ಬಳ್ಳಾರಿ, ಅ. ೬:ಗೊಂದಲಿಗ ಜನಾಂಗ ಸೇರಿದಂತೆ ಹಲವು ಅಲೆಮಾರಿ ಸಮುದಾಯಗಳು ಸಾಮಾಜಿಕ ನ್ಯಾಯದಿಂದ ವಂಚಿತವಾಗಿದ್ದು ದಲಿತರು, ಅಸ್ಪೃಶ್ಯರಿಗಿಂತ ನಿಕೃಷ್ಟ ಜೀವನ ನಡೆಸುತ್ತಿದೆ ಎಂದು ಹೆಸರಾಂತ ಜಾನಪದ ಕಲಾವಿದ ನಾಡೋಜ ಬೆಳಗಲ್ಲು ವೀರಣ್ಣಅವರು ವಿಷಾಧಿಸಿದರು.
ಸ್ಥಳೀಯ ಸಂಸ್ಕೃತಿ ಪ್ರಕಾಶನ, ಕರ್ನಾಟಕ ಜಾನಪದ ಪರಿಷತ್, ತಾಲೂಕು ಘಟಕದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಆಯೋಜಿಸಿದ್ದ ೨ ನೇ ಸಂಸ್ಕೃತಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಕ್ಷರವಂಚಿತ ಕೀಳ್ಳೆಕ್ಯಾತ, ಗೊಂದಲಿಗ, ಜೋಗಿ ಮತ್ತಿತರ ಅಲೆಮಾರಿ ಸಮುದಾಯಗಳಿಗೆ ಸರಕಾರಿ ಸೌಲಭ್ಯ ದೊರೆಯುತ್ತಿಲ್ಲ. ನಿರ್ಗತಿಕ ಸಮುದಾಯಗಳು ಮುಖ್ಯ ವಾಹಿನಿಗೆ ಬರಲು ಸರಕಾರ, ಸಮಾಜ ನೆರವು ನೀಡುವ ಅಗತ್ಯವಿದೆ ಎಂದು ಹೇಳಿದರು.
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಅಲೆಮಾರಿ, ಬುಡಕಟ್ಟು ಸಮುದಾಯಗಳು ಕಡು ಬಡತನ ಲೆಕ್ಕಿಸದೇ ತಮ್ಮ ಕಲೆ ಪರಂಪರೆಗಳ ಮೂಲಕ ಕನ್ನಡ ನಾಡಿಗೆ ಅಭೂತಪೂರ್ವ ಸೇವೆ ಸಲ್ಲಿಸುತ್ತಿವೆ ಎಂದು ವೀರಣ್ಣ ತಿಳಿಸಿದರು.
’ಗೊಂದಲಿಗ್ಯಾ’ ಕೃತಿ ಲೇಖಕ ಎ. ಎಂ. ಮದರಿ ಅವರು ಮಾತನಾಡಿ, ಗೊಂದಲಿಗ ಸಮುದಾಯ ಅಸಂಘಟಿತರಾಗಿರುವುದು ಸರಕಾರಗಳು ನಿರ್ಲಕ್ಷಿಸಲು ಪ್ರಮುಖ ಕಾರಣ. ಸ್ವಾತಂತ್ರ್ಯ ಬಂದು ೬೩ ವರ್ಷಗಳಾದರೂ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಒಂದೇ ಒಂದು ಬಲಿಷ್ಟ ಸಂಘಟನೆ ಇಲ್ಲದಿರುವುದು ಈ ಸಮುದಾಯದ ದುಸ್ಥಿತಿಯನ್ನು ಸೂಚಿಸುತ್ತದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಬಾಯಿ ಇದ್ದರೂ ಮೂಕನಾಗಿರುವ ಗೊಂದಲಿಗೆ ಸಮುದಾಯ ಸಂಘಟಿತರಾಗುವ ಮೂಲಕ ತಮ್ಮ ಪಾಲಿನ ಸೌಲಭ್ಯವನ್ನು ಸರಕಾರದಿಂದ ಪಡೆದುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಾಹಿತ್ಯಕವಾಗಿ ಗೊಂದಲಿಗ್ಯಾ ಕೃತಿಯನ್ನು ಒಂದು ಕಲಾಕೃತಿ ಎಂದು ತಾವು ಭಾವಿಸುವುದಿಲ್ಲ. ನಾನು ಮತ್ತು ನನ್ನ ಜನಾಂಗದ ಅನೇಕರು ಬದುಕಿದ ಕಥೆಯನ್ನು ದಾಖಲಿಸುವುದೇ ನನ್ನ ಪ್ರಮುಖ ಉದ್ದೇಶವಾಗಿತ್ತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೋಹಿಯಾ ಪ್ರಕಾಶನದ ಸಿ ಚೆನ್ನಬಸವಣ್ಣ ಅವರು ಮಾತನಾಡಿ, ಅಲೆಮಾರಿಗಳಾಗಿರುವ ಗೊಂದಲಿಗ ಸಮುದಾಯ ಸಂಘಟನೆ ಆಗದಿರಲು ಬದುಕಿನ ಅಭದ್ರತೆಯೇ ಕಾರಣ. ಸಮಾಜದಲ್ಲಿ ಮುಂದುವರೆದ ಸಮುದಾಯಗಳು ಅಭದ್ರತೆಯಿಂದ ನಲುಗುತ್ತಿರುವ ಜನಾಂಗಗಳನ್ನು ಮೇಲೆ ಎತ್ತುವ ಮೂಲಕ ಮುಖ್ಯ ವಾಹಿನಿಗೆ ಬರಲು ಸಹಾಯ ಮಾಡಬೇಕು ಎಂದು ತಿಳಿಸಿದರು.
ಪಾತ್ರದವರು, ದೇವದಾಸಿಗಳ ನೃತ್ಯ ಕಲೆಯಾದ ಭರತ ನಾಟ್ಯ, ಕೂಚುಪುಡಿಯನ್ನು ಮೇಲ್ವರ್ಗವಾದ ಅಯ್ಯರ್, ಅಯ್ಯಂಗಾರ್ ಸಮುದಾಯ ಹೈಜಾಕ್ ಮಾಡಿದೆ ಎಂದು ಆರೋಪಿಸಿದ ಚನ್ನಬಸವಣ್ಣ ಅವರು ದಮನಿತರು, ತಳ ಸಮುದಾಯಗಳು ತಮ್ಮ ಕಲೆಯನ್ನು ಶ್ರದ್ಧೆಯಿಂದ ಕಲಿತು ಉಳಿಸಿ ಬೆಳೆಸಬೇಕು ಎಂದು ಕಿವಿ ಮಾತು ಹೇಳಿದರು.
ಗೊಂದಲಿಗ್ಯಾ ಕೃತಿ ಪರಿಚಯಿಸಿದ ಉಪನ್ಯಾಸಕ ಡಾ. ದಯಾನಂದ ಕಿನ್ನಾಳ್ ಅವರು, ಅಲೆಮಾರಿ ಗೊಂದಲಿಗ ಸಮುದಾಯವನ್ನು ಪರಿಶಿಷ್ಟ ಪಂಗಡದಲ್ಲಿ ಸೇಪ್ಡೆ ಮಾಡಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಮುಖ್ಯ ಅತಿಥಿಯಾಗಿದ್ದ ಕಸಾಪ ನಿಕಟಪೂರ್ವ ಅಧ್ಯಕ್ಷ ನಿಷ್ಟಿ ರುದ್ರಪ್ಪ, ಕಾಂಗ್ರೆಸ್ ಮುಖಂಡ ಕಲ್ಲುಕಂಬ ಪಂಪಾಪತಿ ಮಾತನಾಡಿದರು.
ಜಾನಪದ ಹಿರಿಯ ಕಲಾವಿದೆ ಬಿ. ಸುಜಾತಮ್ಮ ಅವರು ಉಪಸ್ಥಿತರಿದ್ದರು.
ಸಂವಾದದಲ್ಲಿ ಪತ್ರಕರ್ತರಾದ ಎಂ ಇ ಜೋಷಿ, ಮಾನು ವೆಂಕಟೇಶ್, ಶ್ರೀ ಚೈತನ್ಯ ಪದವಿಪೂರ್ವ ಕಾಲೇಜ್‌ನ ಉಪನ್ಯಾಸಕ ಡಾ. ನಿಂಗಪ್ಪ ಬಿ ಹೊಸಳ್ಳಿ, ಗೌತಮ ಬುದ್ಧ ಸ್ಮಾರಕ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಲಕ್ಕಿ ಪೃಥ್ವಿರಾಜ್, ಕರ್ನಾಟಕ ಜಾನಪದ ಪರಿಷತ್ ಬಳ್ಳಾರಿ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ, ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ಕನ್ನಡ ಪರ ಹೋರಾಟಗಾರ ಬಿ ಚಂದ್ರಶೇಖರ್ ಆಚಾರ್, ಕವಯತ್ರಿ ಶ್ರೀಮತಿ ಸರೋe ಬ್ಯಾತನಾಳ್, ಸಂಶೋಧಕ, ಪತ್ರಕರ್ತ ಡಾ. ಕೆ ಬಸಪ್ಪ, ಡಾ. ಸುಭಾಷ್‌ಭರಣಿ ಸಾಂಸ್ಕೃತಿಕ ವೇದಿಕೆಯ ಉಪಾಧ್ಯಕ್ಷ ಕೂನಾ ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಬಿ. ಸುರೇಶ್ ಕುಮಾರ್, ಹಳೇ ದರೋಜಿ ನಾಡೋಜ ಬುರ್ರಕಥಾ ಈರಮ್ಮ ಫೌಂಡೇಷನ್‌ನ ಅಧ್ಯಕ್ಷ ವಿ ರಾಮಾಂಜನೇಯ (ಅಶ್ವರಾಮು), ಕವಿ ಕೆ ಶಿವಲಿಂಗಪ್ಪ ಹಂದ್ಯಾಳ್, ಉಪನ್ಯಾಸಕ ನಾಗಿರೆಡ್ಡಿ. ಮೇಡಂ ಕ್ಯೂರಿ ಅಕಾಡೆಮಿಯ ಅಧ್ಯಕ್ಷ ಕವಿ ಎಸ್ ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.
ಸನ್ಮಾನ: ಸಾಹಿತಿ ಎ ಎಂ ಮದರಿ, ಬೆಂಗಳೂರು ಕುರುಹಿನಶೆಟ್ಟಿ ಕೇಂದ್ರ ಸಂಘ ಚುನಾವಣೆಯಲ್ಲಿ ನಿರ್ದೇಶಕರಾಗಿ ಚುನಾಯಿತರಾದ ಕುರುಗೋಡಿನ ಕೂನಾ ರಾಘವೇಂದ್ರ ಅವರನ್ನು ಪ್ರಕಾಶನದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕ ಡಾ. ಲಕ್ಕಿ ಫೃಥ್ವಿರಾಜ್ ನಿರೂಪಿಸಿದರು. ಕವಿ ಕೆ ಶಿವಲಿಂಗಪ್ಪ ಹಂದ್ಯಾಳ್ ವಂದಿಸಿದರು.
0 comments:
Post a Comment