PLEASE LOGIN TO KANNADANET.COM FOR REGULAR NEWS-UPDATES

  ಡೆಂಗ್ಯು ಜ್ವರ ಹರಡುವುದನ್ನು ನಿಯಂತ್ರಿಸಲು, ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು, ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಾಗಿದೆ ಎಂದು ಕೊಪ್ಪಳ ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ತಿಳಿಸಿದ್ದಾರೆ.
  ಡೆಂಗ್ಯು ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಪ್ರಕಟಣೆ ನೀಡಿರುವ ಕೊಪ್ಪಳ ನಗರಸಭೆ, ಡೆಂಗ್ಯು ಜ್ವರ ವೈರಸ್‌ನಿಂದ ಉಂಟಾಗುವ ಖಾಯಿಲೆ ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಭಿವೃದ್ದಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ.  ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳನ್ನು ವಿಪರೀತ ನೋವು ಕಾಣಿಸಿಕೊಳ್ಳುವುದು, ಈ ರೋಗದ ಪ್ರಮುಖ ಲಕ್ಷಣಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುತ್ತದೆ.   ಡೆಂಗ್ಯು ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ರೋಗದ ಲಕ್ಷಣಗಳಿಗನುಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬಹುದು ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.
  ಡೆಂಗ್ಯು ಜ್ವರವನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದ್ದು, ಸೊಳ್ಳೆಗಳ ನಿಯಂತ್ರಣ ಡೆಂಗ್ಯು ರೋಗದ ಹತೋಟಿಗೆ ಮುಖ್ಯ ವಿಧಾನವೆಂದರೆ, ಈ ಸೊಳ್ಳೆಗಳು ನೀರನ್ನು ಶೇಖರಿಸಿಡುವ ಸಿಮೆಂಟ್ ತೊಟ್ಟಿ, ಕಲ್ಲುಚಪ್ಪಡಿಯಯಿಂದ ಉಪಯೋಗಿಸದ ಒರಳುಕಲ್ಲು, ಬಿಸಾಡಿದ ತೆಂಗಿನ ಚಿಪ್ಪುಗಳು ಮುಂತಾದ ಕಡೆ ಶೇಖರವಾಗುವ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಎಲ್ಲಾ ನೀರಿನ ತೊಟ್ಟಿ, ಡ್ರಮ್ಮು, ಬ್ಯಾರೆಲ್, ಏರ್ ಕೂಲರ್, ಇತ್ಯಾದಿಗಳನ್ನು ೩ ಅಥವಾ ೪ ದಿನಗಳಿಗೊಮ್ಮೆ ಖಾಲಿ ಮಾಡಿ, ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು, ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು, ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮುಂತಾದವುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಡುವುದು, ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರೆದೆಯನ್ನು ಬಳಸಿ, ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು, ರಾತ್ರಿ ಹೊತ್ತಿನಲ್ಲಿ ಸೊಳ್ಳೆ ಬತ್ತಿಗಳನ್ನು ಹಚ್ಚುವುದು ಕಿಟಗಿಗಳಿಗೆ ಜಾಲರಿಗಳನ್ನು ಹೊಡೆಸುವುದು, ಸಂಜೆ ಹೊತ್ತು ಬೇವಿನ ಸೊಪ್ಪಿನ ಹೊಗೆ ಹಾಕುವುದು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು.
  ಡೆಂಗ್ಯು ರೋಗ ಬಂದಾಗ ರಕ್ತದಲ್ಲಿರುವ ಪ್ಲೇಟ್‌ಲೆಟ್‌ಗಳ ಕೊರತೆಯಾಗುವುದೆಂಬ ವದಂತಿ ಜನಸಾಮಾನ್ಯರಲ್ಲಿ ಹರಡಿದೆ ಆದರೆ ಪ್ಲೇಟ್‌ಲೆಟ್ ಕಡಿಮೆಯಾದ ರೋಗಿಗಳಿಗೆ ವೈದ್ಯರು ನೀಡುವ ಐ.ವಿ. ದ್ರಾವಣ ಅದಕ್ಕೆ ತಕ್ಕ ಚಿಕಿತ್ಸೆ ಹಾಗೂ ಬೆಡ್‌ರೆಸ್ಟ್ ಇವೆಲ್ಲವುಗಳಿಂದ ಪ್ಲೆಟ್‌ಲೆಟ್‌ಗಳ ಪ್ರಮಾಣ ಹೆಚ್ಚಾಗಿ ರೋಗಿಯು ಚೇತರಿಸಿಕೊಳ್ಳುತ್ತಾರೆ.  ಆದ್ದರಿಂದ ನೀರು ನಿಲ್ಲದಂತೆ ಎಚ್ಚರ ವಹಿಸಿ, ಡೆಂಗ್ಯು ಜ್ವರದಿಂದ ಪಾರಾಗಲು ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸಬೇಕು ಎಂದು ನಗರಸಭೆ ಪೌರಾಯುಕ್ತರು ಮನವಿ ಮಾಡಿಕೊಂಡಿದ್ದಾರೆ.

Advertisement

0 comments:

Post a Comment

 
Top