ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ವಿದ್ಯಾರ್ಥಿಯೋರ್ವನಿಗೆ ಬೇರೆ ವಿದ್ಯಾರ್ಥಿಯ ಉತ್ತರ ಪತ್ರಿಕೆ ನೀಡಿ, ನಕಲಿಗೆ ಸಹಕಾರ ಮಾಡಿಕೊಟ್ಟ ಶಿಕ್ಷಕಿಯೋರ್ವರನ್ನು ಅಮಾನತುಗೊಳಿಸಿ ಡಿಡಿಪಿಐ ಜಿ.ಹೆಚ್. ವೀರಣ್ಣ ಆದೇಶ ಹೊರಡಿಸಿದ್ದಾರೆ.
ಆರ‍್ಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕಿ ಖತೀಜಾಬೇಗಂ ಅವರು, ಗಂಗಾವತಿಯ ಕೊಟ್ಟೂರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಕೊಠಡಿ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಯೋರ್ವನ ಉತ್ತರ ಪತ್ರಿಕೆಯನ್ನು ಪಡೆದು, ಇನ್ನೋರ್ವ ವಿದ್ಯಾರ್ಥಿಗೆ ನಕಲು ಮಾಡಲು ನೀಡಿರುವುದನ್ನು ಆಹಾರ ಇಲಾಖೆ ಉಪನಿರ್ದೇಶಕ ಜಯಪ್ಪ ನೇತೃತ್ವದ ಜಿಲ್ಲಾ ಜಾಗೃತ ದಳ, ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವ ವೇಳೆ ಪತ್ತೆ ಮಾಡಿದೆ. ಶಿಕ್ಷಕರು ಪರೀಕ್ಷೆಯ ಪಾವಿತ್ರತೆಯನ್ನು ಹಾಳು ಮಾಡಿ, ಕರ್ತವ್ಯಲೋಪ ಎಸಗಿರುವ ಬಗ್ಗೆ ಜಿಲ್ಲಾ ಜಾಗೃತ ದಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದೆ. ಅಲ್ಲದೆ ಈ ಕುರಿತಂತೆ ಗಂಗಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಸಹಶಿಕ್ಷಕಿ ಖತೀಜಾಬೇಗಂ ಅವರನ್ನು ಕರ್ತವ್ಯ ಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಡಿಡಿಪಿಐ ಜಿ.ಹೆಚ್. ವೀರಣ್ಣ ಆದೇಶ ಹೊರಡಿಸಿದ್ದಾರೆ. ಶಿಕ್ಷಕರು ಕರ್ನಾಟಕ ನಾಗರೀಕ ಸೇವಾ ನಿಯಮ ೯೮ ರ ಅನ್ವಯ ಜೀವನಾಂಶ ಭತ್ಯೆಗೆ ಅರ್ಹರಿದ್ದು, ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
0 comments:
Post a Comment