PLEASE LOGIN TO KANNADANET.COM FOR REGULAR NEWS-UPDATES



ನಮ್ಮ ಹೀರೋ ಅಬ್ಬರದ ಸಂಗೀತಕ್ಕೆ ಸಹನೃತ್ಯಗಾರ ಜೊತೆ, ಹೀರೋಯಿನ್ (ಗಳ) ಜೊತೆ ಹೆಜ್ಜೆ ಹಾಕಬೇಕು. ಒಂದೇ ಒಂದು ಗ್ರಾಮ್ ನಷ್ಟೂ ಕೊಲೆಸ್ಟ್ರಾಲ್ ಹೆಚ್ಚಿರದ ಬಳುಕು ನಡುವಿನ ನಮ್ಮ ನಾಯಕಿ ಮಾದಕವಾಗಿ ಕಣ್ಣು ಮಿಟುಕಿಸುತ್ತಾ ಇರಬೇಕು. ಯಾವ್ ಹೀರೋಗಿಂತಾನೂ ಕಡಿಮೆಯಿರದೇ, ಕರಾಬ್ ಆಗಿರದೇ ಸ್ಮಾರ್ಟ್ ಆಗಿರೋ ನಮ್ಮ ವಿಲನ್, ಡಿಸೆಂಟ್ ಆಗಿ ಎಲ್ಲ ಕೆಲಸಗಳನ್ನೂ ಮುಗಿಸುತ್ತಿರಬೇಕು. ಕೊನೆಯಲ್ಲಿ ನಮ್ಮ ಹೀರೋನ ಒಂದೇ ಹೆಜ್ಜೆಯ ಸದ್ದು, ಗುಡುಗು ಸಿಡಿಲುಗಳು ಥಿಯೇಟರ್ ನ ನಾಲ್ಕೂ ಮೂಲೆಗಳನ್ನು ಆವರಿಸಿ, ಇಟ್ಟ ಹೆಜ್ಜೆಯ ಬಿರುಸಿಗೆ ಆ ಭೂಮಿ ಅದುರಿಹೋಗಿ ವಿಲನ್ ಗುಂಪು ಚದುರಿ ಚಿತ್ರಾನ್ನವಾಗಬೇಕು. ಇದು ಈಗೀನ ಲಾಜಿಕ್. ಈ ಲಾಜಿಕ್ ಮುರಿದಿರೋ, ನಿಮ್ಮ ಸಿನಿಮಾ ‘ತೋಪು’. ಲಾಜಿಕ್ ಗೆ ಪರ್ಫೆಕ್ಟ್ ಆಗಿ ಸೂಟ್ ಆಯ್ತೋ ‘ಚಿತ್ರಮಂದಿರ ತುಂಬಿ ತುಳುಕುತ್ತಿದೆ!’ ಎಂಬ ಫಲಕ ಥಿಯೆಟರ್ ಹೊರಗೆ ಇಳಿಬಿಡಲಾಗುತ್ತದೆ.
ಆದ್ರೆ ಈ ‘ಉಳಿದವರು ಕಂಡಂತೆ’ ಸಿನಿಮಾ ಮಾಡಿದ ಟೀಮು ಈ ಲಾಜಿಕ್ ಬಗ್ಗೆ ಅಸಡ್ಡೆ ತೋರುವ ಹುಂಬ ಧೈರ್ಯ ಮಾಡಿಬಿಟ್ಟಿದೆ. ಮೊದಲ ಸಿನಿಮಾದಲ್ಲಿ ಮಾಡಿದಂತೆ!. ಇವರು ಮಂಡೆ ಬಿಸಿಮಾಡಿಕೊಂಡು ಲಾಜಿಕ್ ಮುರಿದಿದ್ದಾರೆ. ಒಳ್ಳೇ ಸ್ಸಾವು ಮಾರಾಯ್ರೆ!. ಇವ್ರು ತಲೆ ಕೆಡೆಸಿಕೊಂಡಿದ್ದರಿಂದ, ತಲೆ ಕೆಡಿಸಿಕೊಳ್ಳದ ನಮ್ಮಂತವರಿಗೆ ಇವರ ಆಟ ‘ಹುಚ್ಚರ ಸಂತೆ’. ಇವರು ಮಾಡೋ ಕೆಲ್ಸ ಹುಚ್ಚರ ಕೆಲ್ಸ!
ಹೀಗೆ ತಲೆ ಬಿಸಿಮಾಡಿಕೊಂಡು ಉಳಿದವರು ಕಂಡಿದ್ದನ್ನ ತೋರಿಸಿದ್ದಾರೆ. ಇವ್ರು ತೋರಿಸಿದ್ದನ್ನೆಲ್ಲಾ ನೋಡಬೇಕೆಂಬ ರೂಲ್ಸುಎನೂ ಇಲ್ಲ ಆದ್ರೂ ನಮ್ಮಂತ ಅಳಿದುಳಿದವರಿಗೆ ಇದನ್ನು ಅರ್ಥೈಸಿಕೊಳ್ಳೋ ಪರಿ ನಮಗೇ ಬಿಟ್ಟದ್ದು. ಇಷ್ಟು ಮಾತ್ರ ಹೇಳ್ಬಹುದು ಇವರ್ದು ಮತ್ತೆ ಹೊಸ ಪ್ರಯತ್ನ!....
ದುಷ್ಟತನ, ದುಡುಕುತನ, ದಾರ್ಷ್ಟ್ಯತನ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿದಾಗ ರೆಡಿಯಾಗೋ ಆಸಾಮಿ ‘ರಿಚ್ಚಿ’. ಮಲ್ಪೆಯಲ್ಲಿ ವಾಸ. ಇವರಪ್ಪ ಇವನಿಗೆ ಅಷ್ಟೇ ಅಲ್ಲ ಚರ್ಚ್ ಗೂ ‘ಫಾದರ್’. ಮೀಸೆ ಚಿಗುರುವ ಮೊದಲೇ ಮಾಡಿದ ಕೊಲೆಗೆ ರಿಮಾಂಡ್ ಹೋಮ್ ನಲ್ಲಿ ಬಂಧಿಯಾಗಿ ಬಿಡುಗಡೆಯಾದವ. ಇದಿವನ ಬ್ಯಾಕ್ ಗ್ರೌಂಡ್. ಇವನ ಗೆಳೆಯ ಮುಂಬಯಿ ಸೇರಿ  ಮಾಫಿಯಾದೊಡಗೂಡಿ ಕೊನೆಗೆ ಮಲ್ಪೆಯಲ್ಲಿರೋ ತಾಯಿಯನ್ನು ಕಂಡು ಕರೆದುಕೊಂಡು ಹೋಗಲು ಬರುತ್ತಾನೆ. ಗೆಳೆಯ ರಿಚ್ಚಿ  ಮತ್ತೆ ಕೂಡಿಕೊಳ್ಳುತ್ತಾನೆ. ಇಬ್ಬರೂ ಗೆಳೆಯರೂ ಒಬ್ಬರಿಗಿಂತ ಇಬ್ಬರು ಎನ್ನುವಂತೆ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಜಿದ್ದಿಗೆ ಬಿದ್ದವರಂತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದು ತಾರಾ ರ ‘ತಾರಾಮೆರಗು’. ಅಮ್ಮ ಮಗ ಕೂಡುವ ಸೀನ್ ಗಳಲ್ಲಿ, ಹದಿನೈದು ವರುಷ ಕಾಯಿಸಿ ಬಂದ ಮಗನಿಗಾಗಿ ಅಮ್ಮ ಮಾಡುವ ಮೀನು ಸಾರು ಮಾಡುವಾಗಿನ ಹಾಡು, ನೋಡುವವರ ಕಣ್ಣನ್ನು ಒದ್ದೆ ಮಾಡದಿದ್ದರೆ ಆ ಪಶ್ಚಿಮ ಘಟ್ಟದ ಅಘನಾಶಿನಿಯ ಮೇಲಾಣೆ!. 
ಘಟ್ಟದೋರ ಭಾಷೆ, ಸಂಸ್ಕೃತಿ ಎಲ್ಲೆಲ್ಲೂ ಮಿಸ್ ಆಗದಂತೆ ಸಾಗಿಸಿಕೊಂಡು ಹೋಗುತ್ತದೆ. ಪಾತ್ರಗಳು ತಮ್ಮ ಔಚಿತ್ಯವನ್ನು ತೋರಿಸಿ ಹೊಗುತ್ತವೆ. ಚೆನ್ನಾಗಿ ಮಾತನಾಡಲು ಬರುತ್ತಿದ್ದರೂ, ಒಂದೂ ಡೈಲಾಗ್ ಇಲ್ಲದೇ ನಮ್ಮ ಹಿರೋಯಿನ್ ಇಲ್ಲಿ ಭಾವನೆಗಳೊಂದಿಗೆ ತುಂಬಾನೇ ಮಾತಾಡುವಲ್ಲಿ ಸಮರ್ಥಳಾಗಿದ್ದಾಳೆ. ಯಾವುದೊಂದು ಪಾತ್ರವೂ ಅನವಶ್ಯಕ ಅನಿಸುವದಿಲ್ಲ. ವಿಭಿನ್ನ ಮತ್ತು ಯೂನಿಕ್ ಭಾಷೆಯ ಏರಿಳಿತಗಳು, ಭಾವನೆಗಳ ಹೊಯ್ದಾಟಗಳು, ಊರಲ್ಲೇ ಸಣ್ಣ  ದುಷ್ಟನಿಗೆ ಇಷ್ಟ, ನಿಷ್ಠ ಭಂಟನಾದ ರಿಚ್ಚಿ ಮತ್ತವನ ಸಂಗಡಿಗರ ಅಭಿನಯ, ಅಭಿನಯ ಎನಿಸುವುದೇ ಇಲ್ಲ. ರಿಚ್ಚಿ ವಿಶಿಷ್ಟ ಮ್ಯಾನರಿಸಂ ನಿಂದ ಇಷ್ಟವಾಗತೊಡಗುತ್ತಾನೆ. ಹುಲಿ ವೇಷ, ದೊಟ್ಟಾಟಗಳು ನಮ್ಮನ್ನ ಕರಾವಳಿ ಲೋಕದ ವಿಹಂಗಮ ನೋಟವನ್ನು ತೋರಿಸುತ್ತದೆ. 
ಅಲ್ಲೊಬ್ಬ ಹಡಗು ರೀಪೇರಿ ಮಾಡುವವ, ಅವಳ ಲೋಕದಲ್ಲೇ ಡ್ಯುಯಟ್ ಹಾಡುವ ಕನಸು ಕಾಣುವವನೊಬ್ಬ, ರಿಚ್ಚಿಯೇ ಅವಳ ಅಣ್ಣನನ್ನು ಮುಗಿಸಿದನೆಂದು ತಿಳಿದು ರಿಚ್ಚಿಯನ್ನು ಏನು ಮಾಡುತ್ತಾನೆ? ಸಿನಿಮಾ ನೋಡಿಬಿಡಿ.
ಅವರಿವರು ಈ ಕಥೆಯನ್ನು ಹೇಗೆ ಕಂಡರು ಎಂಬುದನ್ನು ಅದ್ಭುತ ಎನ್ನದಿದ್ದರೂ ನೈಜತೆಯಿಂದ ಕಣ್ಣು ತುಂಬಿಕೊಳ್ಳೋದು ಪತ್ರಕರ್ತೆ ಶೀತಲ್. ಆಕೆ ಚಾಪ್ಟರ್ ವೈಸ್ ಕಥೆಯನ್ನು ಕನ್ವೆ ಮಾಡುವ ವಕ್ತಾರೆ. ಎಷ್ಟು ಚೆನ್ನಾಗಿದ್ದಾಳೋ ಅಷ್ಟೇ ಚೆನ್ನಾಗಿ  ನಟಿಸಿದ್ದಾಳೆ. ಕೊನೆಗೆ ಕಥೆಯ ಲಾಜಿಕ್ ಬಗ್ಗೆ ಮಾತಾಡುತ್ತಾಳೆ.
ಸಂಗೀತ ಮೆಲುಕು ಹಾಕುವಂತಿದೆ. ಘಟ್ಟದ ಮೇಲೆ ಹಾಡು ಸಿನಿಮಾ ಮುಗಿದ ಮೇಲೂ ಗುನುಗುವಂತೆ ಮಾಡುತ್ತದೆ.
ರಕ್ಷಿತ್ ಸಾರಿ ಸಾರಿ ರಿಚ್ಚಿ ಮತ್ತು ಟೀಮ್ ಗೆ ತಲೆ ಕೆಡಿಸಿದ್ದಕ್ಕೆ ಥ್ಯಾಂಕ್ಸ್ ಮತ್ತು ಕಂಗ್ರಾಟ್ಸ್ ಮಾರಾಯ ಸ್ಸಾವು!

ಡಾ ಅಶೋಕ ಪಾಟೀಲ
   
      

Advertisement

0 comments:

Post a Comment

 
Top