ಮತದಾರರಲ್ಲಿ ನೈತಿಕ ಮತದಾನದ ಬಗ್ಗೆ ಅರಿವು ಮೂಡಿಸಲು ಕೊಪ್ಪಳ ಜಿಲ್ಲೆಯ ಆಟೋರಿಕ್ಷಾಗಳು, ಕಿಷ್ಕಿಂದ ನಗರ ಸಾರಿಗೆ ಬಸ್‌ಗಳು ಸಹ ಜಿಲ್ಲಾಡಳಿತದೊಂದಿಗೆ ಸಾಥ್ ನೀಡಿದ್ದು, ಮತದಾರರ ಜಾಗೃತಿಗೆ ಮುಂದಾಗಿವೆ.
ಗ್ರಾಮೀಣ ಪ್ರದೇಶಗಳಿಗಿಂತಲೂ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲೇ ಮತದಾನ ಪ್ರಮಾಣ ಕಡಿಮೆ ಇರುವುದಾಗಿ ಹಿಂದಿನ ಚುನಾವಣೆಯ ಅಂಕಿ-ಅಂಶಗಳು ಹೇಳುತ್ತವೆ. ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವುದು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿದ್ದು, ನಗರವಾಸಿಗಳು ಮತದಾನದ ದಿನದಂದು ಮತಗಟ್ಟೆಗೆ ಆಗಮಿಸಿ ತಮ್ಮ ಅಮೂಲ್ಯ ಮತ ಚಲಾಯಿಸುವಂತಾಗಬೇಕು ಎನ್ನುವುದು ಜಿಲ್ಲಾಡಳಿತದ ಆಶಯ. ಈ ನಿಟ್ಟಿನಲ್ಲಿ ನಗರವಾಸಿಗಳಲ್ಲಿ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಟೋರಿಕ್ಷಾಗಳ ಮೂಲಕ ಮತದಾರರ ಜಾಗೃತಿ ಸಂದೇಶ ತಲುಪಿಸಲು ಕ್ರಮ ಕೈಗೊಂಡಿದ್ದು, ಇದೀಗ ಕೊಪ್ಪಳ ನಗರದ ಆಟೋರಿಕ್ಷಾ ಮಾಲೀಕರು, ಆಟೋ ಚಾಲಕರು ಜಾಗೃತಿ ಸ್ಟಿಕರ‍್ಸ್‌ಗಳನ್ನು ತಮ್ಮ ಆಟೋರಿಕ್ಷಾಗಳು ಸ್ವಯಂ ಪ್ರೇರಣೆಯಿಂದ ಅಳವಡಿಸುವ ಮೂಲಕ ಜಿಲ್ಲಾ ಸ್ವೀಪ್ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಯೋಚಿಸಿ, ಸೂಕ್ತ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸಿ ಎನ್ನುವ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ’ನಿಮ್ಮ ಆಯ್ಕೆ ಸೂಕ್ತವಾಗಿರಲಿ, ಯೋಚಿಸಿ ಮತ ಚಲಾಯಿಸಿ’, ಆಮಿಷಕ್ಕೆ ಒಳಗಾಗದಿರಿ ಎಂಬ ಹಿತನುಡಿಯ ಸ್ಟಿಕರ‍್ಸ್ ’ಮತದಾನ ಮಾಡಿದವನೆ ಮಹಾಶೂರ’ ಎನ್ನುತ್ತ ದಂಪತಿಗಳು ಕಿರು ನಗೆ ಬೀರುತ್ತಿರುವ ಸ್ಟಿಕರ‍್ಸ್, ’ಜನಸಾಮಾನ್ಯರ ಶಕ್ತಿ- ಮತ ಚಲಾವಣೆ’ ಎನ್ನುತ್ತ ಸಾಮಾನ್ಯ ರೈತನೊಬ್ಬ ತನ್ನ ಹಕ್ಕು ಚಲಾಯಿಸುವ ಕುರಿತು ಜಾಗೃತಿ ಮೂಡಿಸುವ ಕಾರ್ಟೂನ್, ’ನಿಮ್ಮ ನಡೆ- ಮತಗಟ್ಟೆಯ ಕಡೆ’ ಎನ್ನುವ ಕಾರ್ಟೂನ್‌ಗಳ ಸ್ಟಿಕರ‍್ಸ್ ಗಳನ್ನು ಆಟೋರಿಕ್ಷಾಗಳ ಸಹಕಾರದೊಂದಿಗೆ ಮತದಾರರ ಜಾಗೃತಿ ಸಂದೇಶಗಳು ನಗರವಾಸಿಗಳಿಗಳಿಗೆ ತಲುಪಿಸಲಾಗುತ್ತಿದೆ.
ಮತದಾರರ ಜಾಗೃತಿಗೆ ಎಲ್ಲ ಆಟೋರಿಕ್ಷಾ ಚಾಲಕರು, ನಗರ ಸಾರಿಗೆ ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಈ ಮತದಾರರ ಜಾಗೃತಿಯ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸಹಕರಿಸುವಂತೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿದರು. ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ, ಸಾರಿಗೆ ಇಲಾಖೆ ಮೋಟಾರು ವಾಹನ ನಿರೀಕ್ಷಕ ವಸಂತಕುಮಾರ್, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನರಾವ್ ಸೇರಿದಂತೆ, ದೈಹಿಕ ಶಿಕ್ಷಕರುಗಳು, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 comments:
Post a Comment