PLEASE LOGIN TO KANNADANET.COM FOR REGULAR NEWS-UPDATES



ಈ ವರ್ಷದ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ. ೨೬ ರಿಂದ ಜೂನ್ ೦೫ ರವರೆಗೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಹುಲಿಗೆಮ್ಮ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಮನವಿ ಮಾಡಿದ್ದಾರೆ.
ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಅಂಗವಾಗಿ ಮೇ. ೨೬ ರಂದು ಕಂಕಣಧಾರಣ, 
ಜೂ. ೦೧ ರಂದು ಉತ್ಸವ, 
ಜೂ. ೦೨ ರಂದು ಅಕ್ಕಿಪಡಿ ಹಾಗೂ ಅಂದು ಸಂಜೆ ೫-೩೦ ಗಂಟೆಗೆ ಮಹಾರಥೋತ್ಸವ ನೆರವೇರಲಿದೆ.  ಅಲ್ಲದೆ 
ಜೂ. ೩ ರಂದು ಬಾಳಿದಂಡಿಗಿ, ಕೊಂಡದ ಪೂಜಾ, ಗಂಗಾದೇವಿ ಪೂಜಾ, ಬಾಳಿದಂಡಿಗೆ ಆರೋಹಣ, 
ಜೂ.೦೪ ರಂದು ಪಾಯಸ ಅಗ್ನಿಕುಂಡ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.  
ಶ್ರೀ ಹುಲಿಗೆಮ್ಮ ದೇವಿಗೆ ಸಲ್ಲಿಸುವ ಮುಡುಪು, ಬೆಳ್ಳಿ, ಬಂಗಾರ ಇತ್ಯಾದಿ ಕಾಣಿಕೆಗಳನ್ನು, ದೇವಸ್ಥಾನದ ಕಚೇರಿಯಲ್ಲಿ ಕೊಟ್ಟು ರಶೀದಿ ಪಡೆಯಬೇಕು.  ಜಾತ್ರೆಯ ಸಂದರ್ಭದಲ್ಲಿ ಯಾವುದೇ ಪ್ರಾಣಿ ಬಲಿ ನೀಡುವುದನ್ನು ನಿಷೇಧಿಸಲಾಗಿದ್ದು, ಉಲ್ಲಂಘಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು.  ಜಿಲ್ಲಾಧಿಕಾರಿಗಳ ಆದೇಶದಂತೆ ಶ್ರೀ ಹುಲಿಗೆಮ್ಮ ದೇವಸ್ತಾನದ ಮುಂಭಾಗದಲ್ಲಿ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.  ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆಯಿಂದ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಶ್ರ್ರೀ ಹುಲಿಗೆಮ್ಮ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಹುಲಿಗೆಮ್ಮ ದೇವಿ ಜಾತ್ರೆಯಂದು ಪ್ರಾಣಿ ಬಲಿಗೆ ಅವಕಾಶವಿಲ್ಲ : ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ
  ಉತ್ತರ ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾದ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯು ವಿಜೃಂಭಣೆಯಿಂದ ನಡೆಯಲಿದ್ದು, ಆ ಸಂದರ್ಭದಲ್ಲಿ ಪ್ರಾಣಿ ಬಲಿ ನಿಷೇಧಿಸಲಾಗಿದೆ ಎಂದು  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಹೇಳಿದ್ದಾರೆ.
  ಶ್ರೀ ಹುಲಿಗೆಮ್ಮ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ಯಕ್ರಮದ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
  ಉತ್ತರ ಕರ್ನಾಟಕದ ಪ್ರತಿಷ್ಠಿತ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗೆಮ್ಮಾ ದೇವಿಯ ಜಾತ್ರೆಯು ಅತಿ ವಿಜೃಂಭಣೆಯಿಂದ ಪ್ರತಿ ವರ್ಷ ಜರುಗುತ್ತಿದ್ದು, ಈ ಬಾರಿಯ ಜಾತ್ರಾ ಮಹೋತ್ಸವವು ಮೇ. ೨೬ ರಿಂದ ಜೂನ್ ೦೫ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.  ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸುವ ಕಾರ್ಯವನ್ನು ದೇವಸ್ಥಾನ ಅಭಿವೃದ್ಧಿ ಸಮಿತಿಯ ಜೊತೆಗೆ ಜಿಲ್ಲಾಡಳಿತ ಕೈಜೋಡಿಸಲಿದೆ.  ಈ ವರ್ಷ ಸುಮಾರು ೬-೭ ಲಕ್ಷ ಭಕ್ತರು ಜಾತ್ರೆಯ ಸಂದರ್ಭದಲ್ಲಿ ಆಗಮಿಸುವ ನಿರೀಕ್ಷೆ ಇದೆ.  ಬರುವ ಭಕ್ತರಿಗೆ ದೇವಸ್ಥಾನದಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ, ಗಂಗಾವತಿ, ಕುಷ್ಟಗಿ, ಯಲಬುರ್ಗಾ, ಕೊಪ್ಪಳ ಮತ್ತು ಹೊಸಪೇಟೆಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುವುದು.  ಶುದ್ಧ ಕುಡಿಯುವ ನೀರು ಪೂರೈಸಲು ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ. ಜಾತ್ರೆ ಸಂದರ್ಭದಲ್ಲಿ ಪ್ರಾಣಿಬಲಿ ಕೊಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.  ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಹಿರಿಯರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಾಣಿಬಲಿ ನಿಷೇಧ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಕಳಕಳಿಯ ಮನವಿ ಮಾಡಿಕೊಂಡರು.  
  ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಮೂಲಭೂತ ಸೌಲಭ್ಯ ಒದಗಿಸಲು ಅಗತ್ಯ ಏರ್ಪಾಡುಗಳನ್ನು ಕೈಗೊಳ್ಳಲಾಗಿದೆ.  ನಿರಂತರ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ವೈದ್ಯ ಅವರು ಮನವಿ ಮಾಡಿಕೊಂಡರು.
  ಸಭೆಯಲ್ಲಿ ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಸಿ.ಎಸ್. ಚಂದ್ರಮೌಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹದೇವ ಸ್ವಾಮಿ, ದೇವದಾಸಿ ಪುನರ್ವಸತಿ ನಿಗಮದ ಸುಧಾ ಎಂ.ಚಿದ್ರಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಹುಲಿಗೆಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಸದಸ್ಯರುಗಳು ಭಾಗವಹಿಸಿದ್ದರು. 


Advertisement

0 comments:

Post a Comment

 
Top