ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ, ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರಿಗೂ ಮಹತ್ವದ ಹೊಣೆಗಾರಿಕೆ ಇದೆ ಎಂದು ಚಿಲಕಮುಖಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ಬಾಲರಡ್ಡಿ ಅವರು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯು ತಾಲೂಕಿನ ಚಿಲಕಮುಖಿ ಗ್ರಾಮದ ಸರ್ಕಾರಿ ಪ್ರೌಢ
ಶಾಲೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
’ಶಾಲೆ’ ಎಂದರೆ ಕೇವಲ ಶಿಕ್ಷಕರು ಅಥವಾ ಮಕ್ಕಳಿಗಷ್ಟೇ ಸೀಮಿತವಲ್ಲ. ಎಲ್ಲರ ಶೈಕ್ಷಣಿಕ ಬದುಕು ಪ್ರಾರಂಭವಾಗುವುದೇ ಶಾಲೆಯಿಂದ. ಆದ್ದರಿಂದ ಯಾವುದೇ ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಶಾಲೆಗಳೂ ಸಹ ಸಮುದಾಯದ ಒಂದು ಭಾಗವೇ ಆಗಿರುವುದರಿಂದ, ಶಾಲೆಯ ಪ್ರಗತಿಗೆ ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಮಕ್ಕಳ ಕಲಿಕೆಯ ಬಗ್ಗೆ ಪೋಷಕರು ನಿಗಾ ವಹಿಸಬೇಕು. ಎಲ್ಲಾ ಮಕ್ಕಳು ತಪ್ಪದೆ ಶಾಲೆಗೆ ಬರುವಂತಾಗಬೇಕು. ಶಾಲೆಗಳಲ್ಲಿನ ಸಮಸ್ಯೆಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಮಕ್ಕಳ ಕಲಿಕೆಗೂ ಹಾಜರಾತಿಗೂ ನೇರವಾದ ಸಂಬಂಧವಿದೆ. ಈ ವಿಷಯವನ್ನು ಪೋಷಕರಿಗೆ ಮನದಟ್ಟು ಮಾಡಿಕೊಡುವುದು ಸಮುದಾಯದತ್ತ ಶಾಲೆ ಕಾರ್ಯಕ್ರಮದ ಒಂದು ಪ್ರಮುಖ ಅಂಶವಾಗಿದೆ. ಶಾಲೆಗಳಲ್ಲಿನ ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟ, ಕ್ಷೀರಭಾಗ್ಯ, ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆ ವಿತರಣೆಯಂತಹ ಉಪಯುಕ್ತ ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಂಡು, ಶೈಕ್ಷಣಿಕ ಪ್ರಗತಿ ಸಾಧಿಸಬೇಕು. ಈ ಯೋಜನೆಗಳ ಅನುಷ್ಠಾನದ ಬಗ್ಗೆ ಮಕ್ಕಳ ಪಾಲಕರು ಆಗಾಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಎಂ.ಬಿ. ಬಾಲರಡ್ಡಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯನ್ನು ತೊಡೆದುಹಾಕುವ ನಿಟ್ಟಿನಲ್ಲಿ ಶಿಕ್ಷಕರು, ಸಮುದಾಯದವರು, ವಿದ್ಯಾರ್ಥಿಗಳು, ಶಿಕ್ಷಣದ ಪ್ರಗತಿಗೆ ಶ್ರಮಿಸಬೇಕಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಿದ ಮಾತ್ರಕ್ಕೆ ಪಾಲಕರ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ. ಪಾಲಕರು ಶಾಲೆಗೆ ಆಗಾಗ್ಗೆ ಭೇಟಿ ನೀಡಿ, ಮಕ್ಕಳ ಕಲಿಕೆಯ ಬಗ್ಗೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡುವುದು ಸೂಕ್ತ ಎಂದರು.
ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಪ್ಪ ಗುಮಗೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಭುಲಿಂಗಯ್ಯ ಸ್ವಾಮಿ ಅವರು ವಿದ್ಯಾರ್ಥಿಗಳ ಪಾಲಕರ ಪರವಾಗಿ ಮಾತನಾಡಿ, ಚಿಲಕಮುಖಿಯ ಸರ್ಕಾರಿ ಪ್ರೌಢಶಾಲೆಗೆ ಇಂಗ್ಲೀಷ್ ವಿಷಯ ಶಿಕ್ಷಕರ ಕೊರತೆ ಇದ್ದು, ಇದರಿಂದ ವಿದ್ಯಾರ್ಥಿಗಳ ಇಂಗ್ಲೀಷ್ ಕಲಿಕೆಗೆ ತೊಂದರೆಯಾಗುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಸಹ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್. ಶಿವರೆಡ್ಡಿ, ಪ್ರಾಥಮಿಕ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಬಿಡನಾಳ ಕಾರ್ಯಕ್ರಮ ಕುರಿತು ಮಾತನಾಡಿದರು.
ಗ್ರಾ.ಪಂ. ಸದಸ್ಯ ಯಮನಪ್ಪ ಗುಮಗೇರಾ, ಗ್ರಾಮದ ಮುಖಂಡರಾದ ನೀಲಬಸಪ್ಪ ಹಾಸಗಲ್, ಮಲ್ಲಪ್ಪ ಗಡಿಗೇರಾ, ಶಾಂತಯ್ಯ ಕಲ್ಮಠ, ದುರ್ಗಪ್ಪ ಹರಿಜನ, ವಿರುಪಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಭಾಗ್ಯಜ್ಯೋತಿ ಸಂಗಡಿಗರು ಪ್ರಾರ್ಥಿಸಿದರು, ಸಹಶಿಕ್ಷಕ ಪ್ರಭುವಸ್ತ್ರದ ವಂದಿಸಿದರು.
0 comments:
Post a Comment