ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಅಧ್ಯಕ್ಷ ಸ್ಥಾನಕ್ಕಾಗಿ ಬುಧವಾರ ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಬಂಡಿಹರ್ಲಾಪುರ ಕ್ಷೇತ್ರದ ಟಿ. ಜನಾರ್ಧನ ಹುಲಿಗಿ ಅವರು ಆಯ್ಕೆಯಾಗಿರುವು
ದಾಗಿ ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತರೂ ಆಗಿರುವ ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಘೋಷಿಸಿದರು.
ಜಿ.ಪಂ. ಅಧ್ಯಕ್ಷರಾಗಿದ್ದ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕೊಪ್ಪಳ ಶಾಸಕರಾದ ಕಾರಣ, ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ, ಬುಧವಾರ ಜಿ.ಪಂ. ಸಭಾಂಗಣದಲ್ಲಿ ಜರುಗಿತು. ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆಯವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಬಿಜೆಪಿ ಪಕ್ಷದಿಂದ ಅಮರೇಶ್ ಕುಳಗಿ ಒಂದು ನಾಮಪತ್ರ ಹಾಗೂ ಕಾಂಗ್ರೆಸ್‌ನಿಂದ ಟಿ. ಜನಾರ್ಧನ ಹುಲಿಗಿ ಅವರು ಎರಡು ನಾಮಪತ್ರ ಸಲ್ಲಿಸಿದರು. ಅಮರೇಶ್ ಕುಳಗಿ ಅವರಿಗೆ ಪಿಲ್ಲಿ ವೆಂಕಟರಾವ್, ಟಿ. ಜನಾರ್ಧನ ಹುಲಿಗಿ ಅವರಿಗೆ ಸೀತಾ ಗೂಳಪ್ಪ ಹಲಗೇರಿ ಮತ್ತು ವೀರೇಶ್ ಸಾಲೋಣಿ ಅವರು ಸೂಚಕರಾಗಿದ್ದರು.
ಸದ್ಯ ಒಟ್ಟು ೨೬ ಸದಸ್ಯ ಬಲ ಹೊಂದಿರುವ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಟಿ. ಜನಾರ್ಧನ ಹುಲಿಗಿ ಅವರು ೧೯-೭ ಅಂತರದಲ್ಲಿ ಬಹುಮತ ಪಡೆದು, ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಜಿಲ್ಲಾ ಬಿಸಿಎಂ ಅಧಿಕಾರಿ ಕಲ್ಲೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ದೊರೈಸ್ವಾಮಿ, ಪಶುಸಂಗೋಪನಾ ಇಲಾಖೆ ಡಿಡಿ ಡಾ. ನಿಂಬರಗಿ, ಜಲಾನಯನ ಅಧಿಕಾರಿ ಡಾ. ಮಲ್ಲಿಕಾರ್ಜುನ, ರೇಷ್ಮೆ ಇಲಾಖೆ ಡಿಡಿ ದಾದನೂರ, ಉಪಅರಣ್ಯ ಸಂರಕ್ಷಣಾಧಿಕಾರಿ ರಾಜಶೇಖರ್ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
0 comments:
Post a Comment