PLEASE LOGIN TO KANNADANET.COM FOR REGULAR NEWS-UPDATES

ಸಂವಿಧಾನಶಿಲ್ಪಿ,ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ ಅವರು ಭಾರತದ ಆತ್ಮಗೌರವದ ಪ್ರತೀಕ , ಸ್ವಾಭಿಮಾನದ ಸಾಕ್ಷಿಪ್ರಜ್ಞೆ ಎಂದು ಹೊಸಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ವೆಂಕಟೇಶ ಹೇಳಿದರು.
ಅವರು ಹೊಸಪೇಟೆಯ ಆಕಾಶವಾಣಿ ಕೇಂದ್ರದಲ್ಲಿ ಮಂಗಳವಾರ ಆಯೋಜಿಸಿದ್ದ ಡಾ.ಅಂಬೇಡ್ಕರ ಅವರ ೧೨೩ ನೇ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಅಂಬೇಡ್ಕರರ ಜೀವನವೇ ಒಂದು ಸ್ವಾಭಿಮಾನದ ಪ್ರಯಾಣ. ಬುದ್ಧ, ಹನ್ನೆರಡನೇ ಶತಮಾನದ ಶರಣರು, ಹದಿನೈದನೇ ಶತಮಾನದ ದಾಸರು ಕ್ರಮಿಸಿದ ಹಾದಿ ಹಾಗೂ ಕಂಡ ಕನಸುಗಳಿಗೆ ಇಪ್ಪತ್ತನೇ ಶತಮಾನದಲ್ಲಿ ಜೀವ ತುಂಬಿದವರು ಡಾ.ಅಂಬೇಡ್ಕರ. ಅಂಬೇಡ್ಕರ ಅವರ ವ್ಯಕ್ತಿತ್ವ ತತ್ವಶಾಸ್ತ್ರ, ಅರ್ಥಶಾಸ್ತ್ರ, ರಾಜಕೀಯ,ಪತ್ರಿಕೋದ್ಯಮ ,ಕಾನೂನು ಹೀಗೆ ವಿವಿಧ ಆಯಾಮಗಳಲ್ಲಿ ಹರಡಿಕೊಂಡಿದೆ. ಅವರನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೇ ನೋಡಬೇಕು. ಅಂಬೇಡ್ಕರ್ ಚರಿತ್ರೆಯನ್ನು ಇತಿಹಾಸಕಾರರು ಮನ ಬಂದಂತೆ ಚಿತ್ರಿಸಿದ್ದಾರೆ. ಅಂಬೇಡ್ಕರ್ ಬಹುದೊಡ್ಡ ರಾಷ್ಟ್ರೀಯವಾದಿಯಾಗಿದ್ದರು. ಸ್ವಾತಂತ್ರ್ಯದ ಜೊತೆಗೆ ದಲಿತರು ಮತ್ತು ಮಹಿಳೆಯರ ಸ್ಥಾನಮಾನ, ಹಕ್ಕುಗಳಿಗಾಗಿ ಅವರು ದನಿ ಎತ್ತಿದರು. ಸಂವಿಧಾನ ಕರಡು ರಚನೆಯ ಸಂದರ್ಭದಲ್ಲಿ ಅವರು ನಿರ್ವಹಿಸಿದ ಹೊಣೆಗಾರಿಕೆ, ಪಟ್ಟ ಶ್ರಮ ಮಹತ್ವದ್ದು. ಬೌದ್ಧ ಧರ್ಮವನ್ನು  ಪ್ರಜ್ಞಾಪೂರ್ವಕವಾಗಿ ಅವರು ಸ್ವೀಕರಿಸಿದರು. ಇದರ ಹಿಂದೆ ಸ್ವಾಭಿಮಾನ ಮತ್ತು ದೇಶಪ್ರೇಮ ಎರಡರ ಸಮೀಕರಣ ಇದೆ ಎಂದರು. 
ಹೊಸಪೇಟೆ ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಕೆ. ವೆಂಕಟೇಶ ಮಾತನಾಡಿ, ಅಂಬೇಡ್ಕರ್ ಕೇವಲ ದಲಿತ ನಾಯಕರಲ್ಲ. ಅವರು ಬರೆದ ಸಂವಿಧಾನ ದೇಶದ ಎಲ್ಲರ ಒಳಿತಿಗಾಗಿ ಇದೆ. ಕಾನೂನನ್ನು ಎಲ್ಲರೂ ಪಾಲಿಸುವ, ಗೌರವಿಸುವ ಗುಣ ಬೆಳೆಸಿಕೊಳ್ಳಬೇಕೆಂದರು. 
ಹೊಸಪೇಟೆ ದೂರದರ್ಶನ ಮರು ಪ್ರಸಾರ ಕೇಂದ್ರದ ಉಪನಿರ್ದೇಶಕ ಮೋಹನ ಸುಧಾಕರ, ಸಹಾಯಕ ಇಂಜಿನೀಯರ್ ಪ್ರೇಮಾನಂದ ದೆರ್ಲ, ಕಾರ್ಯಕ್ರಮ ನಿರ್ವಾಹಕ ಗಿರೀಶ್ ವಿ. ಪಾಟೀಲ್, ಎಸ್‌ಸಿ/ಎಸ್ಟಿ ನೌಕರರ ಸಂಘದ ಉಪಾಧ್ಯಕ್ಷ ವಿ. ರಾಮಾಂಜನೇಯಲು ಮತ್ತಿತರರು ಮಾತನಾಡಿದರು. 
ಪ್ರತಿಭಾವಂತ ವಿದ್ಯಾರ್ಥಿಗಳಾದ ಗಾಳೆಮ್ಮ ಬಸವರಾಜ ಹಾಗೂ ಸೆಲ್ವ ಪ್ರಕಾಶ್ ಅವರಿಗೆ ಪುರಸ್ಕರಿಸಿ ಗೌರವಿಸಲಾಯಿತು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಕೆ. ಅರುಣ ಪ್ರಭಾಕರ ಮಾತನಾಡಿ, ಅಂಬೇಡ್ಕರ್ ಕಂಡ ಕನಸುಗಳನ್ನ ಎಲ್ಲರೂ ಸಾಕಾರಗೊಳಿಸಬೇಕು. ಸಾಮಾಜಿಕ ಸಮಾನತೆ ತರಲು ಶ್ರಮಿಸಬೇಕು ಎಂದರು. 
ಆಕಾಶವಾಣಿಯ ಟಿ. ರತ್ನವೇಲು, ಪಿ.ಹೆಚ್. ಹುಯಿಲಗೋಳ, ಉಮಾ ವೆಂಕಟೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಕುಮಾರಿ ಚೇತನಾ ಎಂ. ಐಲಿ. ಪ್ರಾರ್ಥಿಸಿದರು. ಕಾರ್ಯಕ್ರಮ ನಿರ್ವಾಹಕ ಬಿ. ಸಿದ್ದಣ್ಣ ಸ್ವಾಗತಿಸಿದರು, ಹೆಚ್. ಪಿ. ಕಲ್ಲಂಭಟ್ ನಿರೂಪಿಸಿದರು. ಪ್ರಸಾರ ನಿರ್ವಾಹಕ ಮಂಜುನಾಥ ಡೊಳ್ಳಿನ್ ವಂದಿಸಿದರು. 

ಫೋಟೋ ವಿವರ 
೧ ಹೊಸಪೇಟೆ ಆಕಾಶವಾಣಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ೧೨೩ ನೇ ಜಯಂತಿಗೆ ಪ್ರಾಧ್ಯಾಪಕ ಡಾ. ಕೆ. ವೆಂಕಟೇಶ್ ಚಾಲನೆ ನೀಡಿದರು. ಇತರ ಗಣ್ಯರನ್ನು ಚಿತ್ರದಲ್ಲಿ ಕಾಣಬಹುದು.  

Advertisement

0 comments:

Post a Comment

 
Top