ಕರ್ನಾಟಕದ ಯಾತ್ರಿಕರು ಹೆಚ್ಚಾಗಿ ಸಿಲುಕಿಕೊಂಡಿರುವ ಬದರಿನಾಥದಲ್ಲಿ ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೆ ರಾಜ್ಯದ ಮೂಲಸೌಲಭ್ಯ ಮತ್ತು ವಾರ್ತಾ ಸಚಿವ ಸಂತೋಷ್ ಲಾಡ್ ಅವರು ಇಂದು ೧೫೦ಕ್ಕೂ ಹೆಚ್ಚು ಕನ್ನಡಿಗರನ್ನು ಭೇಟಿ ಮಾಡಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಮತ್ತೆ ರಾಜ್ಯಕ್ಕೆ ಕರೆತರುವ ಭರವಸೆಯನ್ನು ನೀಡಿದ್ದಾರೆ.
ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಳೆದ ಶುಕ್ರವಾರ (ಜೂ. ೨೧) ದಿಂದ ಉತ್ತರಾಖಂಡದಲ್ಲಿರುವ ಸಂತೋಷ್ ಲಾಡ್ ಅವರು ಕಳೆದ ಹಲವಾರು ದಿನಗಳಿಂದ ಅತಂತ್ರ ಸ್ಥಿತಿಯಲ್ಲಿದ್ದ ರಾಜ್ಯದ ಪ್ರವಾಸಿಗರನ್ನು ಖುದ್ದಾಗಿ ಇಂದು ಭೇಟಿ ಮಾಡಿ ಅವರ ಆರೋಗ್ಯ ಮತ್ತು ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸುರಿವ ಮಳೆಯ ನಡುವೆ ಊಟ, ತಿಂಡಿ ಇಲ್ಲದೆ, ಇರಲು ಸೂಕ್ತ ಸ್ಥಳವಿಲ್ಲದೆ ಪರದಾಡುತ್ತಿದ್ದ ರಾಜ್ಯದ ಪ್ರವಾಸಿಗರ ಬಗ್ಗೆ ಸಚಿವರು ಡೆಹ್ರಾಡೂನ್ ನಲ್ಲಿರುವ ರಾಜ್ಯ ನಿರ್ವಹಣಾ ಕೇಂದ್ರದಿಂದ ಮಾಹಿತಿ ಪಡೆದುಕೊಂಡು, ಅವರಿದ್ದ ಸ್ಥಳಕ್ಕೆ ಹೆಲಿಕ್ಯಾಪ್ಟರ್‌ನ ಸಹಾಯದಿಂದ ತೆರಳಿದ್ದರು.
ಬದರಿನಾಥ, ಗೌರಿಕುಂಡ್ ಹಾಗೂ ರಾಮಬಾಡ್ ಪ್ರದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು ೧೫೦ ಕರ್ನಾಟಕದ ಪ್ರವಾಸಿಗರನ್ನು ಭೇಟಿ ಮಾಡಿದ ಸಚಿವರು, ಮಾನಸಿಕವಾಗಿ ಕುಗ್ಗಿಹೋಗಿರುವ ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಲ್ಲದೆ, ಇವರೆಲ್ಲರ ಪಟ್ಟಿಯನ್ನು ಸಿದ್ದಪಡಿಸಿಕೊಂಡಿರುವ ಸಚಿವರು, ರಾಜ್ಯದ ಇನ್ನಿತರ ಯಾತ್ರಾರ್ಥಿಗಳನ್ನು ಸಹ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ.
ಹವಾಮಾನ ಅಡ್ಡಿ: ಕಳೆದ ಎರಡು ದಿನಗಳಿಂದ ಮತ್ತೆ ಸುರಿಯುತ್ತಿರುವ ಮಳೆಯಿಂದಾಗಿ ಪರಿಹಾರ ಕಾರ್ಯಕ್ಕೆ ಅಡ್ಡಿ ಉಂಟಾಗಿದೆ. ಇಲ್ಲಿ ತುಂಬಾ ಮಂಜು ಮುಸುಕಿದ್ದು, ವೈಮಾನಿಕ ಹಾರಾಟಕ್ಕೆ ಸೂಕ್ತವಾಗಿಲ್ಲದಿರುವುದು ಪ್ರವಾಸಿಗರನ್ನು ವಾಪಸ್ ಕರೆದುಕೊಂಡು ಹೋಗಲು ಅಡ್ಡಿಯುಂಟಾಗಿದೆ. ಒಂದೆರಡು ದಿನಗಳಲ್ಲಿ ಹವಾಮಾನದಲ್ಲಿ ಸುಧಾರಣೆಯಾಗುವ ಸೂಚನೆಗಳಿದ್ದು, ರಾಜ್ಯದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವುದಾಗಿ ಸಚಿವ ಸಂತೋಷ್ ಲಾಡ್ ಅವರು ತಿಳಿಸಿದ್ದಾರೆ.
ರಾಜ್ಯದ ಯಾತ್ರಿಕರಿಗೆ ತಾತ್ಕಾಲಿಕವಾಗಿ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಆರೋಗ್ಯ ಶಿಬಿರಗಳನ್ನು ಸಹ ಸ್ಥಾಪಿಸಲಾಗಿದೆ. ಇಲ್ಲಿರುವ ಪ್ರವಾಸಿಗರು ಮಾನಸಿಕವಾಗಿ ಕುಗ್ಗಿದ್ದರೂ, ಅವರ ಆರೋಗ್ಯವು ಸ್ಥಿರವಾಗಿದೆ. ರಾತ್ರಿ ಹೆಚ್ಚು ಚಳಿಯಿಂದ ಕೂಡಿರುವ ಇಲ್ಲಿನ ಹವಾಮಾನಕ್ಕೆ ಒಗ್ಗಿಕೊಳ್ಳಲು ರಾಜ್ಯದ ಪ್ರವಾಸಿಗರು ಕಷ್ಟ ಪಡುತ್ತಿದ್ದಾರೆ. ಜೊತೆಗೆ, ಕೆಲವೊಂದು ಸಣ್ಣ ಪುಟ್ಟ ತೊಂದರೆಗಳು ಇರುವುದು ನಿಜ. ಆದರೂ, ರಾಜ್ಯದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಎಲ್ಲರನ್ನೂ ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರುವುದಾಗಿ ಸಚಿವರು ತಿಳಿಸಿದ್ದಾರೆ.
ಸುರಿಯುತ್ತಿರುವ ಮಳೆ ಮತ್ತು ಮಂಜು ಮುಸುಕಿದ ವಾತಾವರಣವನ್ನೂ ಲೆಕ್ಕಿಸದೆ ಇಂದು ಹೆಲಿಕ್ಯಾಪ್ಟರ್ ಮೂಲಕ ಮೂರು ಸ್ಥಳಗಳಿಗೆ ತೆರಳಿದ ಸಚಿವರು ಕರ್ನಾಟಕದ ಯಾತ್ರಿಕರನ್ನು ಸುರಕ್ಷಿತವಾಗಿ ಡೆಹ್ರಾಡೂನ್ ಇಲ್ಲವೆ ಹೃಷಿಕೇಶಕ್ಕೆ ತಂದು ಬಿಡುವಂತೆ ಸೇನಾ ಪಡೆಗಳಿಗೆ ಮನವಿಯನ್ನು ಸಹ ಮಾಡಿದ್ದಾರೆ. ಹವಾಮಾನ ಕೊಂಚ ಸುಧಾರಿಸಿದರೂ ಇನ್ನೆರಡು ಮೂರು ದಿನಗಳಲ್ಲಿ ಪ್ರವಾಸಿಗರು ರಾಜ್ಯಕ್ಕೆ ಮರಳಲಿದ್ದಾರೆ ಎನ್ನುವ ವಿಶ್ವಾಸ ಹೊಂದಿರುವುದಾಗಿ ಸಚಿವರು ನುಡಿದಿದ್ದಾರೆ.
ಚಿಂತೆ ಬೇಡ: ಹಿಮಾಲದ ಸುನಾಮಿಯ ಹೊಡೆತಕ್ಕೆ ಸಿಲುಕಿ, ತಾತ್ಕಾಲಿಕವಾಗಿ ನೆಲೆ ಕಳೆದುಕೊಂಡಿರುವ ರಾಜ್ಯದ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಬಗ್ಗೆ ಕರ್ನಾಟಕದಲ್ಲಿರುವ ಬಂಧು-ಬಳಗದವರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಎಲ್ಲರನ್ನೂ ಒಟ್ಟಾಗಿ ರಾಜ್ಯಕ್ಕೆ ಕರೆತರುವುದಾಗಿ ಸಚಿವರು ಹೇಳಿದ್ದಾರೆ.
0 comments:
Post a Comment