ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಲು ನಿಯಮಗಳನ್ನು ರೂಪಿಸುವ ಸಂಬಂಧ ಸಚಿವ ಸಂಪುಟದ ಉಪಸಮಿತಿಯು ಕೊಪ್ಪಳ ಜಿಲ್ಲೆಯಲ್ಲಿನ ಹೈ-ಕ ಪ್ರದೇಶದ ಹೋರಾಟ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಲಿಖಿತ ರೂಪದ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು ಜುಲೈ ೦೩ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆಯಲ್ಲಿ ಆಯೋಜಿಸಿದೆ.
ಹೈದ್ರಾಬಾದ್-ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ೩೭೧(ಜೆ) ಕಲಂ ತಿದ್ದುಪಡಿ ಜಾರಿಗೊಳಿಸಿ, ಇಲ್ಲಿನ ಜನರಿಗೆ ಸಾರ್ವಜನಿಕ ಹುದ್ದೆಗಳಲ್ಲಿ ಮೀಸಲಾತಿ ಹಾಗೂ ಉನ್ನತ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮೀಸಲಾತಿಯನ್ನು ಕಲ್ಪಿಸಬೇಕಾಗಿರುತ್ತದೆ. ಆದ್ದರಿಂದ ಈ ನಿಯಮಗಳನ್ನು ಪರಿಶೀಲಿಸಿ ವರದಿ ನೀಡಲು ಈಗಾಗಲೆ ಸಚಿವ ಸಂಪುಟದ ಉಪಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿಯು ಈಗಾಗಲೆ ಎರಡು ಸಭೆಗಳನ್ನು ನಡೆಸಿದೆ, ಅಲ್ಲದೆ ಜೂ. ೨೭ ಮತ್ತು ೨೮ ರಂದು ಹೈ-ಕ ಪ್ರದೇಶದ ಸಂಸದರು ಮತ್ತು ಶಾಸಕರುಗಳ ಅಭಿಪ್ರಾಯ ಮತ್ತು ಸಲಹೆ ಪಡೆಯಲು ಉದ್ದೇಶಿಸಿದೆ. ಅದೇ ರೀತಿ ಹೈ-ಕ ಪ್ರದೇಶದ ಹೋರಾಟ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲು ಉದ್ದೇಶಿಸಲಾಗಿದ್ದು, ಜುಲೈ ೨ ರಂದು ಗುಲಬರ್ಗಾದಲ್ಲಿ ಬೀದರ್, ಯಾದಗಿರಿ ಮತ್ತು ಗುಲಬರ್ಗಾ ಜಿಲ್ಲೆಗಳ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಸಭೆಯನ್ನು ಏರ್ಪಡಿಸಿದೆ. ಜುಲೈ ೦೩ ರಂದು ಹೊಸಪೇಟೆಯಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ಕೊಪ್ಪಳ ಜಿಲ್ಲೆ, ಮಧ್ಯಾಹ್ನ ೧೨ ರಿಂದ ೨ ಗಂಟೆಯವರೆಗೆ ರಾಯಚೂರು, ಮತ್ತು ಮಧ್ಯಾಹ್ನ ೩ ರಿಂದ ಸಂಜೆ ೫ ಗಂಟೆಯವರೆಗೆ ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಲು ಸಭೆ ಆಯೋಜಿಸಿದೆ.
ಕೊಪ್ಪಳ ಜಿಲ್ಲೆ ವ್ಯಾಪ್ತಿಯ ಹೈ-ಕ ಪ್ರದೇಶ ಹೋರಾಟ ಸಮಿತಿ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಜು. ೦೩ ರಂದು ಬೆಳಿಗ್ಗೆ ೧೦ ಗಂಟೆಗೆ ಹೊಸಪೇಟೆಯಲ್ಲಿ ಜರುಗುವ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಾಲ್ಗೊಂಡು, ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಕಡ್ಡಾಯವಾಗಿ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತಿಳಿಸಿದ್ದಾರೆ.
0 comments:
Post a Comment