ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸೂಕ್ತ ಕಾಯ್ದೆ, ಖಾಲಿ ಹುದ್ದೆಗಳ ಭರ್ತಿ, ಜ್ಯೋತಿ ಸಂಜೀವಿನಿ ಯೋಜನೆ ಅನುಷ್ಠಾನ ಸೇರಿದಂತೆ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಹೇಳಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾ ಘಟಕಗಳ ಅಧ್ಯಕ್ಷರು, ವಿವಿಧ ಪದಾಧಿಕಾರಿಗಳು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಯಲ್ಲಿರುವ ವ್ಯತ್ಯಾಸ ಸರಿಪಡಿಸುವುದು, ನೌಕರರ ವರ್ಗಾವಣೆ ಬಗ್ಗೆ ಸೂಕ್ತ ಕಾಯ್ದೆ ರೂಪಿಸಿ, ವರ್ಷಪೂರ್ತಿ ನೌಕರರ ವರ್ಗಾವಣೆಯಿಂದ, ಅವರ ಮಕ್ಕಳು ಮತ್ತು ಕೌಟುಂಬಿಕ ತೊಂದರೆ ಅನುಭವಿಸುತ್ತಿರುವುದನ್ನು ತಡೆಗಟ್ಟುವುದು, ರಾಜ್ಯದಲ್ಲಿ ಖಾಲಿ ಇರುವ ಸುಮಾರು ೦೧ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದು, ನೌಕರರ ವೈದ್ಯಕೀಯ ಚಿಕಿತ್ಸೆಗೆ ನೆರವಾಗುವಂತೆ ಪೊಲೀಸ್ ಇಲಾಖೆಯಲ್ಲಿ ಜಾರಿಯಲ್ಲಿರುವ 'ಆರೋಗ್ಯ ಭಾಗ್ಯ' ಯೋಜನೆಯ ಮಾದರಿಯಲ್ಲಿ 'ಜ್ಯೋತಿ ಸಂಜೀವಿನಿ' ಯೋಜನೆ ಅನುಷ್ಠಾನಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು. ಕೇಂದ್ರ ಸರ್ಕಾರ ಜನಗಣತಿ ಆಧಾರದ ಮೇಲೆ ರಾಜ್ಯದ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳನ್ನು ಕೇಂದ್ರ ಸರ್ಕಾರದ ಮಾದರಿಯಲ್ಲಿ ಎ, ಬಿ ಮತ್ತು ಸಿ ದರ್ಜೆಗಳಾಗಿಸಿ, ಅವರಿಗೆ ಕ್ರಮವಾಗಿ ಶೇ. ೩೦, ಶೇ. ೨೦ ಮತ್ತು ಶೇ. ೧೦ ರಷ್ಟು ಮನೆ ಬಾಡಿಗೆ ಭತ್ಯೆಯನ್ನು ಮಂಜೂರು ಮಾಡಿ, ಈ ವ್ಯವಸ್ಥೆಯನ್ನು ಪರಿಷ್ಕರಿಸಬೇಕು. ಈಗಾಗಲೆ ತಾಲೂಕು ಕೇಂದ್ರದಲ್ಲಿರುವ ಕೇಂದ್ರ ಸರ್ಕಾರಿ ನೌಕರರು ಶೇ. ೧೦ ರಷ್ಟು ಹೆಚ್‌ಆರ್‌ಎ ಪಡೆಯುತ್ತಿದ್ದಾರೆ. ಇದೇ ಮಾದರಿಯನ್ನು ರಾಜ್ಯದಲ್ಲಿಯೂ ಅಳವಡಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಗ್ರಾಮೀಣ ಭತ್ಯೆ ಮಂಜೂರು ಮಾಡುವಂತೆ ಮನವಿ ಮಾಡಿಕೊಳ್ಳಲಾಯಿತು. ನೌಕರರ ಸಂಘದ ನಿಯೋಗದ ಈ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬೇಡಿಕೆ ಈಡೇರಿಕೆಯ ಆಶಾಭಾವನೆ ಇದೆ ಎಂದು ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಹೇಳಿದ್ದಾರೆ.
ನಿವೃತ್ತಿ ವಯಸ್ಸು ಗೊಂದಲ-ಸ್ಪಷ್ಟನೆ : ಸರ್ಕಾರಿ ನೌಕರರ ವಯೋನಿವೃತ್ತಿಯು ೬೦ ವರ್ಷದಿಂದ ೫೮ ಕ್ಕೆ ಇಳಿಸಲಾಗಿದೆ ಎಂಬ ವದಂತಿ ಸರ್ಕಾರಿ ನೌಕರರಲ್ಲಿ ಹರಡಿದ್ದು, ಈ ಕುರಿತಂತೆ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಆದರೆ ಸರ್ವೋಚ್ಛ ನ್ಯಾಯಾಲಯದಲ್ಲಾಗಲಿ, ಅಥವಾ ರಾಜ್ಯ ಸರ್ಕಾರದ ಮುಂದಾಗಲಿ ಇಂತಹ ಯಾವುದೇ ಪ್ರಸ್ತಾಪವಿರುವುದಿಲ್ಲ ಎಂಬ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಇಂತಹ ಸುಳ್ಳು ವದಂತಿಗಳಿಗೆ ರಾಜ್ಯ ಸರ್ಕಾರಿ ನೌಕರರು ಕಿವಿಗೊಡಬಾರದು ಎಂದು ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಮತ್ತು ಪ್ರಧಾನ ಕಾರ್ಯದರ್ಶಿ ಆರ್.ಜೆ. ನಾಗರಾಜ್ ಮನವಿ ಮಾಡಿಕೊಂಡಿದ್ದಾರೆ.
0 comments:
Post a Comment