ವಾರ್ತಾ ಇಲಾಖೆ ಕೊಪ್ಪಳ ಇವರ ವತಿಯಿಂದ ಸರ್ಕಾರದ ವಿವಿಧ ಅಭಿವೃದ್ದಿ ಯೋಜನೆಗಳು ಹಾಗೂ ಸಾಮಾಜಿಕ ಜಾಗೃತಿ ಕುರಿತಂತೆ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಪ್ರತಿ ಮಾಹೆ ಬೀದಿ ನಾಟಕ ಪ್ರದರ್ಶನ ಮಾಡಲು ಅರ್ಹ ಬೀದಿ ನಾಟಕ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಬೀದಿ ನಾಟಕ ಪ್ರದರ್ಶನ ಮಾಡುವ ಕಲಾ ತಂಡಗಳಲ್ಲಿ ಕನಿಷ್ಠ ೨ ಮಹಿಳಾ ಕಲಾವಿದರು ಸೇರಿದಂತೆ ಒಟ್ಟು ೧೦ ಜನ ಕಲಾವಿದರಿರಬೇಕು, ಕಲಾ ತಂಡಗಳು ನೋಂದಣಿ ಹೊಂದಿರಬೇಕು. ಸಂಗೀತ, ಹಾಡುಗಾರಿಕೆ, ನಟನೆ ಬಗ್ಗೆ ಅರಿವು ಮತ್ತು ಅನುಭವ ಇರಬೇಕು, ಸಂಗೀತದ ಜ್ಞಾನ, ಅಭಿವ್ಯಕ್ತಿ ಹಾಗೂ ಸೃಜನಶೀಲತೆ ಹಾಗೂ ಅನುಭವವನ್ನು ಪರಿಗಣಿಸಿ, ತಂಡವನ್ನು ಆಯ್ಕೆ ಮಾಡಲಾಗುವುದು. ಒಂದು ಪ್ರದರ್ಶನಕ್ಕೆ ೨೫೦೦ ರೂ. ರಂತೆ ಸಂಭಾವನೆ ನೀಡಲಾಗುವುದು, ದಿನವೊಂದಕ್ಕೆ ಎರಡು ಗ್ರಾಮಗಳಲ್ಲಿ ನಾಟಕಗಳನ್ನು ಪ್ರದರ್ಶನ ಮಾಡಬೇಕಾಗುತ್ತದೆ.
ವಾರ್ತಾ ಇಲಾಖೆಯ ಉಪನಿರ್ದೇಶಕರು, ಜಿಲ್ಲಾ ವಾರ್ತಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳನ್ನೊಳಗೊಂಡ ಸಮಿತಿಯು ಕಲಾ ತಂಡದ ಪ್ರದರ್ಶನದ ಗುಣಮಟ್ಟದ ಆಧಾರದ ಮೇಲೆ ಕಲಾ ತಂಡವನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ತಂಡಗಳಿಗೆ ಇಲಾಖೆಯಿಂದ ತರಬೇತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಜೂ.೧೦ ಕೊನೆಯ ದಿನವಾಗಿದ್ದು, ಕಲಾ ತಂಡದ ಹೆಸರು, ವಿಳಾಸ ತಂಡದ ಮುಖ್ಯಸ್ಥರ ಸಂಪರ್ಕ ವಿಳಾಸ, ಅನುಭವ, ಕಾರ್ಯಕ್ರಮ ನೀಡಿದ ಬಗ್ಗೆ ದಾಖಲೆಗಳು, ಕಲಾವಿದರ ಸಂಖ್ಯೆ ಹಾಗೂ ಹೆಸರು ಇತರೆ ಮಾಹಿತಿ ಹಾಗೂ ದಾಖಲೆಗಳನ್ನೊಳಗೊಂಡ ಅರ್ಜಿಯನ್ನು ಜಿಲ್ಲಾ ವಾರ್ತಾಧಿಕಾರಿಗಳ ಕಛೇರಿ, ವಾರ್ತಾ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೨೦೬೦೭ ಇವರಿಗೆ ಸಲ್ಲಿಸಬೇಕು. ನಿಗದಿತ ನಮೂನೆಯನ್ನು ಕಚೇರಿಯಿಂದ ಪಡೆಯಬಹುದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ತುಕಾರಾಂ ರಾವ್ ಬಿ.ವಿ. ತಿಳಿಸಿದ್ದಾರೆ.
0 comments:
Post a Comment