PLEASE LOGIN TO KANNADANET.COM FOR REGULAR NEWS-UPDATES

 ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ರೈಲ್ವೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ತಗಲುವ ವೆಚ್ಚದ ಪೈಕಿ ಶೇ. ೫೦ ರಷ್ಟು ಅನುದಾನವನ್ನು ರಾಜ್ಯ ಸರ್ಕಾರವೇ ಒದಗಿಸಲು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
     ಕರ್ನಾಟಕ ಸರ್ಕಾರ ಮತ್ತು ನೈರುತ್ಯ ರೈಲ್ವೆ ಇವರ ಸಹಯೋಗದೊಂದಿಗೆ ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಗದಗ-ವಾಡಿ ನೂತನ ರೈಲು ಮಾರ್ಗದ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
     ಗದಗ-ವಾಡಿ ರೈಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ನಮ್ಮ ಸರ್ಕಾರ ಕಾರ್ಯಗತಗೊಳಿಸಲು ಮುಂದಾಗಿದೆ.  ೨೫೨ ಕಿ.ಮೀ. ಉದ್ದದ ಈ ನೂತನ ರೈಲು ಮಾರ್ಗದ ಒಟ್ಟು ವೆಚ್ಚ ೧೯೨೨ ಕೋಟಿ ರೂ. ಗಳಾಗಿದ್ದು, ಇದರಲ್ಲಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರ ತಲಾ ಶೇ. ೫೦ ರಷ್ಟು ವೆಚ್ಚವನ್ನು ಭರಿಸಲಿವೆ.  ಅಲ್ಲದೆ ಭೂ-ಸ್ವಾಧೀನದ ಒಟ್ಟು ವೆಚ್ಚವನ್ನು ಸಹ ರಾಜ್ಯ ಸರ್ಕಾರವೇ ಭರಿಸಲಿದ್ದು, ರೈಲ್ವೆ ಇಲಾಖೆಗೆ ಸರ್ಕಾರ ಉಚಿತವಾಗಿ ಭೂಮಿ ಒದಗಿಸಿದಂತಾಗಲಿದೆ.  ಈ ಮಹತ್ವದ ಯೋಜನೆಯಿಂದ ಹುಬ್ಬಳ್ಳಿ-ಗುಂತಕಲ್ ಮತ್ತು ಮುಂಬೈ-ಚೆನ್ನೈ ಮುಖ್ಯ ಮಾರ್ಗಗಳ ನಡುವೆ ನೇರ ಸಂಪರ್ಕ ಕಲ್ಪಿಸಲಿದ್ದು, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ ಮತ್ತು ಗುಲ್ಬರ್ಗಾ ಜಿಲ್ಲೆಗಳಿಗೆ ಬಹಳಷ್ಟು ಅನುಕೂಲವಾಗಲಿದೆ.  ಈ ಮಾರ್ಗವು ಅನುಕೂಲಕರ ಮತ್ತು ಕ್ಷಿಪ್ರಗತಿಯ ರೈಲು ಸಂಪರ್ಕ ಒದಗಿಸುವುದರಿಂದ ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ನೆರವಾಗಲಿದೆ.  ಕೇಂದ್ರ ರೈಲ್ವೆ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದವರೇ ಆಗಿರುವುದರಿಂದ, ಅವರ ಚೊಚ್ಚಲ ರೈಲ್ವೆ ಬಜೆಟ್‌ನಲ್ಲಿ ಹೆಚ್ಚು, ಹೆಚ್ಚು ನೂತನ ರೈಲುಗಳು, ನೂತನ ರೈಲು ಮಾರ್ಗಗಳು ಅಲ್ಲದೆ ವಿವಿಧ ರೈಲ್ವೆ ಯೋಜನೆಗಳನ್ನು ರಾಜ್ಯಕ್ಕೆ ತರುವ ಮೂಲಕ ರೈಲ್ವೆ ಅಭಿವೃದ್ಧಿಯ ಪರ್ವವನ್ನು ಪ್ರಾರಂಭಿಸಿದಂತಾಗಿದೆ.  ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರ ಅವಿರತ ಪರಿಶ್ರಮದಿಂದಾಗಿ ಈ ರೈಲ್ವೆ ಯೋಜನೆಗೆ ಚಾಲನೆ ದೊರೆತಿದ್ದು, ಶೀಘ್ರ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.
೯೫ ಭರವಸೆಗಳ ಈಡೇರಿಕೆ : ಅನ್ನಭಾಗ್ಯ, ಕ್ಷೀರಭಾಗ್ಯ, ಮನಸ್ವಿನಿ, ಮೈತ್ರಿ, ವಿದ್ಯಾಸಿರಿ, ಬಡವರ ಸಾಲ ಮನ್ನಾ, ಪ.ಜಾತಿ/ಪ.ಪಂಗಡ ಸಮುದಾಯದವರ ಸಾಲ ಮನ್ನಾ ಸೇರಿದಂತೆ ಹತ್ತು ಹಲವು ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದ ಜನತೆಗೆ ನೀಡಿದ್ದ ಒಟ್ಟು ೧೬೫ ಭರವಸೆಗಳ ಪೈಕಿ ಈಗಾಗಲೆ ೯೫ ಭರವಸೆಗಳನ್ನು ಕೇವಲ ಕೆಲವೇ ತಿಂಗಳ ಅವಧಿಯಲ್ಲಿ ಈಡೇರಿಸಲಾಗಿದೆ.  ಉಳಿದ ಭರವಸೆಗಳನ್ನು ಸರ್ಕಾರ ಶೀಘ್ರ ಈಡೇರಿಸುವ ತವಕದಲ್ಲಿದೆ ಎಂದರು.
ಕೊಪ್ಪಳ ಏತ ನೀರಾವರಿ ೩ ವರ್ಷದಲ್ಲಿ ಪೂರ್ಣ : ಕೃಷ್ಣಾ ಮೇಲ್ದಂಡೆ ಯೋಜನೆಯಡಿ ೧೨. ೮ ಟಿ.ಎಂ.ಸಿ. ನೀರು ಈ ಭಾಗಕ್ಕೆ ಹಂಚಿಕೆ ಮಾಡಲಾಗಿದ್ದು, ಕೃಷ್ಣೆಯ ನೀರನ್ನು ತಂದು, ಇಲ್ಲಿನ ಬರಡು ಭೂಮಿಯನ್ನು ಹಸಿರು ಭೂಮಿಯನ್ನಾಗಿಸುವ ಪಣ ತೊಟ್ಟಿರುವ ಸರ್ಕಾರ, ಮಹತ್ವದ ಕೊಪ್ಪಳ ಏತನೀರಾವರಿ ಯೋಜನೆಯನ್ನು ೦೩ ವರ್ಷದೊಳಗೆ ಪೂರ್ಣಗೊಳಿಸುವ ಕಾಲಮಿತಿಯನ್ನು ಹಾಕಿಕೊಂಡಿದೆ.  ಸುಮಾರು ೧೦೫೦ ಕೋಟಿ ರೂ. ವೆಚ್ಚದ ಈ ಬೃಹತ್ ಯೋಜನೆಯಿಂದ ಬಾಗಲಕೋಟೆ, ಗದಗ ಮತ್ತು ಕೊಪ್ಪಳ ಜಿಲ್ಲೆಯ ಸುಮಾರು ೨. ೮೫ ಲಕ್ಷ ಎಕರೆ ಜಮೀನಿಗೆ ನೀರು ಹರಿಯಲಿದೆ.  ಸಾಂಪ್ರದಾಯಿಕ ನೀರಾವರಿಯ ಬದಲಿಗೆ ತುಂತುರು ನೀರಾವರಿ ವ್ಯವಸ್ಥೆಯನ್ನು ಈ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದ ರೈತರಿಗೆ ಸಮರ್ಪಕ ನೀರಾವರಿ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು
     ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಗದಗ-ವಾಡಿ ನೂತನ ರೈಲು ಮಾರ್ಗದ ಯೋಜನೆಗೆ ಚಾಲನೆ ನೀಡಬೇಕೆನ್ನುವ ಬಹುದಿನಗಳ ಬೇಡಿಕೆಯನ್ನು ಇದೀಗ ಈಡೇರಿಸಲಾಗುತ್ತಿದೆ.  ಈ ಯೋಜನೆಯಿಂದ ಮುಂಬೈ, ಚೆನ್ನೈ, ಹೈದ್ರಾಬಾದ್ ಅಲ್ಲದೆ ದೆಹಲಿಗೂ ಸಹ ಪ್ರಯಾಣಿಸಲು ಬಯಸುವ ಜಿಲ್ಲೆಯವರಿಗೆ ಅನುಕೂಲವಾಗಲಿದೆ ಅಲ್ಲದೆ ಕೈಗಾರಿಕೆಗಳ ಬೆಳವಣಿಗೆಗೂ ಪೂರಕವಾಗಲಿದೆ.  ಯಲಬುರ್ಗಾ ತಾಲೂಕಿಗೆ ಕೇವಲ ಕೆಲವೇ ತಿಂಗಳುಗಳ ಅವಧಿಯಲ್ಲಿ ಹಲವಾರು ಮಹತ್ವಪೂರ್ಣ ಯೋಜನೆಗಳನ್ನು ತರಲಾಗಿದ್ದು, ಮುಂದಿನ ನಾಲ್ಕು ವರ್ಷದಗಳಲ್ಲಿ ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ನೀರಾವರಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ವೇಗವಾಗಿ ಅಭಿವೃದ್ಧಿಯಾಗಲಿದೆ ಎಂದರು.






















.

Advertisement

0 comments:

Post a Comment

 
Top