
ಮನಮೋಹನ್ ಸಿಂಗ್ ಸರಕಾರದ ವಿನಾಶಕಾರಿ ಆರ್ಥಿಕ ನೀತಿ, ಬ್ರಹ್ಮಾಂಡ ಗಾತ್ರದ ಭ್ರಷ್ಟಾಚಾರ ಕಂಟಕಕಾರಿ ಕೃಷಿನೀತಿ ಇವುಗಳಿಗೆ ಪರ್ಯಾಯವಾಗಿ ಬಿಜೆಪಿಯ ಆರ್ಥಿಕ ನೀತಿ ಯಾವುದು? ನರೇಂದ್ರ ಮೋದಿಯ ಬದಲಿ ಕಾರ್ಯಕ್ರಮವೇನು? ಈ ಬಗ್ಗೆ ಚರ್ಚಿಸಲು ಈ ಮಾಧ್ಯಮಗಳು ಬೇಕಂತಲೇ ಹಿಂಜರಿಯುತ್ತವೆ. ಇನ್ನು ಭ್ರಷ್ಟಾಚಾರಕ್ಕೆ ಬಂದರೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಹಗರಣಗಳ ಬಗೆಗೂ ಪ್ರಸ್ತಾಪಿಸುತ್ತಿಲ್ಲ.

ಬಾಯಿ ತೆರೆದರೆ ಅಭಿವೃದ್ಧಿ ಎಂದು ಹೇಳುವ ನರೇಂದ್ರ ಮೋದಿ ಗುಜರಾತ್‌ನಲ್ಲಿ ಕಡಿದುಕಟ್ಟೆ ಹಾಕಿದ್ದೇನೂ ಇಲ್ಲ. ಮೋದಿ ಬರುವ ಮುನ್ನವೂ ಔದ್ಯಮಿಕವಾಗಿ ಮುಂದುವರಿದ್ದ ಗುಜರಾತ್‌ನಲ್ಲಿ ಮೋದಿ ಮಾಡಿದ ‘ಅಭಿವೃದಿ’ಗೂ ಕರ್ನಾಟಕದಲ್ಲಿ ಯಡಿಯೂರಪ್ಪ ಮಾಡಿದ ‘ಅಭಿವೃದ್ಧಿ’ಗೂ ಯಾವ ವ್ಯತ್ಯಾಸವಿಲ್ಲ. ಅಭಿವೃದ್ಧಿ ಮಾಡಿದ್ದೇನೆಂದು ಹೇಳಿದ ಯಡಿಯೂರಪ್ಪ ಭ್ರಷ್ಟಾಚಾರ ಹಗರಣದಲ್ಲಿ ಪರಪ್ಪನ ಅಗ್ರಹಾರಕ್ಕೆ ಹೋಗಿ ಬಂದರು. ಮೋದಿ ಸರಕಾರದಲ್ಲೂ ಭ್ರಷ್ಟಾಚಾರದ ಹಗರಣಗಳಿವೆ. ಆದರೆ ಅಲ್ಲಿ ಲೋಕಾಯುಕ್ತರನ್ನು ನೇಮಕ ಮಾಡದಿದ್ದುದರಿಂದ ಮೋದಿ ಬಚಾವ್ ಆದರು. ಲೋಕಾಯುಕ್ತರಿದ್ದರೆ ಅಲ್ಲಿನ ಹಗರಣಗಳು ಬಯಲಿಗೆ ಬರುತ್ತಿದ್ದವು.
ಕಾಂಗ್ರೆಸ್‌ನಲ್ಲಿಲ್ಲದ ಇನ್ನೊಂದು ಅಪಾಯಕಾರಿ ವಿಷ ಮೋದಿಯಲ್ಲಿದೆ. ಅದು ಕೋಮುವಾದ. 2002ರಲ್ಲಿ ಈತನ ಪ್ರಚೋದನೆಯಿಂದ ನಡೆದ ಅಲ್ಪಸಂಖ್ಯಾತರ ಹತ್ಯಾಕಾಂಡ ಎಲ್ಲರಿಗೂ ಗೊತ್ತಿದೆ. ಆದರೂ ‘‘ಮೋದಿ ಪರ್ಯಾಯ, ಮೋದಿ ಪರ್ಯಾಯ’’ ಎಂದು ಬಾಯಿ ಬಡಿದುಕೊಂಡರೆ ಅರ್ಥವಿಲ್ಲ. ಅದೊಂದು ತರ ಉಡುಪಿ ಪರ್ಯಾಯದಂತಾಗುತ್ತದೆ. ಪ್ರತಿವರ್ಷ ಕೃಷ್ಣ ಪೂಜೆಯ ಅಧಿಕಾರ ವಹಿಸಿಕೊಳ್ಳಲು ಸರತಿ ಸಾಲಿನಲ್ಲಿ ಅಷ್ಟಮಠಗಳ ಯತಿಗಳು ಬದಲಾವಣೆ ಆಗುತ್ತದೆ. ಅದೇ ಪೂಜೆ, ಅದೇ ಜಾತ್ರೆ. ಹೊಸದೇನೂ ಇಲ್ಲ. ಇದೂ ಅಷ್ಟೆ ಐದು ವರ್ಷಗಳಿಗೆ ಒಮ್ಮೆ ಅವರಿಗೆ ಇವರು, ಇವರಿಗೆ ಅವರು ಪರ್ಯಾಯ. ಎಲ್ಲರು ಬಂಡವಾಳಗಾರರ ಪಾದಸೇವಕರೆ!
ಅಂತಲೆ ಈಗ ಮೂರನೆ ರಂಗದ ಪ್ರಸ್ತಾಪ ಮತ್ತೆ ಮುಂದೆ ಬಂದಿದೆ. ನಿತೀಶ್ ಕುಮಾರ್ ಈಗಾಗಲೇ ಕವಡೆ ಬೀಸಿದ್ದಾರೆ. ಮಮತಾ ಬ್ಯಾನರ್ಜಿ ಫೆಡರಲ್ ಫ್ರಂಟ್ ಮಾಡಲು ಹೊರಟಿದ್ದಾರೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ವರ ತೆಗೆದಿದ್ದಾರೆ. ಸಿಪಿಐ ನಾಯಕ ಎ.ಬಿ.ಬರ್ದನ್ ಸಮಾಜವಾದಿ ನಾಯಕ ಮುಲಾಯಂ ಸಿಂಗರನ್ನು ಭೇಟಿಯಾಗಿದ್ದಾರೆ. ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಸಂಯುಕ್ತ ಜನತಾದಳದ ಅಧ್ಯಕ್ಷ ಶರದ್ ಯಾದವ್‌ರನ್ನು ಕಂಡಿದ್ದಾರೆ. ಇದಕ್ಕೆ ಚಂದ್ರಬಾಬು ನಾಯ್ಡು ಹಸಿರು ನಿಶಾನೆ ತೋರಿಸಿದ್ದಾರೆ.
ಆದರೆ ತೃತೀಯರಂಗ ಅಂದುಕೊಂಡಷ್ಟು ಸುಲಭವಲ್ಲ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿನೂ ಸಿಪಿಎಂಗೂ ಆಗುವುದಿಲ್ಲ. ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್‌ರವರದು ಹಾವು ಮುಂಗುಸಿ ಸಂಬಂಧ. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್‌ರಿಗೆ ಮಾಯಾವತಿಯೇ ಶತ್ರು. ಹೀಗಾಗಿ ಕಾಂಗ್ರೆಸ್ಸೇತರ ಬಿಜೆಪಿಯೇತರ ಪಕ್ಷಗಳನ್ನು ಒಂದೇ ವೇದಿಕೆಗೆ ತರುವುದು ಸುಲಭವಲ್ಲ. 90ರ ದಶಕದಲ್ಲಿ ಹರಕಿಷನ್ ಸಿಂಗ್ ಸುರ್ಚಿತ್ ಅವರಂಥ ಚಾಣಕ್ಯ ರಾಜಕಾರಣಿ ಇದ್ದರು. ಅಂಥ ಪ್ರಭಾವಿ ನಾಯಕತ್ವ ಈಗ ಕಾಣುತ್ತಿಲ್ಲ.
ಇನ್ನು ನೀತಿ ಧೋರಣೆಗಳಿಗೆ ಸಂಬಂಧಿಸಿದಂತೆ ಎಡಪಕ್ಷಗಳನ್ನು ಹೊರತುಪಡಿಸಿ ಉಳಿದೆಲ್ಲ ಪ್ರಾದೇಶಿಕ ಪಕ್ಷಗಳಿಗೆ ಜಾಗತೀಕರಣದ, ಉದಾರೀಕರಣದ ಆರ್ಥಿಕ ಧೋರಣೆಗಳ ಬಗ್ಗೆ ಖಚಿತ ನಿಲುವಿಲ್ಲ. ಅಧಿಕಾರಕ್ಕೆ ಬಂದರೆ ಇವರೂ ಕಾರ್ಪೊರೇಟ್ ಧಣಿಗಳ ಸೇವೆಗೆ ನಿಲ್ಲುತ್ತಾರೆ. ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಏನು ಮಾಡಿದರೆಂದು ಎಲ್ಲರಿಗೂ ಗೊತ್ತಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪೊಸ್ಕೊ ವ್ಯಾಮೋಹವನ್ನು ಎಡಪಕ್ಷಗಳು ಒಪ್ಪುಲು ಸಾಧ್ಯವಿಲ್ಲ.
ಆದರೂ ತೃತೀಯ ರಂಗ ಎಂಬುದು ಇಂದಿನ ಚಾರಿತ್ರಿಕ ಅನಿವಾರ್ಯತೆಯಾಗಿದೆ. ದೇಶದ ಜನ ಅದನ್ನೇ ಬಯಸುತ್ತಿದ್ದಾರೆ. ಬೆಲೆಏರಿಕೆ, ನಿರುದ್ಯೋಗ, ರೈತರ ಆತ್ಮಹತ್ಯೆ, ಭೂಸ್ವಾಧೀನದ ಹೆಸರಲ್ಲಿ ರೈತರ ಭೂಮಿ ಅಪಹರಣ, ಕೃಷಿರಂಗದ ಅವನತಿ ಇವುಗಳಿಗೆಲ್ಲ ಪರ್ಯಾಯವಾದ ನಿರ್ದಿಷ್ಟ ಕಾರ್ಯಕ್ರಮ ಆಧರಿತವಾದ ಪರ್ಯಾಯವೊಂದು ಮೂಡಿ ಬರಬೇಕಾಗಿದೆ. ಆ ಪರ್ಯಾಯ ಕಾರ್ಪೊರೇಟ್ ಸೇವಕ ನರಹಂತಕ ಮೋದಿಯಲ್ಲಿ ಇಲ್ಲ.
ಈ ನಿಟ್ಟಿನಲ್ಲಿ ಮೊದಲು ಎಡಪಕ್ಷಗಳು ರೈತ ಸಂಘಟನೆಗಳು, ದಲಿತ ಸಂಘಟನೆಗಳು ಒಟ್ಟುಗೂಡಿ ನಿಲ್ಲಬೇಕಾಗಿದೆ. ಪರ್ಯಾಯ ಎಂಬುದು ರಾಜಕೀಯ ಪಕ್ಷಗಳ ಮಟ್ಟದಲ್ಲಿ ಮಾತ್ರವಲ್ಲ ಜನಪರ ಸಂಘಟನೆಗಳ ಹಂತದಲ್ಲಿ ಕಾರ್ಯಕ್ರಮದ ಆಧಾರದಲ್ಲಿ ರೂಪುಗೊಂಡರೆ ಆಗ ಚಂಚಲ ಸ್ವರೂಪಿ ಪ್ರಾದೇಶಿಕ ಪಕ್ಷಗಳನ್ನು ಹಳಿಯ ಮೇಲೆ ತರಬಹುದು. ಈ ದೇಶದಲ್ಲಿ ಹಿಂದೆ ಅಂಥ ಪ್ರಯೋಗಗಳು ನಡೆದಿವೆ.
ಈಗಲೂ ಅಂಥ ಪರ್ಯಾಯ ಪ್ರಯೋಗವೊಂದನ್ನು ದೇಶ ಬಯಸುತ್ತಿದೆ. ಅಮೆರಿಕನ್ ಸಾಮ್ರಾಜ್ಯಶಾಹಿಯ ಹುನ್ನಾರಗಳಿಗೆ ಸೊಪ್ಪು ಹಾಕದೆ ಸೆಟೆದು ನಿಂತ ವೆನಿಝವೆಲಾ ಮತ್ತು ಚಾವೆಝ್ ನಮಗೆ ಆದರ್ಶವಾಗಬೇಕು. ಜನ ಬಯಸುವ ಪರ್ಯಾಯ ನರೇಂದ್ರ ಮೋದಿಯಲ್ಲ. ಸಮಾನತೆಯ ಭಾರತ ಕಟ್ಟುವ ಪ್ರಗತಿಪರ ಪರ್ಯಾಯವಾಗಿದೆ.
0 comments:
Post a Comment