PLEASE LOGIN TO KANNADANET.COM FOR REGULAR NEWS-UPDATES


  ಸನತ್‌ಕುಮಾರ ಬೆಳಗಲಿ

ಎಲ್ಲೋ ಸಿದ್ದರಾಮನ ಹುಂಡಿಯಲ್ಲಿದ್ದ ಬಡ ಕುರುಬ ಹುಡುಗನೊಬ್ಬ ರಾಜ್ಯದ ಮುಖ್ಯಮಂತ್ರಿಯಾಗುವುದು, ತುಮಕೂರಿನ ಇನ್ಯಾವುದೋ ಹಳ್ಳಿಯಲ್ಲಿ ನೇಕಾರ ಕುಟುಂಬದಲ್ಲಿ ಹುಟ್ಟಿದ ಉಮಾಶ್ರೀ ದೂರದ ಬಾಗಲಕೋಟೆ ಜಿಲ್ಲೆಯ ತೇರವಾಳದಿಂದ ಸ್ಪರ್ಧಿಸಿ ಗೆದ್ದು ಸಚಿವ ಸಂಪುಟ ಸೇರುವುದು, ಗುಲ್ಬರ್ಗದ ಎಂ.ಎಸ್.ಕೆ.ಮಿಲ್‌ನ ಲೇಬರ್ ಕಾಲನಿಯಲ್ಲಿ ಬೆಳೆದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಮಂತ್ರಿಯಾಗುವುದು ಹೀಗೆ ನೂರಾರು ಸಾಧಕರಗಳ ಹೆಸರುಗಳನ್ನು ಹೇಳಬಹುದು. ಇದನ್ನೇ ಪ್ರಜಾಪ್ರಭುತ್ವದ ಪವಾಡ ಎಂದು ವ್ಯಾಖ್ಯಾನಿಸಲಾಗುತ್ತದೆ. ರಾಜ ಮಹಾರಾಜರ ಕಾಲದಲ್ಲಿ ದಲಿತರು ಮತ್ತು ಹಿಂದುಳಿದ ಕುಟುಂಬದಲ್ಲಿ ಜನಿಸಿದ ವ್ಯಕ್ತಿ ಪ್ರಭುತ್ವದ ಸೂತ್ರಧಾರನಾಗುವ ಅವಕಾಶವಿರಲಿಲ್ಲ. ಆದರೆ ಜನತಂತ್ರ ಬಂದ ನಂತರ ಇಂಥ ಅವಕಾಶ ದೊರಕಿತು.ಭಾರತದಲ್ಲಿರುವುದು ಬಂಡವಾಳಶಾಹಿ ಪೋಷಿತ ಪ್ರಜಾಪ್ರಭುತ್ವವಾದರೂ ಈ ವ್ಯವಸ್ಥೆಯಲ್ಲಿ ಅವಕಾಶ ವಂಚಿತ ಸಮುದಾಯಗಳ ನಡುವಿನಿಂದ ಪ್ರಭುತ್ವದಲ್ಲಿ ಪಾಲ್ಗೊಳ್ಳುವ ಅವಕಾಸ ದೊರಕಿತು. ದಾವಣೆಗೆರೆಯಲ್ಲಿ ಕಾಟನ್ ಮಿಲ್ ಕಾರ್ಮಿಕನಾಗಿದ್ದ ಪಂಪಾಪತಿ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಮೂರು ಬಾರಿ ವಿಧಾನಸಭಾ ಸದಸ್ಯರಾಗಿದ್ದರು. ಅಂಥ ದಾವಣಗೆರೆ ಈಗ ಶಾಮನೂರು ಪಾಳೆಯವಾಗಿದೆ. ಆ ಬಗ್ಗೆ ಇನ್ನೊಮ್ಮೆ ಬರೆಯಬಹುದು.
ಶ್ರೇಣೀಕೃತ ಸಮಾಜದಲ್ಲಿ ಏಣಿಯ ಕೆಳಗಿರುವ ಅವಕಾಶ ವಂಚಿತ ವ್ಯಕ್ತಿಯೊಬ್ಬ ಮೇಲೇರುವುದು ಸುಲಭವಲ್ಲ. ಡಾ. ಅಂಬೇಡ್ಕರ್ ರೂಪಿಸಿದ ಸಂವಿಧಾನವನ್ನು ನಾವು ಅಂಗೀಕರಿಸಿದ್ದೇನೋ ನಿಜ. ಈಗ ಪ್ರಜಾಪ್ರಭುತ್ವ ರಾಜಕೀಯ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದೇವೆ. ಆದರೆ ಭಾರತೀಯ ಸಮಾಜ ಇನ್ನೂ ಸಂಪೂರ್ಣ ಪ್ರಜಾ ಪ್ರಭುತ್ವೀಕರಣಗೊಂಡಿಲ್ಲ. ಪಾಳೆಯಗಾರಿಕೆ ಜಾತಿಗಾಗಿ ಶಕ್ತಿಗಳು ಇಂದಿಗೂ ಅಲ್ಲಿ ಆಳವಾಗಿ ಬೇರೂರಿವೆ. ಪ್ರಭುತ್ವದ ಅಧಿಕಾರ ಸೂತ್ರವನ್ನು ಬಿಡಲೊಪ್ಪದ ಈ ವರ್ಗಗಳು ದಮನಿತ ವರ್ಗಗಳಿಂದ ಬಂದವರಿಗೆ ಅಧಿಕಾರ ಸೂತ್ರ ಬಿಟ್ಟುಕೊಡಲು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.
ಆಸ್ತಿ ಮತ್ತು ಅಧಿಕಾರ ತಮ್ಮದೇ ಕುಟುಂಬದ ಸೊತ್ತಾಗಿರಲಿ ಎಂದು ತಮ್ಮ ನಂತರ ತಮ್ಮ ಮಕ್ಕಳನ್ನು ಅಧಿಕಾರಕ್ಕೆ ತರುವ ಎಲ್ಲ ಹುನ್ನಾರ ಗಳನ್ನು ಈ ಮೇಲ್ವರ್ಗದ ರಾಜಕಾರಣಿಗಳು ನಡೆಸುತ್ತಾರೆ. ಅಂತಲೇ ಇಲ್ಲಿ ಅಪ್ಪ-ಮಕ್ಕಳು, ಮಕ್ಕಳ ಪಕ್ಷಗಳು ಹುಟ್ಟಿಕೊಳ್ಳುತ್ತವೆ. ಉಮೇಶ ಕತ್ತಿಯಂಥವರು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆ ಮಾಡಿ ತನ್ನ ಮಗನನ್ನು ಮುಖ್ಯಮಂತ್ರಿ ಮಾಡುವ ಕನಸು ಕಾಣುತ್ತಾರೆ. ಈ ಎಲ್ಲ ಅಡ್ಡಿ ಆತಂಕಗಳನ್ನು ಎದುರಿಸಿ ಶ್ರೇಣೀಕೃತ ಸಮಾಜದ ತಳದಲ್ಲಿರುವ ವ್ಯಕ್ತಿ ಮೇಲೆ ಬರಬೇಕಾಗುತ್ತದೆ.
ಬಿಹಾರದ ಲಾಲೂ ಪ್ರಸಾದ್ ಯಾದವ್, ಉತ್ತರ ಪ್ರದೇಶದ ಮಾಯಾವತಿ, ಕೇರಳದ ಅಚ್ಯುತಾನಂದನ್ ಹೀಗೆ ಮುಳ್ಳುಬೇಲಿಗಳನ್ನು ದಾಟಿ ಬಂದವರು ಅನೇಕರಿದ್ದಾರೆ. ಇಂಥವರ ಸಂಖ್ಯೆ ಕರ್ನಾಟಕದಲ್ಲಿ ಇನ್ನೂ ಹೆಚ್ಚಿದೆ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಎಪ್ಪತ್ತರ ದಶಕದಲ್ಲಿ ಶೋಷಿತ ವರ್ಗಗಳ ನಡುವಿನಿಂದ ಅನೇಕ ಯುವಕರನ್ನು ಹಾಗೂ ಮೇಲ್ಜಾತಿಗಳ ಪ್ರಗತಿಪರ ತರುಣರನ್ನು ರಾಜಕಾರಣಕ್ಕೆ ತಂದರು. ಹೀಗೆ ಬಂದವರಲ್ಲಿ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ರಮೇಶ್ ಕುಮಾರ್ ನಮ್ಮ ನಡುವೆ ಇದ್ದಾರೆ. ಕರ್ನಾಟಕದ ರಾಜಕಾರಣಕ್ಕೆ ಹೊಸ ಸ್ಪರ್ಶ ನೀಡಿದ ಅರಸು ನಂತರ ಬಂಗಾರಪ್ಪ, ಮೊಯ್ಲಿ ಮುಖ್ಯಮಂತ್ರಿಗಳಾದರೂ ಅವರನ್ನು ಮೇಲ್ವರ್ಗಗಳು ಸಹಿಸಲಿಲ್ಲ.
ಶೋಷಿತ ವರ್ಗಗಳ ವ್ಯಕ್ತಿ ರಾಜಕೀಯ ಅಧಿಕಾರ ಪಡೆಯಲು ಹೊರಟಾಗ ಮೇಲ್ಜಾತಿಯ ಅನೇಕರು ಲೇವಡಿ ಮಾಡುತ್ತಾರೆ. ದಕ್ಷತೆಯ ಪ್ರಶ್ನೆಯನ್ನು ಎತ್ತುತ್ತಾರೆ. ಜಾತಿಗೂ ದಕ್ಷತೆಗೂ ಗಂಟು ಹಾಕುತ್ತಾರೆ. ಮೊನ್ನೆ ಸಿದ್ದರಾಮಯ್ಯನವರು ಅಧಿಕಾರ ವಹಿಸಿಕೊಂಡಾಗಲು ನಾನು ವಾಕಿಂಗ್ ಹೋಗಿದ್ದ ಉದ್ಯಾನವೊಂದರಲ್ಲಿ ಇಂಥ ಕೊಳಕು ಮಾತುಗಳನ್ನು ಕೇಳಿದೆ. ಶ್ರೀಮಂತ ಕುಟುಂಬದ ನಿವೃತ್ತ ಸರಕಾರಿ ಅಧಿಕಾರಿಗಳಿಬ್ಬರು ‘ಮುಖ್ಯಮಂತ್ರಿ ಕಚೇರಿ ಇನ್ನು ಕುರುಬರ ಹಟ್ಟಿಯಾಗುತ್ತದೆ’ ಎಂದು ವ್ಯಂಗ್ಯ ಮಾಡುತ್ತಿದ್ದರು.
ದಕ್ಷತೆಯನ್ನೇ ಮಾನದಂಡವಾಗಿಟ್ಟು ಕೊಂಡರೆ ಅಹಿಂದ ವರ್ಗಗಳಿಂದ ಬಂದವರೇ ಸರಸಾಟಿಯಿಲ್ಲದ ಸಾಧ್ಯ ಮಾಡಿದ್ದಾರೆ. ಚಿತ್ರದುರ್ಗದ ಚಳ್ಳಕೆರೆಯ ಬಡ ಬೀಡಿ ಕಾರ್ಮಿಕನ ಮಗನಾಗಿ ಜನಿಸಿದ ಸಿ.ಕೆ.ಜಾಫರ್ ಶರೀಫ್ ಬಡತನದಿಂದಾಗಿ ಹೆಚ್ಚು ಓದಲು ಆಗಲಿಲ್ಲ. ಆದರೆ ಕಾಂಗ್ರೆಸ್ ರಾಜಕಾರಣದಲ್ಲಿ ಕಷ್ಟಪಟ್ಟು ಮೇಲೇರಿ ಕೇಂದ್ರ ರೇಲ್ವೆ ಸಚಿವರಾದರು. ರೈಲು ಖಾತೆಯಲ್ಲಿ ಶರೀಫ್ ಮಾಡಿದ ಸಾಧನೆ ನಮ್ಮ ಮುಂದಿದೆ. ಕರ್ನಾಟಕಕ್ಕೆ ಆ ವರೆಗೆ ಆಗಿದ್ದ ಅನ್ಯಾಯವನ್ನು ಐದೇ ವರ್ಷದಲ್ಲಿ ಸರಿಪಡಿಸಿದರು.ರಾಜ್ಯದ ಮೂಲೆಮೂಲೆಗೆ ಬ್ರಾಡಗೇಜ್ ಮಾರ್ಗ ನಿರ್ಮಿಸಿದರು. ಎಲ್ಲ ನಿಲ್ದಾಣಗಳನ್ನು ಆಧುನೀಕರಣಗೊಳಿಸಿದರು. ಹೊಸ ಮಾರ್ಗಗಳನ್ನು ಹಾಕಿದರು.
ಕರ್ನಾಟಕದಿಂದ ಈ ಹಿಂದೆ ಕೆಂಗಲ್ ಹನುಮಂತಯ್ಯ, ಪೂಣಚ್ಚರಂಥವರು ರೈಲು ಮಂತ್ರಿಗಳಾಗಿದ್ದರೂ ಕರ್ನಾಟಕಕ್ಕೆ ಆಗಿದ್ದ ಅನ್ಯಾಯವನ್ನು ಸರಿಪಡಿಸಲು ಆಗಿರಲಿಲ್ಲ. ಆದರೆ ಜಾಫರ್ ಶರೀಫ್‌ರು ಕರ್ನಾಟಕಕ್ಕೆ ಅಪೂರ್ವ ಸೌಕರ್ಯಗಳನ್ನು ಕಲ್ಪಿಸಿದರು. ಆಗ ಉಳಿದ ರಾಜ್ಯಗಳ ಕಾಂಗ್ರೆಸ್ ಸಂಸದರೇ ‘‘ಶರೀಫ್ ಕರ್ನಾಟಕದ ಪಕ್ಷಪಾತಿ’’ ಎಂದು ಟೀಕಿಸಿದರು. ಆದರೆ ಕನ್ನಡಿಗರಾದ ನಾವು ಶರೀಫ್‌ರನ್ನು ಮರೆತಿದ್ದೇವೆ. ಯಾಕೆಂದರೆ ಅವರು ಮೇಲ್ಜಾತಿ, ಮೇಲ್ವರ್ಗಗಳಿಗೆ ಸೇರಿದವರಲ್ಲ.
ಇದೇ ಸಿದ್ದರಾಮಯ್ಯ ಮೊದಲ ಬಾರಿ ಹಣಕಾಸು ಸಚಿವರಾಗಿದ್ದಾಗ ‘‘ಕುರಿ ಎಣಿಸಲು ಬಾರದವನಿಗೆ ಈ ಖಾತೆಯನ್ನು ಹೇಗೆ ನಿಭಾಯಿ ಸಲು ಸಾಧ್ಯವಾಗುತ್ತದೆ’’ ಎಂದು ಲೇವಡಿ ಮಾಡಿದ ವರಿದ್ದರು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಏಳು ಮುಂಗಡ ಪತ್ರ ಮಂಡಿಸಿದ ಸಿದ್ದರಾಮಯ್ಯ ಖಾಲಿಯಾಗಿದ್ದ ಕರ್ನಾಟಕದ ಬೊಕ್ಕಸವನ್ನು ತುಂಬಿದರು. ಇದು ದಕ್ಷತೆ ಅಲ್ಲದೆ ಮತ್ತೇನು? ಇದನ್ನು ಮೇಲ್ಜಾತಿಯ ಒಬ್ಬನೆ ಒಬ್ಬ ಮಾಡಿದರೆ ಈ ಸಮಾಜ ಹಾಡಿ ಹೊಗಳುತ್ತದೆ.
ಗುಲ್ಬರ್ಗದ ಎಂ.ಎಸ್.ಕೆ. ಮಿಲ್ ಕಾರ್ಮಿಕನ ಮಗನಾದ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಕಾರ್ಮಿಕ ಸಚಿವರಾಗಿ ಮಾಡಿದ ಸಾಧನೆ ಅಭೂತಪೂರ್ವವಾದುದು. ಹಿಂದಿನ ಯಾವ ಕಾರ್ಮಿಕ ಸಚಿವನೂ ಇಷ್ಟೊಂದು ದಕ್ಷತೆ ತೋರಿಸಿ ರಲಿಲ್ಲ. ಜಾಗತೀಕರಣ, ಉದಾರೀಕರಣದ ಈ ದಿನಗಳಲ್ಲಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪೆನಿಗಳ ಒತ್ತಡದ ನಡವೆ ಖರ್ಗೆಯವರು ಕಾರ್ಮಿಕ ಖಾತೆಯನ್ನು ಕಾರ್ಮಿಕ ಪರವಾದ ಖಾತೆಯನ್ನಾಗಿ ಮಾಡಲು ಹರಸಾಹಸ ಮಾಡುತ್ತಿದ್ದಾರೆ.
ಇಂಥ ಸಿದ್ದರಾಮಯ್ಯ, ಖರ್ಗೆ, ಜಾಫರ್ ಶರೀಫ್ ಅಂಥವರು ಶ್ರೇಣೀಕೃತ ಸಮಾಜದ ಮುಳ್ಳುಬೇಲಿಗಳನ್ನು ದಾಟಿ ಮೇಲೆ ಹತ್ತಿ ಬಂದರೆ ಅವರನ್ನು ಮೂಲೆಗುಂಪು ಮಾಡಲು ಶೋಷಿತ ವರ್ಗಗಳು ನಾನಾ ಹುನ್ನಾರ ನಡೆಸುತ್ತವೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಯಾದಾಗ ಖರ್ಗೆ ಹೆಸರಿನಲ್ಲಿ ನಡೆದ ಪ್ರತಿಭಟನೆಗಳು ಇಂಥ ಹುನ್ನಾರದಿಂದ ಮುಕ್ತವಾಗಿವೆ ಎಂದು ಹೇಳಲಾಗುವುದಿಲ್ಲ. ಅಂತಲೆ ತುಳಿತಕ್ಕೊಳಗಾದ ಜನವರ್ಗಗಳು ಇಂಥ ಮಸಲತ್ತಿನ ಬಗ್ಗೆ ಎಚ್ಚರವಾಗಿರಬೇಕಾಗಿದೆ.

ಆದರೆ ಜಾತಿಯೊಂದೇ ನಾಯಕತ್ವದ ಅರ್ಹತೆಯನ್ನು ನಿರ್ಧರಿಸುವುದಿಲ್ಲ. ಯಾವುದೇ ಯಾರದೇ ಮುಲಾಜಿಲ್ಲದೆ ದಿಟ್ಟಹೆಜ್ಜೆ ಇಡುವ ಛಲಗಾರಿಕೆ ಇದ್ದವರು ನಿಜವಾದ ನಾಯಕ ನಾಗುತ್ತಾನೆ. ಅನಿಲ್ ಲಾಡ್, ಡಿ.ಕೆ.ಶಿವಕುಮಾರ್‌ರಂಥವರನ್ನು ಹೊರಗಿಟ್ಟು ಸಂಪುಟ ರಚಿಸಿದ ಸಿದ್ದರಾಮಯ್ಯ ಈಗ ಅಂಥ ದಿಟ್ಟತನ ತೋರಿಸಿದ್ದಾರೆ. ಮೂಲ ಕಾಂಗ್ರೆಸ್ಸಿನ ಯಾವ ನಾಯಕರಿಗೂ ಇಂಥ ಧೈರ್ಯದ ಹೆಜ್ಜೆ ಇಡಲು ಸಾಧ್ಯವಾಗುತ್ತಿರಲಿಲ್ಲ. ಅಂತಲೇ, ನಾಡಿನ ಪ್ರಗತಿಪರರು ಸಿದ್ದರಾಮಯ್ಯನವರ ಮೇಲೆ ಭರವಸೆ ಇಟ್ಟಿದ್ದಾರೆ.
ಸಿದ್ದರಾಮಯ್ಯ, ಖರ್ಗೆ ಅಧಿಕಾರಕ್ಕೆ ಬಂದರೆ ಶತಮಾನಗಳಿಂದ ತುಳಿಯಲ್ಪಟ್ಟ ಜನವರ್ಗಗಳು ಒಮ್ಮಿಂದೊಮ್ಮೆಲೆ ಶೋಷಣೆಯಿಂದ ಮುಕ್ತವಾಗುತ್ತವೆ ಎಂದು ಸಮಾಜ ರಚನೆಯ ತಿಳುವಳಿಕೆ ಇರುವ ಯಾರು ಒಪ್ಪಿಕೊಳ್ಳುವುದಿಲ್ಲ. ಆದರೆ ಇರುವ ವ್ಯವಸ್ಥೆಯಲ್ಲೇ ಸಾಮಾಜಿಕ ನ್ಯಾಯದ ದಿಕ್ಕಿನತ್ತ ಇದೊಂದು ಪುಟ್ಟಹೆಜ್ಜೆ. ದಮನಿತ ವರ್ಗಗಳಿಗೆ ಇದರಿಂದ ಬೇರೇನೂ ಸಿಗದಿದ್ದರು ನಮ್ಮ ನಡುವಿನ ವ್ಯಕ್ತಿಯೊಬ್ಬ ಅಧಿಕಾರ ಸೂತ್ರ ಹಿಡಿದಿದ್ದಾನೆಂಬ ಹೆಮ್ಮೆ ಉಂಟಾಗುತ್ತದೆ. ಈ ಹೆಮ್ಮೆಯೂ ಅವಶ್ಯವಲ್ಲವೇ?

Advertisement

0 comments:

Post a Comment

 
Top