‘‘ನರೇಂದ್ರ ಮೋದಿಯನ್ನು ಟೀಕಿಸುವವರಿಗೆ ಭಾರತದಲ್ಲಿ ಜಾಗವಿಲ್ಲ. ಅವರೆಲ್ಲ ಪಾಕಿಸ್ತಾನಕ್ಕೆ ಹೋಗಲಿ’’ ಎಂದು ಬಿಹಾರದ ಬಿಜೆಪಿ ನಾಯಕ ನವಾಡ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗಿರಿರಾಜ್ ಸಿಂಗ್ ಹೇಳಿದ್ದಾರೆ. (ಇಂಥವರು ಬಹುವಚನಕ್ಕೆ ಅರ್ಹರಲ್ಲ) ಇದು ಗಿರಿರಾಜ ಸಿಂಗ್ ಒಬ್ಬನ ಹೇಳಿಕೆಯಲ್ಲ. ಸಂಘ ಪರಿವಾರದ ಭೂತಬಡಿದುಕೊಂಡ ಬಿಜೆಪಿ ಒಳಗಿನ, ಹೊರಗಿನ ಅನೇಕರ ಅಸಹನೆಯ ಆಕ್ರೋಶ ಈ ರೀತಿ ವ್ಯಕ್ತವಾಗುತ್ತದೆ. ಇದು ಮಾತಲ್ಲ, ಅನೇಕ ಕಡೆ ಕೃತಿಯಲ್ಲೀ ಕಂಡು ಬರುತ್ತಿದೆ.
‘ಆಮ್ ಆದ್ಮಿ’ ನಾಯಕ ಅರವಿಂದ್ ಕೇಜ್ರಿವಾಲ್ ಈಗಾಗಲೇ ಈ ಕೋಮುವಾದಿ ಗೂಂಡಾಗಳಿಂದ ನಿತ್ಯವೂ ಏಟು ತಿನ್ನುತ್ತಿದ್ದಾರೆ. ದಿಲ್ಲಿಯಲ್ಲಿ, ಗುಜರಾತಿನಲ್ಲಿ, ವಾರಣಾಸಿಯಲ್ಲಿ ಅವರ ಮೇಲೆ ಹಲ್ಲೆ ನಡೆದಿವೆ. ‘ಚುನಾವಣೆ ನಂತರ ಈ ದಾಳಿ ಇನ್ನಷ್ಟು ತೀವ್ರಗೊಳ್ಳಲಿದೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕೇಜ್ರಿವಾಲ್ ಮಾತ್ರವಲ್ಲ, ಯಾವುದೇ ರಾಜಕಾರಣಿಯಾಗಲಿ, ಸಾಹಿತಿಯಾಗಲಿ ಈಗ ಮೋದಿಯನ್ನು ಟೀಕಿಸಿ ಸುರಕ್ಷಿತವಾಗಿ ಇರಲು ಸಾಧ್ಯವಿಲ್ಲ.
ಆದರೂ ಸುರಕ್ಷತೆಗಾಗಿ, ಭದ್ರತೆಗಾಗಿ ಮೋದಿ ಪ್ರಧಾನಿಯಾಗಬೇಕೆಂದು ಮಾಧ್ಯಮ ವರ್ಗದ ಅನಿಸಿಕೆಯಾಗಿದೆ. ಮೇಲ್ಜಾತಿಯ ಮಧ್ಯಮ ವರ್ಗಗಳು ಮೋದಿಯಲ್ಲಿ ಅವತಾರ ಪುರುಷನನ್ನು ಕಾಣುತ್ತಿದ್ದಾರೆ. ಅಂತಲೆ ಮೋದಿ ಛಾಯಾಚಿತ್ರದ ಟೀ ಶರ್ಟುಗಳು, ವೌಸ್‌ಗಳು, ಚಹ ಕಪ್ಪುಗಳು, ಬನಿಯನ್‌ಗಳು ಮಾರುಕಟ್ಟೆಯಲ್ಲಿ ಬಂದಿವೆ. ಈ ದೇಶದ 125 ಕೋಟಿ ಜನರಲ್ಲಿ ಇಲ್ಲದ ಸಾಮರ್ಥ್ಯ ಮೋದಿಯಲ್ಲಿದೆ ಎಂದು ನಂಬಿಸುವ ಹುನ್ನಾರ ನಡೆದಿದೆ.
ಮೋದಿ ವಿರೋಧಿಗಳಿಗೆ ಭಾರತದಲ್ಲಿ ಜಾಗವಿಲ್ಲ ಎಂದು ಬಿಹಾರದ ಬಿಜೆಪಿ ನಾಯಕ ಹೇಳಿದ ಮಾತ್ರಕ್ಕೆ ಅದು ಪಕ್ಷದ ಅಭಿಪ್ರಾಯವಲ್ಲ, ಸಂಘದ ಅಭಿಪ್ರಾಯವಲ್ಲ ಎಂದು ಜಾರಿಕೊಳ್ಳಲು ಬಿಜೆಪಿ ಯತ್ನಿಸುತ್ತಿದೆ. ಆದರೆ ಇದು ಬರೀ ಒಬ್ಬಿಬ್ಬರ ಇಂಗಿತವಲ್ಲ. ದೇಶದ ಪ್ರಧಾನಿಯಾಗಲು ಹೊರಟಿರುವ ನರೇಂದ್ರ ಮೋದಿಯು ಆ್ಯಂಟನಿ, ಕೇಜ್ರಿವಾಲ್‌ರನ್ನು ಪಾಕಿಸ್ತಾನದ ಬೆಂಬಲಿಗರೆಂದು ಕರೆದಿದ್ದರು. ಈ ದೇಶದ ಬಡತನ, ನಿರುದ್ಯೋಗ, ಕುಡಿಯುವ ನೀರಿನ ಅಭಾವ, ವಿದ್ಯುತ್ ಸಮಸ್ಯೆ, ವಿದೇಶಿ ಸಾಲ ಎಲ್ಲವೂ ಮೋದಿ ಪ್ರಧಾನಿಯಾದ ಕ್ಷಣದಲ್ಲಿ ಪರಿಹಾರವಾಗುತ್ತದೆ ಎಂದು ಕಾರ್ಪೊರೇಟ್ ತೂತ್ತೂರಿಗಳು ಒದರುತ್ತಿವೆ.
ಮೋದಿಯನ್ನು ವಿಕಾಸ ಪುರುಷ ಎಂದು ಬಿಂಬಿಸುತ್ತಿವೆ. ಕಳೆದ ವರ್ಷ ಕೇದಾರನಾಥದಲ್ಲಿ ನಡೆದ ಪ್ರವಾಹದ ಸಂದರ್ಭದಲ್ಲಿ ಹನುಮಂತ ಲಂಕೆಗೆ ಹಾರಿದಂತೆ ಮೋದಿ ಉತ್ತರಖಂಡಕ್ಕೆ ಹಾರಿ ಸಾವಿರಾರು ಜನರನ್ನು ರಕ್ಷಿಸಿದ ಎಂಬ ಕಟ್ಟುಕತೆಯನ್ನು ನಂಬಿಸುವ ಹುನ್ನಾರ ನಡೆಯಿತು. ತೊಂಬತ್ತರ ದಶಕದ ಕೊನೆಯಲ್ಲಿ ಭಾರತದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಗಣಪತಿಗೆ ಹಾಲು ಕುಡಿಸಿದ ಈ ವಂಚಕ ಪಡೆ ಮೋದಿಯನ್ನು ಅವತಾರ ಪುರುಷ ಎಂದು ಬಿಂಬಿಸುತ್ತಿರುವುದರಲ್ಲಿ ಅಚ್ಚರಿಯೇನೂ ಇಲ್ಲ.
2009ರ ಲೋಕಸಭೆ ಚುನಾವಣೆಯಲ್ಲಿ ಎಲ್.ಕೆ.ಅಡ್ವಾಣಿಯನ್ನು ಇದೇ ಜನ ‘ಲೋಹಪುರುಷ್’ ಎಂದು ಪ್ರಚಾರ ಮಾಡಿದವು. ಆ ಲೋಹ ಪುರುಷ ಈಗ ತುಕ್ಕು ಹಿಡಿದು ಬಿದ್ದಿದ್ದಾರೆ. ಕಾರ್ಪೊರೇಟ್ ಸುದ್ದಿ ಮಾಧ್ಯಮಗಳು ಈ ವಿಕಾಸ ಪುರುಷನನ್ನು ಮುಂದಿನ ಪ್ರಧಾನಿ ಎಂದು ಈಗಾಗಲೇ ನಂಬಿಸಿ ಬಿಟ್ಟಿವೆ. ಮೋದಿ ಸಂಪುಟದಲ್ಲಿ ಸಚಿವರಾಗುವವರು ಹೊಸ ಉಡುಪುಗಳನ್ನು ಖರೀದಿಸಿ ತಯಾರಾಗಿದ್ದಾರೆ. ಈ ಪ್ರಚಾರದಿಂದ ದಿಕ್ಕು ತಪ್ಪಿದ ಕಾಂಗ್ರೆಸ್ ಕೂಡ ಈಗ ಸತ್ವಹೀನವಾಗಿ ಸೋಲಿನ ಮೂಡ್‌ನಲ್ಲಿದೆ. ಎಡಪಕ್ಷಗಳು ಸಂಪೂರ್ಣ ಮೂಲೆಗೊತ್ತಲ್ಪಟ್ಟಿವೆ.
‘‘ಮೋದಿಯ ಬಗ್ಗೆ ಎಷ್ಟೆಲ್ಲ ಬರೆಯುತ್ತೀರಿ’’ ಎಂದು ಕೆಲ ಸ್ನೇಹಿತರು ಕೇಳಿದ್ದಾರೆ. ಸುತ್ತಲಿನ ಎಲ್ಲದನ್ನು ಸುಡುವ ದಳ್ಳುರಿಯನ್ನು ಆರಿಸುವ ವರೆಗೆ ನೀರು ಹಾಕಲೇಬೇಕಾಗುತ್ತದೆ. ಒಂದು ಬರಹದಿಂದ ಈ ದಳ್ಳುರಿಯನ್ನು ನಂದಿಸಲು ಸಾಧ್ಯವಿಲ್ಲ. ಆದರೆ ಬೆಂಕಿ ನಂದಿಸುವಾಗ ಒಂದು ಬಕೆಟ್ ನೀರು ಕೂಡ ಉಪಯೋಗವಾಗುತ್ತದೆ ಎಂಬುದನ್ನು ಮರೆಯಬಾರದು. ಮೋದಿ ಗೆದ್ದರೆ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ ಸರಕಾರ ಬರುತ್ತದೆ ಎಂದು ಮೇಲ್ವರ್ಗಗಳ ಕಾರ್ಪೊರೇಟ್ ಬಂಡವಾಳಿಗರು ಸಂಭ್ರಮಪಡುತ್ತಿದ್ದರೆ, ಇನ್ನೊಂದೆಡೆ ಗುಜರಾತ್ ಹತ್ಯಾಕಾಂಡ ಮಾತ್ರವಲ್ಲ ಇತ್ತೀಚಿನ ಮುಝಫ್ಫರ್‌ನಗರ ಕೋಮುದಂಗೆಯನ್ನು ನೆನಪು ಮಾಡಿಕೊಳ್ಳುವ ಅಲ್ಪಸಂಖ್ಯಾತ ಸಮುದಾಯದ ಜನರಲ್ಲಿ ಅಭದ್ರತೆಯ ಭಾವನೆ ಮೂಡಿದೆ.
ಸುಭದ್ರ ಸರಕಾರದ ಹೆಸರಿನಲ್ಲಿ ತಮ್ಮ ಬದುಕು ಎಲ್ಲಿ ಛಿದ್ರವಾಗುತ್ತದೋ ಎಂದು ಆತಂಕ ಉಂಟಾಗಿದೆ. ಈ ಅಂಕಣ ಬರಹ ಬರೆಯುವಾಗಲೇ ಶೃಂಗೇರಿಯಲ್ಲಿ ನಕ್ಸಲ್ ನಿಗ್ರಹ ಪಡೆಯ ಗುಂಡಿಗೆ ಮುಸ್ಲಿಂ ತರುಣನೊಬ್ಬ ಬಲಿಯಾದ ಸುದ್ದಿ ಬಂದಿದೆ. ಒಂದೆಡೆ ಪೊಲೀಸರ ಪೈಶಾಚಿಕತೆ ಎದ್ದು ಕಾಣುತ್ತಿದೆ.
ಅದಕ್ಕಿಂತಲೂ ಅಮಾನವೀಯ ಹೇಯ ಘಟನೆ ಅಂದರೆ ಗುಂಡಿಗೆ ಬಲಿಯಾದ ಕಬೀರ್ ಎಂಬ ಯುವಕನ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಲು ಬಂದಿದ್ದ ಸಂಬಂಧಿಕರ ವಾಹನದ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಅಲ್ಪಸಂಖ್ಯಾತರ ಮೇಲೆ ಈ ರೀತಿ ಹಲ್ಲೆಯಾಗುತ್ತಿದೆ. ಇನ್ನು ಆ ‘ವಿಕಾಸ ಪುರುಷ’ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರ ಗತಿಯೇನು? ದೇಶದ ಹೆಬ್ಬಾಗಿಲಲ್ಲಿ ಫ್ಯಾಸಿಸಂ ಬಂದು ನಿಂತಿರುವಾಗ ಅದನ್ನು ಹಿಮ್ಮೆಟ್ಟಿಸಲು ದಣಿವಿಲ್ಲದೆ ಹೋರಾಡಲೇ ಬೇಕಾಗುತ್ತದೆ. ‘ - Varthabharati
0 comments:
Post a Comment