ.
ಅಂದು ನಡೆದಿದ್ದೇನು..? ಬಾಗೀವಾಳು ಸುಮಾರು 500 ಜನರಿರುವ ಪುಟ್ಟ ಗ್ರಾಮ ದಲಿತರು 70 ಮಂದಿ ಇದ್ದಾರೆ. ಗ್ರಾಮದಲ್ಲಿ ಉಡುಸಲಮ್ಮ ಎಂಬ ದೇವಸ್ಥಾನವಿದೆ. ಹಿಂದಿನಿಂದಲೂ ದಲಿತರಿಗೆ ಈ ದೇವಸ್ಥಾನ ಪ್ರವೇಶ ನಿಷಿದ್ಧವಾಗಿದೆ. ಹಿಂದೆ ಗ್ರಾಮದ ಕೆಲವರು ಪ್ರವೇಶ ಕೇಳಿದ್ದರು ಅದಾದ ನಂತರ ಕೆಲ ವರ್ಷದಲ್ಲಿ ಕೇಳಿದವರಲ್ಲಿ ಒಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇದನ್ನೇ ಕಾರಣವಾಗಿಟ್ಟುಕೊಂಡ ಇಲ್ಲಿನ ಕೆಲವರು ‘ನೋಡಿ ದಲಿತರು ದೇವಸ್ಥಾನ ಪ್ರವೇಶ ಮಾಡಿದರೆ ರಕ್ತ ಕಾರಿಕೊಂಡು ಸಾಯುತ್ತಾರೆ. ಈ ದೇವರಿಗೆ ದಲಿತರನ್ನು ಕಂಡರೆ ಆಗುವುದಿಲ್ಲ ಎಂದು ಹೇಳಿ ಇಷ್ಟು ವರ್ಷದವರೆಗೆ ದೇವಸ್ಥಾನದಿಂದ ದಲಿತರನ್ನು ದೂರ ಇಟ್ಟಿದ್ದಾರೆ. ಆ ಭಯವೋ ಏನೋ ಈವರೆಗೆ ಇಲ್ಲಿನ ದಲಿತರು ದೇವಾಲಯದ ಹತ್ತಿರ ಹೋಗುವುದಕ್ಕೂ ಭಯ ಪಡುತ್ತಿದ್ದರು. ಕಾರಣ ಆ ದೇವತೆ ಬಗ್ಗೆ ಭಕ್ತಿಯಂತೂ ಅಲ್ಲ. ಬದಲಾಗಿ ಎಲ್ಲಿ ಏನಾಗುವುದೋ ಎಂಬ ಭಯ. ಸವರ್ಣೀಯರನ್ನು ಎದುರು ಹಾಕಿಕೊಂಡು ಬದುಕಲು ಸಾಧ್ಯವೇ ಎಂಬ ಭಯ. ಇಲ್ಲಿನ ದಲಿತರು ಕೂಡ ಈ ದೇವ ರೊಂದಿಗೆ ಒಂದು ರೀತಿಯ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದಾರೆ. ಆದರೆ ತಮ್ಮ ಆಚರಣೆಗಳನ್ನು ಮಾಡಲು ಸಾಧ್ಯವಾಗದಿದ್ದರ ಬಗ್ಗೆ ವಿಷಾದವಿದೆ. ಈ ಕಾರಣದಿಂದ ಒಂದೂವರೆ ತಿಂಗಳ ಹಿಂದೆ ಊರಿನ ಎಲ್ಲರ ಸಹಕಾರ ಪಡೆದುಕೊಂಡು ದೇವಾಲಯಕ್ಕೆ ಸಮೀಪ ಚಿಕ್ಕಮ್ಮ ಗುಡಿ ಪ್ರತಿಷ್ಠಾಪಿಸಿ ಪೂಜಿಸಲು ಆರಂಭಿಸಿದ್ದಾರೆ. ಈ ಸಂಬಂಧ ಈ ದೇವರಿಗೆ ಹೋಮ ಹವನ ಮಾಡಿಸಿದ್ದಾರೆ. ಚಿಕ್ಕಮ್ಮ ಗುಡಿ ಸ್ಥಾಪನೆ ಬಗ್ಗೆ ಗ್ರಾಮದ ಸವರ್ಣೀಯರಲ್ಲಿ ಚರ್ಚೆ ನಡೆದಿದೆ. ಗ್ರಾಮದಲ್ಲಿ ಯಾಕೆ ಹೋಮ ಮಾಡಿಸಿದಿರಿ ಎಂದು ದಲಿತರನ್ನು ಕರೆಸಿದ್ದಾರೆ. ಇಲ್ಲಿನ ಉಡುಸಲಮ್ಮ ದೇವರ ಪೂಜಾರಿ ಮೈಗೆ ದೇವರು ಬಂದ ಸಂದರ್ಭದಲ್ಲಿ ದೇವರೂ ಕೂಡ ಒಳ್ಳೆ ಕೆಲಸ ಮಾಡಿದಿರಿ ಎಂದು ಹೇಳಿದೆ. ಜೊತೆಗೆ ನೀವೂ ನನ್ನ ಮಕ್ಕಳೇ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗಿ ಎಂದಿದೆ. ಇದರಿಂದ ಸಂತಸಗೊಂಡ ದಲಿತರು ದೇವರ ಗುಣಗಾನ ಮಾಡಿಕೊಂಡು ಹೋಗಿದ್ದಾರೆ.
ಇದಾದ ನಂತರ ಕಳೆದ 10ನೆ ತಾರೀಕಿನಂದು ಗ್ರಾಮದ ವಿದ್ಯಾವಂತ ಯುವಕ ಮೋಹನ್ ಕುಮಾರ್ ಇಲ್ಲಿನ ಪೂಜಾರಿಯ ಜೊತೆ ಮಾತನಾಡುತ್ತಾ ದೇವಸ್ಥಾನದವರೆಗೂ ಬಂದಿದ್ದಾನೆ. ಬಂದವನೇ ದೇವಸ್ಥಾನದ ವರಾಂಡಕ್ಕೆ ಕಾಲಿಟ್ಟಿದ್ದಾನೆ. ಆದರೆ ಇದನ್ನು ನಿರೀಕ್ಷಿಸದಿದ್ದ ಪೂಜಾರಿ ತಕ್ಷಣವೇ ಆತನನ್ನು ಬೈದು ದೇವಸ್ಥಾನ ಅಪವಿತ್ರಗೊಳಿಸಿಬಿಟ್ಟೆ ಮೊದಲು ಇಲ್ಲಿಂದ ಹೋಗು ಎಂದು ಹೇಳಿದ್ದಾನೆ. ಕೂಡಲೇ ಒಂದಿಬ್ಬರಿಗೆ ಕರೆ ಮಾಡಿ ದಲಿತ ಮೋಹನ್ ಕುಮಾರ್ ದೇವಸ್ಥಾನದೊಳಗೆ ಪ್ರವೇಶಿಸಿದ ಎಂದು ಹೇಳಿ ಕರೆಸಿದ್ದಾನೆ. ಅಲ್ಲೇ ತೀರ್ಮಾನ ಮಾಡಿದ ಪೂಜಾರಿ ದೇವಸ್ಥಾನ ಮಲಿನವಾಗಿದೆ ಹೋಮ ಮಾಡಿ ಶುದ್ಧಿಯಾಗುವವರೆಗೆ ತೆಗೆಯುವುದಿಲ್ಲ. ಮಲಿನಕ್ಕೆ ತಗುಲುವ ವೆಚ್ಚವನ್ನು ಇವನಿಂದಲೇ ಹಾಕಿಸಿ ಎಂದವನೇ ದೇವಸ್ಥಾನಕ್ಕೆ ಬೀಗ ಜಡಿದು ಪಂಚಾಯಿತಿ ಮುಖಂಡರಿಗೆ ವಿಷಯ ಮುಟ್ಟಿಸಿದ್ದಾನೆ. ಹೀಗೊಂದು ಘಟನೆ ಈ ರೀತಿ ತಿರುಗಿಕೊಂಡಿದ್ದಕ್ಕೆ ಆಘಾತಗೊಂಡ ಮೋಹನ್ ಕುಮಾರ್ ನಡೆದ ಘಟನೆಯನ್ನು ಕೆಲವರಿಗೆ ತಿಳಿಸಿದ್ದಾನೆ. ಸವರ್ಣೀಯರು ಈತನ ವಿಷಯವನ್ನು ಕೇಳಿಕೊಂಡರೇ ವಿನಃ ಯಾರೊಬ್ಬರೂ ಧೈರ್ಯ ತುಂಬಿಲ್ಲ. ಸಣ್ಣ ವಿಷಯವಲ್ಲವೇ..? ಒಂದು ಮಾತು ಬಯ್ಯಬಹುದು ಆದದ್ದು ಆಗಲಿ ಎಂದ ಮೋಹನ್ ಕುಮಾರ್ ಎಂದಿನಂತೆ ಮನೆಗೆ ಹೋಗಿದ್ದಾನೆ. ಆದರೆ ಮಾರನೆ ದಿನ ಎಲ್ಲೆಡೆ ಡಂಗೂರ ಸಾರಲಾಗಿದೆ. ದೇವಸ್ಥಾನ ಮಲಿನವಾಗಿದೆ. ದಲಿತ ಮೋಹನ್ ಕುಮಾರ್ ದೇವಸ್ಥಾನ ಪ್ರವೇಶಿಸಿ ದೇವಾಲಯ ಮಲಿನವಾಗಿದೆ. ಹೋಮ ಮಾಡಿಸಲು ಖರ್ಚು ವೆಚ್ಚ ಕೊಡಬೇಕು. ಎಲ್ಲರೂ ಪಂಚಾಯಿತಿ ಕಟ್ಟೆಗೆ ಬರಬೇಕು. ಬರದಿದ್ದರೆ ಅವರನ್ನು ಗ್ರಾಮದಿಂದ ಬಹಿಷ್ಕಾರ ಹಾಕಲಾಗುವುದು ಎಂದು ತಮಟೆ ಹೊಡೆದುಕೊಂಡು ಕಾಲನಿಗೂ ವಿಷಯ ಮುಟ್ಟಿಸಿದ್ದಾರೆ. ಈ ಮಧ್ಯೆ ಕೆಲವರು ಮೋಹನ್ ಕುಮಾರ್ ಮೇಲೆ ಹರಿಹಾಯ್ದು ಹಲ್ಲೆ ನಡೆಸುವ ಬೆದರಿಕೆ ಒಡ್ಡಿದ್ದು ಕಿವಿಗೆ ಬಿದ್ದಿದೆ. ಗುಂಪುಗುಂಪಾಗಿ ಈ ಬಗ್ಗೆ ಚರ್ಚೆ ನಡೆದಿದೆ. ಗ್ರಾಮದ ಕೆಲ ಯುವಕರು ಅಲ್ಲಿಗೆ ಹೋಗುವುದು ಬೇಡ ಹೊಡೆದು ಹಾಕುತ್ತಾರೆ ಎಂದು ಮೋಹನ್ ಕುಮಾರ್‌ಗೆ ಹೇಳಿದ್ದಾರೆ. ಇದರಿಂದ ಬೆದರಿದ ಮೋಹನ್ ಕುಮಾರ್ ಕೆಲವರು ಸ್ಥಳೀಯರ ಸಹಕಾರದಿಂದ ನೇರ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾನೆ. ಇದಿಷ್ಟು ನಡೆದಿರುವ ಘಟನೆ.
ಇದೀಗ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪ್ರಕರಣ ತಿಳಿಗೊಳಿಸಿದ್ದಾರೆ. ಎಲ್ಲರೂ ದೇವಾಲಯ ಪ್ರವೇಶಿಸಿದ್ದಾರೆ. ಗ್ರಾಮಸ್ಥರಿಂದ ಮುಚ್ಚಳಿಕೆ ಬರೆಸಿಕೊಂಡು ಪ್ರಕರಣವನ್ನು ತಿಳಿಗೊಳಿಸಲಾಗಿದೆ. ಗ್ರಾಮದಲ್ಲಿ ಪೊಲೀಸ್ ಬೂಟುಗಳ ಸದ್ದು ಕೇಳಿಸುತ್ತಿದೆ. ಒಬ್ಬರು ಮತ್ತೊಬ್ಬರನ್ನು ಮಾತನಾಡಿಸದ ಪರಿಸ್ಥಿತಿ ಇದೆ. ಕಳೆದ 4 ತಿಂಗಳಲ್ಲಿ ಹಾಸನದಲ್ಲಿ ನಡೆಯುತ್ತಿರುವ 4ನೆ ಪ್ರಕರಣ ಇದು. ಗಂಗೂರು ಗ್ರಾಮದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷೇಧ, ಕ್ಷೌರ ನಿಷೇಧ ವಿರುದ್ಧ ಹೋರಾಟ ನಡೆದಿತ್ತು. ಅವತ್ತು ಘಟನೆಗೆ ಸಾಕ್ಷಿಯಾಗಿದ್ದ ನನಗೆ ನೆನಪಿದೆ. ನಾವು ದೇವಸ್ಥಾನ ಪ್ರವೇಶಿಸುತ್ತಿದ್ದಂತೆ ಸವರ್ಣೀಯರೆಲ್ಲ ಕಣ್ಣೀರಿಟ್ಟಿದ್ದರು. ಇನ್ನು ಸಕಲೇಶಪುರ ತಾಲೂಕಿನ ಶಿರಾಡಿಯಮ್ಮನಿಗೆ ದಲಿತರ ತಲೆಯೇ ಆಗುವುದಿಲ್ಲ ಎಂದು ಅಲ್ಲೂ ಕೂಡ ದಲಿತರನ್ನು ದೂರ ಇಟ್ಟಿದ್ದು ಶಾಸಕ ಕುಮಾರಸ್ವಾಮಿ ಕೂಡ ಇಲ್ಲಿ ಕಾಲಿಡುವುದಿಲ್ಲ ಎಂಬ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ನಿಜಕ್ಕೂ ಇವೆಲ್ಲವೂ ಅಮಾನವೀಯ ಘಟನೆಗಳು, ಒಂದು ಕಡೆ ಪ್ರಬಲ ಕಾನೂನುಗಳಿದ್ದರೂ ದೇವಸ್ಥಾನ ನಿಷೇಧ, ಅಸ್ಪಶ್ಯತೆ ಆಚರಣೆ ಪ್ರಕರಣಗಳು ನಡೆಯುತ್ತಲೇ ಇವೆ. ಈ ಸಂದರ್ಭದಲ್ಲೆಲ್ಲ ದಲಿತರು ಭಯದಿಂದ ದೂರವೇ ಉಳಿಯಲು ನಿರ್ಧರಿಸುತ್ತಾರೆ. ಇನ್ನೂ ಒಂದು ದುರಂತ ಎಂದರೆ ಪ್ರಕರಣ ನಂತರ ಗ್ರಾಮದಲ್ಲಿ ಶಾಂತಿಗಿಂತ ಅಶಾಂತಿಯೇ ಹೆಚ್ಚಾಗುತ್ತದೆ. ಎಲ್ಲೂ ಕೂಡ ತಾವು ದಲಿತರನ್ನು ದೂರ ಇಟ್ಟಿದ್ದು ತಪ್ಪು ಎಂದು ತಿದ್ದಿಕೊಳ್ಳುವುದಿಲ್ಲ. ಮೇಲಾಗಿ ಇಂತಹ ಪ್ರಕರಣ ಸಂದರ್ಭದಲ್ಲಿ ದಲಿತರು ತಿಂಗಳುಗಟ್ಟಲೇ ಅಘೋಷಿತವಾಗಿ ಬಹಿಷ್ಕಾರಕ್ಕೆ ಒಳಗಾಗಿ ಬದುಕಿದ್ದಾರೆ. ಗಂಗೂರಿನಲ್ಲಿ ಇನ್ನೂ ಕೂಡ ಮುಖಕ್ಕೆ ಮುಖ ಇಟ್ಟು ಮಾತನಾಡದ ಪರಿಸ್ಥಿತಿ ಇಲ್ಲ. ಪ್ರಕರಣದ ನಂತರ ಅಸ್ಪಶ್ಯತಾ ಆಚರಣೆಯ ನಿಜವಾದ ಪರಿಸ್ಥಿತಿ ಉಂಟಾಗುತ್ತದೆ. ಕೆಲಸಕ್ಕೆ ಕರೆಯುವುದಿಲ್ಲ, ನೀರಿಗೆ ಸಮಸ್ಯೆ ಮಾಡುತ್ತಾರೆ, ಕೆಲವು ಕಡೆ ದಿನಸಿ, ಗಿರಣಿ ಕೊಡುವುದಿಲ್ಲ ಇಂತಹವುಗಳೆಲ್ಲ ನಡೆಯುತ್ತವೆ. ಈ ಸಂದರ್ಭದಲ್ಲೆಲ್ಲ ಗ್ರಾಮದ ಸವರ್ಣೀಯರು ಸಾಮೂಹಿಕವಾಗಿ ತಮ್ಮ ಜಿದ್ದನ್ನು ದಲಿತರ ಮೇಲೆ ತೀರಿಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತ. ಎಲ್ಲಕ್ಕೂ ಮುಖ್ಯವಾಗಿ ಇಂತಹ ಸಮಸ್ಯೆಗಳನ್ನು ದಲಿತರೇ ಪರಿಹರಿಸಿಕೊಳ್ಳಬೇಕಾದ ಪರಿಸ್ಥಿತಿ. ಜಾತ್ಯತೀತರೆಂದು ಹೇಳಿಕೊಳ್ಳುವ ಯಾವ ಮುಖಂಡರೂ ಮುಂದೆ ಬಂದು ಇವುಗಳನ್ನು ಪರಿಹರಿಸುವ ಪ್ರಯತ್ನ ಮಾಡುತ್ತಿಲ್ಲ.. ಕಾರಣ ದಲಿತರ ಪರವಾಗಿ ಮಾತನಾಡಿದರೆ ಅವರನ್ನೇ ಬಹಿಷ್ಕರಿಸುವ ಭಯ.. ಕಾನೂನು ಕಟ್ಟಳೆಗಳು ಎಷ್ಟೇ ಗಟ್ಟಿಯಿದ್ದರೂ ಇಂತಹ ಸಂದರ್ಭದಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ. ಹಾಗೆ ಈ ಸಂದರ್ಭದಲ್ಲೆಲ್ಲ ಕಾನೂನು ಬಳಕೆಯಾಗುವುದೂ ಇಲ್ಲ... ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಕಾರ ವಿಶೇಷ ತಂಡ ರಚಿಸಬೇಕಿದೆ. ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಆ ತಂಡ ಗ್ರಾಮಕ್ಕೆ ಬಂದು ಕೆಲಸ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಸ್ಪಶ್ಯತೆ ಆಚರಣೆಗಳ ಮತ್ತು ನಿಷೇಧದ ಬಗ್ಗೆ ಹೊಸ ಚಿಂತನೆಗಳು ನಡೆಯಬೇಕಿದ್ದು.. ಈ ನಿಟ್ಟಿನಲ್ಲಿ ಯೋಚಿಸಬೇಕಿದೆ...
courtesy : varthabharati
0 comments:
Post a Comment