ಆರೋಗ್ಯ ಪೂರ್ಣ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಬಚ್ಚಲು ಸಹಿತ ಶೌಚಾಲಯ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.




ಮಹಾತ್ಮಾಗಾಂಧೀಜಿಯವರ ಆಶಯ : ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಸಹ ಶೌಚಾಲಯದ ಅಗತ್ಯತೆಯ ಬಗ್ಗೆ ಎಷ್ಟು ಒತ್ತು ನೀಡಿದ್ದರೆಂದರೆ, ಅವರೇ ಹೇಳಿದಂತೆ ’ ಬಯಲು ಬಹಿರ್ದೆಸೆ ನಿವಾರಿಸುವುದು, ಶೌಚಾಲಯ ನಿರ್ಮಿಸುವುದು, ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮನ್ನು ಸ್ವರಾಜ್ಯ ಪಡೆಯಲು ಅರ್ಹರನ್ನಾಗಿಸುತ್ತದೆ’. ಗಾಂಧೀಜಿಯವರು ೮೦ ವರ್ಷಗಳ ಹಿಂದೆ ನೀಡಿದ್ದ ಸಂದೇಶವನ್ನು ಸ್ವಾತಂತ್ರ್ಯ ಬಂದರೂ, ಇನ್ನೂ ನಾವು ಅನುಷ್ಠಾನಗೊಳಿಸುವ ಹಂತದಲ್ಲೇ ಇದ್ದೇವೆ. ದೇಶದಲ್ಲಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು. ಎಲ್ಲ ಕುಟುಂಬದವರೂ ಶೌಚಾಲಯ ಹೊಂದುವ ಬಗ್ಗೆ ಪ್ರತಿಜ್ಞೆ ಮಾಡಬೇಕು. ಮಹಿಳೆಯರು, ವಯೋವೃದ್ಧರು, ಅಂಗವಿಕಲರು ಮಲವಿಸರ್ಜನೆಗಾಗಿ ಬಯಲಿಗೆ ತೆರಳಲು ಅನುಭವಿಸುವ ನರಕಯಾತನೆಯನ್ನು ಇನ್ನಾದರೂ ತಪ್ಪಬೇಕು. ಶೌಚಾಲಯದ ಅಗತ್ಯತೆ ಬಗ್ಗೆ ಜನರಿಗೆ ಮನವರಿಕೆಯಾದಾಗ ಮಾತ್ರ ರಾಜ್ಯವನ್ನು ಬಯಲುಮುಕ್ತ ರಾಜ್ಯವನ್ನಾಗಿಸಲು ಸಾಧ್ಯ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಹೇಳಿದರು.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತಿರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯ ಮಟ್ಟದ ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನಡೆಸುವ ಬದಲಿಗೆ, ಕೊಪ್ಪಳದಲ್ಲಿ ಏರ್ಪಡಿಸಿದ್ದು, ವಿಶೇಷ. ರಾಜ್ಯವನ್ನು ಬಯಲು ಮಲವಿಸರ್ಜನೆ ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ವಯಕ್ತಿಕ ಶೌಚಾಲಯ ನಿರ್ಮಿಸಲು ಫಲಾನುಭವಿಗಳಿಗೆ ೯೨೦೦ ರೂ. ಗಳ ಸಹಾಯಧನ ನೀಡುತ್ತಿದೆ. ಇದೀಗ ಪ.ಜಾತಿ ಮತ್ತು ಪ.ಪಂಗಡದ ಪ್ರತಿ ಫಲಾನುಭವಿಗೆ ೧೫೦೦೦ ರೂ. ಗಳ ಸಹಾಯಧ ನೀಡಲು ಸರ್ಕಾರ ತೀರ್ಮಾನಿಸಿದೆ. ಸಹಾಯಧನದ ಬಾಕಿ ಮೊತ್ತವನ್ನು ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಅನುದಾನದಿಂದ ಪಡೆಯಲು ನಿರ್ಧಾರ ಕೈಗೊಳ್ಳಲಾಗಿದೆ. ಶೌಚಾಲಯ ನಿರ್ಮಿಸಲು ಪ್ರೇರಣೆ ನೀಡುವವರಿಗೆ, ಪ್ರತಿ ಶೌಚಾಲಯಕ್ಕೆ ೧೫೦ ರೂ.ಗಳ ಪ್ರೇರಣಾಧನ ನೀಡಲು ಸಹಾ ನಿರ್ಧರಿಸಲಾಗಿದೆ ಎಂದರು.
ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೈರ್ಮಲ್ಯದ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ರೋಗಗಳು ಹರಡುತ್ತವೆ. ಮಹಿಳೆಯರು ಕತ್ತಲಾದ ನಂತರವೇ ರಸ್ತೆ ಬದಿಗಳಲ್ಲಿ ಮಲವಿಸರ್ಜನೆಗೆ ತೆರಳುವುದನ್ನು ರೂಢಿಯಾಗಿಸಿಕೊಂಡಿದ್ದು, ವಾಹನಗಳು ಸಂಚರಿಸಿದಾಗ, ತೊಂದರೆ ಅನುಭವಿಸುತ್ತಾರೆಯೇ ಹೊರತು, ಸರ್ಕಾರವೇ ಸಹಾಯಧನ ನೀಡಲು ಸಿದ್ಧವಿದ್ದರೂ, ಶೌಚಾಲಯ ನಿರ್ಮಿಸಿಕೊಳ್ಳಬೇಕೆಂಬ ಆಸಕ್ತ ತೋರುತ್ತಿಲ್ಲ. ಇಂತಹ ಧೋರಣೆ ಬದಲಾಗಬೇಕು. ಪ್ರತಿಯೊಂದು ಕುಟುಂಬಗಳೂ ವಯಕ್ತಿಕ ಶೌಚಾಲಯ ಹೊಂದಬೇಕು ಎಂದರು.
ಸಂಸದ ಶಿವರಾಮಗೌಡ ಅವರು ಮಾತನಾಡಿ, ಜಿಲ್ಲೆಯಲ್ಲಿ ಹಲವಾರು ಗ್ರಾಮ ಪಂಚಾಯತಿಯ ಸದಸ್ಯರುಗಳೇ ಶೌಚಾಲಯವನ್ನು ಹೊಂದದೇ ಇರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.
ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯ ಹಾಲಪ್ಪ ಆಚಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಪಾಲಾಕ್ಷಪ್ಪ ಗುಂಗಾಡಿ, ತಾ.ಪಂ. ಅಧ್ಯಕ್ಷ ಮುದೇಗೌಡ ಮಾಲಿಪಾಟೀಲ್, ರಾಜ್ಯ ನೀರು ಮತ್ತು ನೈರ್ಮಲ್ಯ ಮಿಷನ್ ನಿರ್ದೇಶಕ ನವೀನ್‌ರಾಜ್ ಸಿಂಗ್, ನಿರ್ಮಲ ಭಾರತ ಅಭಿಯಾನ್ ಯೋಜನೆ ಅಪರ ನಿರ್ದೇಶಕಿ ಮೀನಾ ನಾಗರಾಜ್, ರಾಜ್ಯ ಸಮಾಲೋಚಕರಾದ ನಾಗರತ್ನ ಭಟ್, ಜಿಲ್ಲಾ ಪಂಚಾಯತಿಯ ಸದಸ್ಯರುಗಳು, ತಾ.ಪಂ. ಸದಸ್ಯರು, ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್, ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಪಂಚಾಯತಿ ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಸ್ವಾಗತಿಸಿದರು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ. ಉದಪುಡಿ ವಂದಿಸಿದರು. ಅಮರೇಶ್ ಅವರು ಕಾರ್ಯಕ್ರಮ ನಿರೂಪಿಸಿದರು. ಹುಲಿಗಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ, ಸಿ.ಸಿ. ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಚಿವ ಹೆಚ್.ಕೆ. ಪಾಟೀಲ್ ಅವರು ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
0 comments:
Post a Comment