ರಾಜ್ಯ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಡಿದ ತಾಕೀತು.
ಜಿಲ್ಲೆಯ ವಿವಿಧ ನೀರಾವರಿ ಯೋಜನೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಸಚಿವರು, ಅಧಿಕಾರಿಗಳಿಗೆ ಕಾಲಮಿತಿಯೊಳಗೆ ಯೋಜನೆಗಳನ್ನು ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.
ಸಿಂಗಟಾಲೂರು ಏತನೀರಾವರಿ : ಈ ಯೋಜನೆಯಡಿ ಈಗಾಗಲೆ ಬಲದಂಡೆ ಕಾಮಗಾರಿ ಪೂರ್ಣಗೊಂಡು ಕಾಲುವೆಗೆ ಈಗಾಗಲೆ ನೀರು ಹರಿಸಲಾಗುತ್ತಿದೆ. ಆದರೆ ಕೊಪ್ಪಳ ಭಾಗದ ಎಡದಂಡೆ ಕಾಲುವೆಯ ಕಾಮಗಾರಿ ೨೦೧೧ ರಲ್ಲಿ ಪ್ರಾರಂಭಗೊಂಡಿದ್ದರೂ ಮಂದಗತಿಯಲ್ಲಿ ಸಾಗುತ್ತಿದೆ. ಭೂಮಿ ಕಳೆದುಕೊಂಡ ಸಿಂಗಟಾಲೂರು ಏತ ನೀರಾವರಿ ಯೋಜನೆ ಎಂಬ ಹೆಸರು ಹೇಳಿಕೊಂಡು ಬರಲಾಗುತ್ತಿದೆ ಅಷ್ಟೇ. ಈ ರೀತಿಯಾದಲ್ಲಿ ಜನರಿಗೆ ನಾವು ಉತ್ತರಿಸುವುದು ಕಷ್ಟವಾಗುತ್ತದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ಮುಂಡರಗಿ-ಕೊಪ್ಪಳ ವರೆಗಿನ ೭೨ ಕಿ.ಮೀ. ವರೆಗಿನ ಏತ ನೀರಾವರಿ ಯೋಜನೆ ಕುಂಟುತ್ತಾ ಸಾಗಿದೆ. ೦-೧೦ ಕಿ.ಮೀ. ವರೆಗಿನ ೧೮ ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ೧೦ ರಿಂದ ೩೩ ಕಿ.ಮೀ. ವರೆಗಿನ ೬೪ ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದಿದ್ದು, ೨೭೭ ಎಕರೆ ಭೂ-ಸ್ವಾಧೀನ ಮಾಡಿಕೊಳ್ಳಲಾಗಿದೆ. ಇನ್ನೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ೩೩ ರಿಂದ ೫೦ ಕಿ.ಮೀ. ವರೆಗಿನ ೪೦ ಕೋಟಿ ರೂ. ವೆಚ್ಚದ ಕಾಮಗಾರಿ ನಡೆದಿದ್ದರೂ, ವೇಗವಾಗಿ ಸಾಗುತ್ತಿಲ್ಲ. ೫೦ ರಿಂದ ೭೨ ಕಿ.ಮೀ. ವರೆಗಿನ ಕಾಮಗಾರಿಗೆ ಇದೀಗ ಟೆಂಡರ್ ಕರೆಯಲಾಗಿದೆ. ಇನ್ನಾದರೂ ಕಾಮಗಾರಿಗಳು ತ್ವರಿತವಾಗಿ ಸಾಗಬೇಕು. ಯಾವುದೇ ಕಾರಣಕ್ಕೂ ಎರಡು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ, ಕಾಲುವೆಗೆ ನೀರು ಹರಿಸುವಂತಾಗಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಿರೇಹಳ್ಳ ಯೋಜನೆ : ಹಿರೇಹಳ್ಳ ಯೋಜನೆಯಡಿ, ಕಾಲುವೆಗಳಿಗೆ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ವದಗನಾಳ, ಕೊಪ್ಪಳ ಮುಂತಾದೆಡೆ ಕಾಲುವೆಗಳಿಗೆ ಇದುವರೆಗೂ ನೀರು ಸುಳಿದಿಲ್ಲ. ಸುಮಾರು ೨೦ ಸಾವಿರ ಎಕರೆಗೂ ಹೆಚ್ಚು ಜಮೀನಿಗೆ ನೀರು ಒದಗಿಸಬೇಕಾದ ಯೋಜನೆಯಡಿ ಕೇವಲ ೧೦ ಸಾವಿರ ಎಕರೆಗೆ ಮಾತ್ರ ಇದುವರೆಗೂ ನೀರು ಪೂರೈಕೆಯಾಗುತ್ತಿದೆ. ಅಧಿಕಾರಿಗಳ ನಿಷ್ಕಾಳಜಿಯಿಂದಾಗಿ ಯೋಜನೆ ವೈಫಲ್ಯ ಕಾಣುತ್ತಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಇನ್ನೂ ಒಂದು ವರ್ಷವಾದರೂ ಸರಿಯೇ. ಈ ಯೋಜನೆಯಡಿ ಟೇಲೆಂಡ್ ವರೆಗಿನ ಕಾಲುವೆಗೂ ಸಮರ್ಪಕವಾಗಿ ನೀರು ಹರಿಯುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಿ, ಕ್ರಮ ಜರುಗಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಅವರು ಕಾರ್ಯಪಾಲಕ ಇಂಜಿನಿಯರ್ ಗಂಗಪ್ಪ ಅವರಿಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಮಾತನಾಡಿ, ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆ ರೂಪಿಸಿದ್ದು, ಇದರಿಂದ ೫ ಸಾವಿರ ಎಕರೆ ಜಮೀನಿಗೆ ನೀರಾವರಿ ಒದಗಿಸಬಹುದಾಗಿದೆ. ಯೋಜನೆಯ ಡಿಪಿಆರ್ ಅನ್ನು ತಯಾರಿಸಿ, ಈಗಾಗಲೆ ಸಲ್ಲಿಸಲಾಗಿದೆ. ಅದೇ ರೀತಿ ಬಹದ್ದೂರಬಂಡಿ ಏತನೀರಾವರಿ ಯೋಜನೆಯನ್ನು ಸಹ ಅನುಮೋದನೆಗೊಂಡಿದ್ದು, ಸರ್ಕಾರಿ ಆದೇಶ ಆಗಬೇಕಿದೆ. ಅಧಿಕಾರಿಗಳು ಯಾವುದೇ ಸಮಸ್ಯೆಗಳಿದ್ದಲ್ಲಿ, ಶಾಸಕರು ಹಾಗೂ ಸಚಿವರ ಗಮನಕ್ಕೆ ತಂದು, ಯೋಜನೆಗಳು ತ್ವರಿತವಾಗಿ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್ ಸೇರಿದಂತೆ ನೀರಾವರಿ ಇಲಾಖೆಯ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment