‘‘ಕಳೆದ 20 ವರ್ಷಗಳಿಂದ ಪೊಲೀಸರು ಸುಮ್ಮಗಿದ್ದಾರೆ. ಅಸ್ಸಾಮಿನ ನೆಲ್ಲಿಯಲ್ಲಿ ಪೊಲೀಸರು ಸರಿದು ನಿಂತರು. 3 ಸಾವಿರಕ್ಕೂ ಹೆಚ್ಚು ಹೆಣಗಳ ರಾಶಿಯನ್ನು ಹಾಕಿದೆವು’’ ‘‘ಗಂಗಾ ನದಿ ಮುಸ್ಲಿಮರ ಹೆಣಗಳಿಂದ ತುಂಬಿ ಹೋಯಿತು’’ ‘‘ಗುಜರಾತಿನಲ್ಲಿ ಪೊಲೀಸರು ಸುಮ್ಮನಿದ್ದರು. ನಾವು ಏನು ಮಾಡಿದೆವು ಎನ್ನುವುದು ನಿಮಗೆ ಗೊತ್ತೇ ಇದೆ...’’ ಇಂತಹ ಮಾತುಗಳನ್ನು ಈ ದೇಶದಲ್ಲಿ ಸಾರ್ವಜನಿಕ ವಾಗಿ ಆಡಬಹುದಾದರೆ, ಇದನ್ನು ಪ್ರಜಾಸತ್ತಾತ್ಮಕ ದೇಶವೆಂದು ಕರೆಯುವುದು ಹೇಗೆ? ಇದು ನಿಜಕ್ಕೂ ಪ್ರಜೆ ಸತ್ತ ದೇಶವಾಗಿರಬೇಕು. ಇಂತಹ ಮಾತುಗಳ ನ್ನಾಡಿದ ವ್ಯಕ್ತಿ ಈ ದೇಶಕ್ಕೆ ಸಂಬಂಧ ಪಟ್ಟ ವನಾಗಿರಲು ಸಾಧ್ಯವೆ? ಒಂದೋ ಈತನನ್ನು ನೆರೆಯ ಪಾಕಿಸ್ತಾನ ಛೂಬಿಟ್ಟು, ಭಾರತವನ್ನು ಒಡೆಯುವುದಕ್ಕೆ ಕಾರ್ಯತಂತ್ರ ರೂಪಿಸಿರ ಬೇಕು. ಇಲ್ಲವೇ ಈತನಿಗೆ ಮತಿಗೆಟ್ಟಿರಬೇಕು. ಅಥವಾ ಈ ದೇಶದ ಪ್ರಜಾಸತ್ತೆ ಸತ್ತಿರಬೇಕು. ವಿಶ್ವ ಹಿಂದೂ ಪರಿಷತ್ ಎಂದು ಕರೆಸಿಕೊಂಡ ಸಂಘಟನೆಯ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಎಂಬಾತ ಆಡಿದ ವಿಷಪೂರಿತ ಮಾತುಗಳ ಕೆಲವು ಸ್ಯಾಂಪಲ್‌ಗಳನ್ನು ಮೇಲೆ ನೀಡಲಾಗಿದೆ. ಈತನ ಈ ಭಾಷಣ ಇಂದು ಯೂಟ್ಯೂಬಿನಲ್ಲಿ ಹರಿದಾಡುತ್ತಿದೆ. ಆದರೆ ಈವರೆಗೆ ಈತನ ಬಂಧನಕ್ಕೆ ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರೆ. ಇಂದು ಕೊನೆಗೂ ಕೇಂದ್ರದ ಒತ್ತಡದ ಮೇಲೆ ಈತನ ಮೇರೆಗೆ ಕೇಸು ದಾಖಲಾಗಿದೆ. ಬಂಧನ ಇನ್ನಷ್ಟೇ ಆಗಬೇಕಾಗಿದೆ.
ಹೈದರಾಬಾದಿನ ಶಾಸಕ ಅಕ್ಬರುದ್ದೀನ್ ಉವೈಸಿ ಎಂಬಾತ ಆಡಿದ ಮಾತಿಗೆ ಇದು ಪ್ರತಿಕ್ರಿಯೆಯಂತೆ. ಹೈದರಾಬಾದ್‌ನಲ್ಲಿ ತನ್ನ ಮತಿಗೆಟ್ಟ ಅನುಯಾಯಿಗಳ ಮುಂದೆ ಪ್ರಚೋದನಾತ್ಮಕ ಮಾತುಗಳನ್ನಾಡುತ್ತಾ ಅಕ್ಬರುದ್ದೀನ್ ಉವೈಸಿ ‘‘ಕೆಲವು ನಿಮಿಷ ಪೊಲೀಸರನ್ನು ಸುಮ್ಮಗಿರಿಸಿ. ನಾವು ಮಾಡಿತೋರಿಸುತ್ತೇವೆ’’ ಎಂದು ವಿಷ ಕಾರಿದ್ದಾನೆ. ಈ ಕಾರಣದಿಂದ ಉವೈಸಿಯನ್ನು ಈಗಾಗಲೇ ಬಂಧಿಸಲಾಗಿದೆ. ತೊಗಾಡಿಯಾ ಇದೀಗ ಈ ಭಾಷಣಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದಾನೆ. ಆದರೆ ಈ ಭಾಷಣ ಯಾವುದೇ ಬೆದರಿಕೆಯಲ್ಲ. ‘‘ಈ ಹಿಂದೆ ನಡೆದ ಎಲ್ಲ ಹತ್ಯಾಕಾಂಡಗಳನ್ನು ನಾವೇ ಮಾಡಿದ್ದೇವೆ’’ ಎಂದು ಸಾರ್ವಜನಿಕವಾಗಿ ಘೋಷಿಸಿದ್ದಾನೆ ಈತ. ಅಸ್ಸಾಮಿನ ನೆಲ್ಲಿಯಲ್ಲಿ ನಡೆದ ಹತ್ಯಾಕಾಂಡ, ಬಿಹಾರದ ಬಾಗಲ್ಪುರ ದಲ್ಲಿ ನಡೆದ ನರಮೇಧ, ಮೊರಾದಾಬಾದ್, ಮೀರತ್, ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡಗಳನ್ನೆಲ್ಲ ನಾವೇ ಮಾಡಿದ್ದೇವೆ. ಪೊಲೀಸರು ಸುಮ್ಮಗಿದ್ದ ಪರಿಣಾಮವಾಗಿಯೇ ನಾವಿದನ್ನು ಮಾಡಿದ್ದೇವೆ ಎಂದು ತೊಗಾಡಿಯಾ ಬಹಿರಂಗವಾಗಿ ಒಪ್ಪಿಕೊಂಡಿ ದ್ದಾನೆ. ತಕ್ಷಣ ಈ ಕ್ರಿಮಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಒಪ್ಪಿಸಿ, ನೇಣುಗಂಬಕ್ಕೆ ಏರಿಸುವುದರ ಬದಲಿಗೆ ಪೊಲೀಸರು ಈತನನ್ನು ಬಂಧಿಸಬೇಕೋ ಬೇಡವೋ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ.
ಈ ಹಿಂದೆ ಮಾಲೆಗಾಂವ್, ಮಕ್ಕಾ, ಅಜ್ಮೀರ್ ಸ್ಫೋಟ ನಡೆಸಿದವರು ತಮ್ಮ ಉಗ್ರಕೃತ್ಯಕ್ಕೆ ‘ಮುಸ್ಲಿಮ್ ಭಯೋತ್ಪಾದನೆ’ ಯನ್ನು ಸಮರ್ಥನೆಯಾಗಿ ನೀಡಿದ್ದರು. ಆ ಮೂಲಕ ತಮ್ಮ ಮುಖವನ್ನು ರಕ್ಷಿಸಿಕೊಳ್ಳಲು ಯತ್ನಿಸಿದ್ದರು. ಇಲ್ಲಿ ತೊಗಾಡಿಯಾನೂ ಅಂತಹದೇ ತಂತ್ರವನ್ನು ಬಳಸಿಕೊಂಡಿದ್ದಾನೆ. ‘‘ತಾನು ಉವೈಸಿಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ್ದೇನೆ’’ ಎನ್ನುತ್ತಿದ್ದಾನೆ. ಆದರೆ ಈ ದೇಶ ದಲ್ಲಿ ಗುಜರಾತ್ ಹತ್ಯಾಕಾಂಡ, ಅಸ್ಸಾಮ್ ಹತ್ಯಾಕಾಂಡ, ಮೊರಾದಾಬಾದ್ ನರಮೇಧ ಗಳೆಲ್ಲ ನಡೆದಿರುವುದು ಉವೈಸಿ ಮಾತುಗಳಿಗೆ ಪ್ರತಿಕ್ರಿಯೆಯಾಗಿಯೆ? ತೊಗಾಡಿಯಾ ಈ ದೇಶದಲ್ಲಿ ವಿಷ ಕಾರುತ್ತಾ ಓಡಾಡುತ್ತಿರುವುದು ಇದೇ ಮೊದಲಲ್ಲ. ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡಕ್ಕೆ ಮೊದಲು ಇದೇ ತೊಗಾಡಿಯಾ ಹಲವು ಬಾರಿ ಗುಜರಾತ್‌ಗೆ ಭೇಟಿ ನೀಡಿ, ಉದ್ವಿಗ್ನಕಾರಿ ಭಾಷಣ ಮಾಡಿದ್ದ. ಆ ಸಂದರ್ಭದಲ್ಲಿ ಗೋಧ್ರಾ ರೈಲನ್ನು ಯಾರೂ ಸುಟ್ಟಿರಲಿಲ್ಲ. ಗುಜರಾತ್ ಹತ್ಯಾಕಾಂಡಕ್ಕೆ ತನ್ನ ಭಾಷಣದ ಮೂಲಕ ತೊಗಾಡಿಯಾ ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿದ್ದ.
ಇದೀಗ ತನ್ನ ಭಾಷಣದಲ್ಲಿ ಅವುಗಳನ್ನೆಲ್ಲ ಒಪ್ಪಿಕೊಂಡಿದ್ದಾನೆ. ಈ ಹತ್ಯಾಕಾಂಡದ ಸಂದರ್ಭದಲ್ಲಿ ಪೊಲೀಸರು ಸುಮ್ಮಗಿದ್ದರು ಎಂದು ಹೇಳಿದ್ದಾನೆ ಮಾತ್ರವಲ್ಲ, ಈ ಸಂದರ್ಭದಲ್ಲಿ ನಾವು ಸಹಸ್ರಾರು ಮುಸ್ಲಿಮ ರನ್ನು ಕೊಂದು ಹಾಕಿದ್ದೇವೆ ಎಂದೂ ಕೊಚ್ಚಿ ಕೊಂಡಿದ್ದಾನೆ. ಅಮಾಯಕರನ್ನು ಗಂಗಾನದಿಗೆ ಎಸೆದಿದ್ದೇವೆ ಎನ್ನುವುದು ಯಾವ ಧರ್ಮದ ಶೌರ್ಯ, ಪರಾಕ್ರಮ ಎಂಬುದನ್ನು ಅದನ್ನು ತೊಗಾಡಿಯಾ ಮತ್ತು ಅವನ ಅನುಯಾಯಿ ಗಳೇ ವಿವರಿಸಬೇಕು. ಆದರೆ ಇಷ್ಟನ್ನು ಹೇಳಿದ ಬಳಿಕವೂ ತೊಗಾಡಿಯಾನನ್ನು ಬಂಧಿಸಲು ಹಿಂದೆ ಮುಂದೆ ನೋಡುತ್ತಿರುವ ಪೊಲೀಸ್ ವ್ಯವಸ್ಥೆ ನಿಜಕ್ಕೂ ಈ ದೇಶದಲ್ಲಿ ಅಸ್ತಿತ್ವ ದಲ್ಲಿದೆಯೆ? ತೊಗಾಡಿಯಾ ಹೇಳಿದಂತೆ, ಈ ದೇಶದಲ್ಲಿ ಪೊಲೀಸರು ಮೂಕಪ್ರೇಕ್ಷಕ ರಾಗಿಯೇ ಇದ್ದಾರೆ. ತೊಗಾಡಿಯಾನ ಮೇಲೆ ಕ್ರಮ ಕೈಗೊಳ್ಳುವ ಮೊದಲು ಕೇಂದ್ರ, ಬಟ್ಟೆ ಹೊದ್ದು ಮಲಗಿ ರುವ ಪೊಲೀಸ್ ವ್ಯವಸ್ಥೆಯನ್ನು ಎಬ್ಬಿಸುವ ಕೆಲಸ ಮಾಡಬೇಕಾಗಿದೆ. ನಿದ್ರಿಸಿದರೆ ಎಬ್ಬಿಸಬಹುದು. ಆದರೆ ಪೊಲೀಸರು ನಿದ್ರಿಸುವ ನಾಟಕವನ್ನು ಮಾಡುತ್ತಿದ್ದಾರೆ. ಅವರನ್ನು ಎಬ್ಬಿಸಬೇಕಾದರೆ, ಕಾನೂನಿನ ಬರೆಯನ್ನೇ ಹಾಕಬೇಕಾಗಿದೆ. ಇದರ ಬಳಿಕ ತೊಗಾಡಿಯಾನನ್ನು ಬಂಧಿಸಿ, ಆತನೇ ಒಪ್ಪಿಕೊಂಡ ಎಲ್ಲ ಪ್ರಕರಣಗಳಲ್ಲೂ ಅವನನ್ನು ಆರೋಪಿಯಾಗಿ ಪರಿಗಣಿಸಬೇಕಾಗಿದೆ. ಅವನದೇ ಮಾತುಗಳನ್ನು ಸಾಕ್ಷಿಯಾಗಿ ಬಳಸಿ ಕೊಂಡು ಆತನನ್ನು ಗಲ್ಲಿಗೇರಿಸಬೇಕಾಗಿದೆ. ಈ ದೇಶವನ್ನು ಹಿಂದೂ-ಮುಸ್ಲಿಮ್ ಎಂದು ಒಡೆದು, ನೆರೆಯ ಶತ್ರು ರಾಷ್ಟ್ರಗಳ ಕೆಲಸವನ್ನು ಸುಲಭ ಮಾಡಿಕೊಡುತ್ತಿರುವ ತೊಗಾಡಿಯಾ ಒಬ್ಬ ದೇಶದ್ರೋಹಿ. ಒಂದು ರೀತಿಯಲ್ಲಿ ರೇಬಿಸ್ ಕಾಯಿಲೆಗೀಡಾದ ರೋಗಿ. ಈತನನ್ನು ಸಾರ್ವಜನಿಕವಾಗಿ ಓಡಾಡಲು ಬಿಟ್ಟರೆ, ಆ ರೋಗ ಸರ್ವವ್ಯಾಪಿ ಯಾಗಬಹುದು. ಈ ದೇಶ ಸಂಪೂರ್ಣ ರೇಬಿಸ್ ಕಾಯಿಲೆಗೀಡಾಗುವ ಮೊದಲು ಈ ರೇಬಿಸ್ ಅಂಟಿಸಿಕೊಂಡ ತೊಗಾಡಿಯಾನ ಬಾಯಿ ಮುಚ್ಚಿಸಬೇಕಾಗಿದೆ. -(ವಾರ್ತಾಭಾರತಿ ಸಂಪಾದಕೀಯ)
0 comments:
Post a Comment