PLEASE LOGIN TO KANNADANET.COM FOR REGULAR NEWS-UPDATES






 ಭಕ್ತ ಕನಕದಾಸರ ಜಯಂತಿ ಅಂಗವಾಗಿ ಕೊಪ್ಪಳ ನಗರದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾತಂಡಗಳು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
  ನಗರದ ಶಿರಸಪ್ಪಯ್ಯನ ಮಠದ ಆವರಣದಲ್ಲಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಪೂಜೆ ಸಲ್ಲಿಸುವ ಮೂಲಕ ಪ್ರಾರಂಭವಾದ ಮೆರವಣಿಗೆ ಈ ಬಾರಿ ಅದ್ಧೂರಿಯಾಗಿತ್ತು.  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರಪ್ಪ ಚೋರನೂರ ಅವರು ವಿಶೇಷ ಆಸಕ್ತಿ ವಹಿಸಿದ ಪರಿಣಾಮವಾಗಿ, ಮೆರವಣಿಗೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ವೈವಿಧ್ಯಮಯ ಕಲಾ ತಂಡಗಳು ಮೆರವಣಿಗೆಗೆ ರಂಗು ತುಂಬಿದ್ದವು.  ಕನಕದಾಸರ ಭಾವಚಿತ್ರವನ್ನು ಈ ಬಾರಿ ಟ್ರ್ಯಾಕ್ಟರ್ ಬದಲಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಶೇಷ ಬಸ್‌ನಲ್ಲಿ ಅಳವಡಿಸಿದ್ದು ವಿಶೇಷವಾಗಿತ್ತು.  ಬಸ್‌ಗೆ ವಿವಿಧ ಬಗೆಯ ಹೂವಿನ ಮಾಲೆಯೊಂದಿಗೆ ವಿಶೇಷ ಅಲಂಕಾರ ಮಾಡಲಾಯಿತು.  ಮೆರವಣಿಗೆಗೆ ಬಳ್ಳಾರಿ ಜಿಲ್ಲೆ ರಾಮಸಾಗರದಿಂದ ಆಗಮಿಸಿದ್ದ ವಸಂತಕುಮಾರ ನೇತೃತ್ವದ ಕಹಳೆ ವಾದನ, ಶುಭ ಕೋರುವ ರೀತಿಯಲ್ಲಿ ಮಂಗಳವಾದ್ಯ ಮೊಳಗಿಸಿದವು.  ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಲಾತಂಡಗಳ ಪೈಕಿ ಮಕ್ಕಳನ್ನಾದಿಯಾಗಿ ಎಲ್ಲರನ್ನೂ ಆಕರ್ಷಿಸಿದ್ದು, ಎಂದರೆ ಚಿತ್ರದುರ್ಗ ಜಿಲ್ಲೆಯ ಬಾಬುಸಾಹೇಬ್ ನೇತೃತ್ವದ ಮೋಜಿನ ಗೊಂಬೆಗಳು.  ಇನ್ನು ರಾಮಾಯಣದ ರಾಮ, ಸೀತೆ, ಹನುಮಂತ, ಶೂರ್ಪನಖಿ ಮುಂತಾದ ಪೌರಾಣಿಕ ವೇಷಧಾರಿಗಳನ್ನೊಳಗೊಂಡ ಸಿದ್ದಾಪುರದ ಹಗಲುವೇಷಗಾರರ ನೃತ್ಯ ಆಕರ್ಷಣೀಯವಾಗಿತ್ತು.  ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಸೊರಬದಿಂದ ಮಹಿಳಾ ಡೊಳ್ಳು ಮತ್ತು ವೀರಗಾಸೆ ತಂಡಗಳು ಮೆರವಣಿಗೆಗೆ ಕಳೆಕಟ್ಟಿದವು.  ಮಂಡ್ಯ ಜಿಲ್ಲೆಯಿಂದ ಆಗಮಿಸಿದ್ದ ದೇವರಾಜ್ ನೇತೃತ್ವದ ಪೂಜಾ ಕುಣಿತ ತಂಡದ ಕಲಾ ಪ್ರದರ್ಶನವನ್ನು ಸಾರ್ವಜನಿಕರು ಅಚ್ಚರಿಯಿಂದ ವೀಕ್ಷಿಸಿದರು.  ಉಳಿದಂತೆ ಮೆರವಣಿಗೆಯಲ್ಲಿ ಬಳ್ಳಾರಿ ಜಿಲ್ಲೆಯ ಮೋಹನ್ ಮತ್ತು ತಂಡದಿಂದ ತಾಷರಂ ಡೋಲು, ಯಲಬುರ್ಗಾ ತಾಲೂಕು ಬಿನ್ನಾಳದ ಯಮನಪ್ಪ ಭಜಂತ್ರಿ ನೇತೃತ್ವದ ಕರಡಿ ಮಜಲು, ಮರಿಯಮ್ಮನಹಳ್ಳಿಯ ಶ್ರೀರಾಮಾಂಜನೇಯ ನೇತೃತ್ವದ ಹಲಗೆ ವಾದನ, ಬಳ್ಳಾರಿ ಜಿಲ್ಲೆ ಸೊನ್ನದ ಮಲ್ಲೇಶಪ್ಪ ತಂಡದಿಂದ ಡೊಳ್ಳು ಕುಣಿತ, ಹಲಗೇರಿಯ ಗುಡದಪ್ಪ ತಂಡದಿಂದ ಡೊಳ್ಳು ಕುಣಿತ, ಕೂಡ್ಲಿಗಿ ತಾಲೂಕು ಇಮಡಾಪುರದ ತಿಪ್ಪೆಸ್ವಾಮಿ ತಂಡದಿಂದ ಉರುಮೆವಾದನ ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕಗೊಳಿಸಿದವು.  ಕೊಪ್ಪಳದ ಕಾಳಿದಾಸ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಕ್ತ ಕನಕದಾಸರ ತತ್ವಗಳ ಬಗೆಗಿನ ಫಲಕಗಳನ್ನು ಹಿಡಿದು ಮೆರವಣಿಗೆಯುದ್ದಕ್ಕೂ ಸಾಗಿದರು.  
  ಕನಕದಾಸರ ಜಯಂತಿ ಅಂಗವಾಗಿ ಈ ಬಾರಿ ಏರ್ಪಡಿಸಲಾಗಿದ್ದ ಅದ್ಧೂರಿ ಮೆರವಣಿಗೆ ಶಿರಸಪ್ಪಯ್ಯನ ಮಠದಿಂದ ಪ್ರಾರಂಭಗೊಂಡು, ಗಡಿಯಾರ ಕಂಬ, ಜವಾಹರ ರಸ್ತೆ, ಅಶೋಕ ವೃತ್ತ ಮೂಲಕ ಸಾಹಿತ್ಯ ಭವನದವರೆಗೂ ಸಾಗಿ, ಜಯಂತ್ಯೋತ್ಸವವನ್ನು ಅರ್ಥಪೂರ್ಣವನ್ನಾಗಿಸಿತು.  
  ಮೆರವಣಿಗೆಯಲ್ಲಿ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಗಣ್ಯರಾದ ಬಸವರಾಜ ಹಿಟ್ನಾಳ್, ಇಂದಿರಾ ಬಾವಿಕಟ್ಟಿ, ಶಿವಾನಂದ ಹೊದ್ಲೂರು, ಸೇರಿದಂತೆ ನಗರಸಭೆಯ ಸದಸ್ಯರುಗಳು, ಹಲವು ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top