ಬಳ್ಳಾರಿ ಮಾ.೨: ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಮನಸ್ಸುಗಳನ್ನು ಮತ್ತೇ ಒಂದುಗೂಡಿಸುವ ಶಕ್ತಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ, ವಿದ್ವಾಂಸ ಡಾ.ಸಿ.ವೀರಣ್ಣ ಅವರು ತಿಳಿಸಿದರು.
ಅವರು ಸ್ಥಳೀಯ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರದಂದು ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಸ್ಕೃತಿ ಸಂಭ್ರಮ ಹಾಗೂ ಡಾ.ಎಚ್.ಎನ್. ಪ್ರಶಸ್ತಿ, ವೈದ್ಯಸೇವಾ ರತ್ನ, ಭರಣಿಶ್ರೀ ಹಾಗೂ ಡಾ.ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ಯಾತೀತ, ಧರ್ಮತೀತವಾಗಿ ಒಳ್ಳೆಯ ಗುಣ, ಸೇವಾ ಮನೋಭಾವ ಹೊಂದಿರುವ ಸಾಧಕರು, ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಹಾಗೂ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮನಸ್ಸುಗಳನ್ನು ಒಂದುಗೂಡಿಸುವ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನ ಸಂಸ್ಥೆಗಳ ಕಾರ್ಯ ಮಾದರಿ ಎಂದು ಶ್ಲಾಘಿಸಿಸದರು.
ಮೌಡ್ಯದ ವಿರುದ್ಧ ಸತತ ಹೋರಾಟ ನಡೆಸಿದ ಶಿಕ್ಷಣ ತಜ್ಞ ಡಾ. ಎಚ್. ನರಸಿಂಹಯ್ಯ (ಡಾ. ಎಚ್. ಎನ್) ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಅಗತ್ಯವಿದೆ. ವಿಜ್ಞಾನವನ್ನು ಕಲಿಯುವುದು ಮಾತ್ರವಲ್ಲ , ವೈಚಾರಿಕ, ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದ ಡಾ. ವೀರಣ್ಣ ಅವರು, ಡಾ.ಎಚ್. ಎನ್ ಅವರ ಜೊತೆ ಒಡನಾಡಿದ ದಿನಗಳನ್ನು ಮೆಲುಕು ಹಾಕಿದರು.
ಮಾಧ್ಯಮ ಪ್ರತಿನಿಧಿಗಳಿಗೆ ಅಂಬೇಡ್ಕರ್ ಹೆಸರಿನಲ್ಲಿ ಮಾಧ್ಯಮ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಅಂಬೇಡ್ಕರ್ ವಿಚಾರಧಾರೆಗಳನ್ನು ಬಿಂಬಿಸುವ ಕೈಪಿಡಿಗಳನ್ನು ಸರಕಾರ, ಸಂಘ ಸಂಸ್ಥೆಗಳು ಪ್ರಕಟಿಸಿ ಕಡಿಮೆ ಬೆಲೆಯಲ್ಲಿ ಓದುಗರಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಡಾ ಎಚ್.ಎನ್. ಪ್ರಶಸ್ತಿ ಸ್ವೀಕರಿಸಿ ಪುರಸ್ಕೃತರ ಪರವಾಗಿ ಮಾತನಾಡಿದ ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಚ್.ಟಿ.ಪೋತೆ, ತಾವು ಹೆಸರಾಂತ ಜನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ ಅವರಿಂದ ಪ್ರಶಸ್ತಿ ಗೌರವ ಪಡೆದಿರುವುದು ಸಂತಸ ತಂದಿದೆ. ಸರ್ಕಾರ ಡಾ.ಎಚ್.ನರಸಿಂಹಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ಸ್ಥಾಪಿಸಿ ನೀಡುವ ಕಾರ್ಯ ಮಾಡಬೇಕಿತ್ತು. ಇಂತಹ ಕಾರ್ಯವನ್ನು ಸರ್ಕಾರ ಮರೆತಿದೆ. ಅಲಕ್ಷಿತ ಬರಹಗಾರರನ್ನು, ವೈದ್ಯರನ್ನು, ಕಲಾವಿದರನ್ನು, ಪತ್ರಕರ್ತರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಭರಣಿ ಸಾಂಸ್ಕೃತಿಕ ವೇದಿಕೆ ಮಾಡುತ್ತಿರುವುದು ಅಭಿನಂದನೀಯ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಚಿತ್ರ ಕಲಾವಿದ ನಾಡೋಜ ಡಾ.ವಿ.ಟಿ.ಕಾಳೆ ಅವರು ಮಾತನಾಡಿ, ನಿಸ್ವಾರ್ಥತೆಯಿಂದ ಸಮಾರಂಭ ಆಯೋಜಿಸುವ ಸಂಘ ಸಂಸ್ಥೆಗಳ ಮೌಲ್ಯ ಸಮಾಜದಲ್ಲಿ ದ್ವಿಗುಣಗೊಳಿಸುತ್ತದೆ. ಇಂತಹ ಕಾರ್ಯವನ್ನು ಸಮಾಜದಲ್ಲಿ ಭರಣಿ ಸಾಂಸ್ಕೃತಿಕ ವೇದಿಕೆ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ವಿ.ವಿ. ಪ್ರಾಧ್ಯಾಪಕ ಪ್ರೊ.ಅರವಿಂದ ಮೂಲಿಮನಿ ಆಶಯ ನುಡಿಗಳನ್ನಾಡಿದರು. ವೇದಿಕೆಯ ಮೇಲೆ ನಾಡೋಜ ಪ್ರಶಸ್ತಿ ಪುರಸ್ಕೃತರಾದ ದರೋಜಿ ಈರಮ್ಮ, ನಾಡೋಜ ಕಪ್ಪಗಲ್ಲು ಪದ್ಮಮ್ಮ, ಬಳ್ಳಾರಿ ಜಿಲ್ಲಾ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಅಧ್ಯಕ್ಷ ಯರಕುಲಸ್ವಾಮಿ, ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ವೆಂಕಟಯ್ಯ ಅಪ್ಪಗೆರೆ, ಛಲವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಜಿಂದಾಲ್ ಕೆ. ತಿಪ್ಪೇಸ್ವಾಮಿ ಮತ್ತಿತರರು ಹಾಜರಿದ್ದರು.
೨೦೧೩ನೇ ಸಾಲಿನ ಡಾ.ಎಚ್.ಎನ್.ಪ್ರಶಸ್ತಿಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಸಿ.ವೀರಣ್ಣ, ಕರ್ನಾಟಕ ವಿ.ವಿ. ಕುಲಸಚಿವ (ಮೌಲ್ಯಮಾಪನ) ಡಾ.ಎಚ್.ಟಿ.ಪೋತೆ, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪಿ.ಸತ್ಯನಾರಾಯಣರಾವ್, ಕರ್ನಾಟಕ ವಿ.ವಿ. ಪ್ರಾಧ್ಯಾಪಕ ಪ್ರೊ.ಅರವಿಂದ ಮೂಲಿಮನಿ, ಹಂಪಿ ಕನ್ನಡ ವಿ.ವಿ. ಸಹ ಪ್ರಾಧ್ಯಾಪಕ ಡಾ.ಚೆಲುವರಾಜು, ಎಎಸ್‌ಎಂ ಕಾಲೇಜಿನ ಉಪನ್ಯಾಸಕ ಡಾ.ಗೋವಿಂದರಾಜ್, ಹೊಸ ದರೋಜಿ ಸ.ಹಿ.ಪ್ರಾ.ಶಾಲೆಯ ಅಧ್ಯಾಪಕ ಸಿ ಡಿ ಗೂಳಪ್ಪ, ಹೊಸ ದೇವಲಾಪುರ ಸಹಿಪ್ರಾ ಶಾಲೆಯ ಅಧ್ಯಾಪಕಿ ಸಿ.ಎಚ್.ಎಂ.ವತ್ಸಲಾ ಅವರಿಗೆ ನೀಡಿ ಗೌರವಿಸಲಾಯಿತು.
೨೦೧೩ನೆ ಸಾಲಿನ ವೈದ್ಯಸೇವಾ ರತ್ನ ಪ್ರಶಸ್ತಿಯನ್ನು ವಿಮ್ಸ್‌ನ ವಿಶ್ರಾಂತ ಪ್ರಾಧ್ಯಾಪಕ ಡಾ.ಕರ್ಜಿಗಿ ಸಿದ್ದಲಿಂಗಪ್ಪ, ಕೊಟ್ಟೂರಿನ ಮಕ್ಕಳ ತಜ್ಞ ಡಾ.ಪಿ.ಕೆ.ವೆಂಕಟೇಶ್, ವಿಮ್ಸ್ ಸಹ ಪ್ರಾಧ್ಯಾಪಕ ಡಾ.ಸಿ.ಎಂ. ವೀರೇಂದ್ರಕುಮಾರ್, ನೇತ್ರ ತಜ್ಞ ಡಾ.ಪರಸಪ್ಪ ಬಂದರಕಳ್ಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು.
೨೦೧೨ನೇ ಸಾಲಿನ ಡಾ.ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಬೆಂಗಳೂರಿನ ಮಹೇಶ್ ಸುರ್ವೆ, ಬಿಜಾಪುರದ ಅನಿಲ್ ಹೊಸಮನಿ, ಹೊಸಪೇಟೆಯ ಪರಶುರಾಮ್ ಕಲಾಲ್, ಕೊಪ್ಪಳದ ಸಿರಾಜ್ ಬಿಸರಳ್ಳಿ, ಬಳ್ಳಾರಿ ಬೆಳಗಾಯಿತು ಪತ್ರಿಕೆಯ ಸಹ ಸಂಪಾದಕ ಅನೂಪ್ ಕುಮಾರ್ ಅವರಿಗೆ ನೀಡಿ ಸತ್ಕರಿಸಲಾಯಿತು.
೨೦೧೨ನೇ ಸಾಲಿನ ಭರಣಿಶ್ರೀ ಪ್ರಶಸ್ತಿಯನ್ನು ಬಾಲಪ್ರತಿಭೆಗಳಾದ ಸೌಮ್ಯ ಹಿರೇಮಠ, ರಂಜಿತಾ, ಕೀರ್ತಿಕಾ, ಮೌನಿಕಾ, ಹಾಗೂ ಯುವ ಪ್ರತಿಭೆ ಕಂಪ್ಲಿಯ ಚಿನ್ಮಯ ಇವರಿಗೆ ನೀಡಿ ಪ್ರೋತ್ಸಾಹಿಸಲಾಯಿತು.
ಆರಂಭದಲ್ಲಿ ಚಿನ್ಮಯ ನಾಡಗೀತೆ ಹಾಡಿದರು. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಪತ್ರಕರ್ತ ಸಿ.ಮಂಜುನಾಥ ಸ್ವಾಗತಿಸಿ ಪ್ರಾಸ್ತಾವಿಕವಾಘಿ ಮಾತನಾಡಿದರು. ಅಧ್ಯಾಪಕ ಸಯ್ಯದ್ ಹುಸೇನ್, ಯುವ ಪ್ರತಿಭೆ ವಿನೋದ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೂಡ್ಲಿಗಿ ಬಿ ಆರ್ ಸಿ ಮೈಲೇಶಿ ವಂದಿಸಿದರು.
0 comments:
Post a Comment