PLEASE LOGIN TO KANNADANET.COM FOR REGULAR NEWS-UPDATES


 ಪಾಲಿಸಿದಾರರು ಮಾಡಿಸಿದ ಜೀವ ವಿಮೆಯ ಪೂರ್ಣ ಮೊತ್ತವನ್ನು ಪಾವತಿಸುವಂತೆ ರಿಲಾಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಗೆ ಆದೇಶಿಸಿ, ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.
  ಗಂಗಾವತಿ ತಾಲೂಕು ಮೈಲಾಪುರ ಗ್ರಾಮದ ವಿರುಪನಗೌಡ ತಂದೆ ಅಂದನಗೌಡ ಎಂಬುವವರು ರಿಲಾಯನ್ಸ್ ಲೈಫ್ ಇನ್ಸೂರೆನ್ಸ್ ಕಂಪನಿಯ ಗಂಗಾವತಿ ಶಾಖೆಯಲ್ಲಿ ತಮ್ಮ ಅತ್ತೆ ಗೌರಮ್ಮ ಅವರ ಹೆಸರಿನಲ್ಲಿ ೨ ಲಕ್ಷ ರೂ.ಗಳಿಗೆ ಜೀವವಿಮೆ ಪಾಲಿಸಿಯನ್ನು ಕಳೆದ ೨೦೧೦ ರ ಮಾರ್ಚ್ ೨೨ ರಂದು ಪಡೆದಿದ್ದರು.  ಅಲ್ಲದೆ ಪಾಲಿಸಿಯ ವಾರ್ಷಿಕ ಕಂತು ರೂ. ೨೦೦೦೦ ಗಳಂತೆ ಎರಡು ಕಂತು ಪಾವತಿಸಿದ್ದರು.  ಅಲ್ಲದೆ ವಿರುಪನಗೌಡ ಅವರು ಈ ಪಾಲಿಸಿಯ ನಾಮಿನಿಯಾಗಿದ್ದರು.  ಪಾಲಿಸಿದಾರರಾದ ಗೌರಮ್ಮ ಅವರು ಕಳೆದ ೨೦೧೧ ರ ಡಿಸೆಂಬರ್ ೧೨ ರಂದು ಹೃದಯಾಘಾತದಿಂದ ಮರಣ ಹೊಂದಿದರು.  ಈ ಸಂಗತಿಯನ್ನು ವಿಮಾ ಕಂಪನಿಗೆ ತಿಳಿಸಿ, ಪಾಲಿಸಿ ಮೊತ್ತ ಪಾವತಿಸುವಂತೆ ಕಂಪನಿಗೆ ಕ್ಲೇಮ್ ಫಾರ್ಮ್ ಅನ್ನು ವಿರುಪನಗೌಡ ಅವರು ಸಲ್ಲಿಸಿದರು.  ಆದರೆ ಕಂಪನಿಯು ಪಾಲಿಸಿದಾರಳು ಪಾಲಿಸಿ ಮಾಡಿಸುವ ಸಮಯದಲ್ಲಿ ೭೫ ವರ್ಷ ವಯಸ್ಸಾಗಿರುವುದರಿಂದ ಪಾಲಿಸಿಯ ಪೂರ್ಣ ಮೊತ್ತ ಪಾವತಿಸಲು ಬರುವುದಿಲ್ಲ.  ಕೇವಲ ಫಂಡ್ ವ್ಯಾಲ್ಯೂ ೨೨೬೩೦ ರೂ. ಪಾವತಿಸಲು ಅವಕಾಶವಿದೆ ಎಂದು ಮೊತ್ತ ಪಾವತಿಸಿ, ಪೂರ್ಣ ಪಾಲಿಸಿ ಮೊತ್ತ ಪಾವತಿಸಲು ಕಂಪನಿಯು ನಿರಾಕರಿಸಿತು.  ಇದನ್ನು ಸೇವಾ ನ್ಯೂನತೆ ಎಂದು ಪರಿಗಣಿಸಿ, ಪಾಲಿಸಿಯ ಪೂರ್ಣ ಮೊತ್ತ ಪಾವತಿಸಲು ಕಂಪನಿಗೆ ನಿರ್ದೇಶನ ನೀಡಬೇಕು ಎಂದು ವಿರುಪನಗೌಡ ಅವರು ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆಯ ಮೊರೆ ಹೋಗಿದ್ದರು.
  ಗ್ರಾಹಕರ ವೇದಿಕೆ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ ಹಾಗೂ ಸದಸ್ಯ ಶಿವರೆಡ್ಡಿ. ಬಿ. ಗೌಡ ಅವರು ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ತೀರ್ಪು ನೀಡಿದ್ದು,   ಕಂಪನಿಯ ಪಾಲಿಸಿ ಶೆಡ್ಯೂಲ್ ಪರಿಶೀಲಿಸಿದಾಗ ಅದರಲ್ಲಿ ಪಾಲಿಸಿದಾರಳ ವಯಸ್ಸು ೫೪ ವರ್ಷ ಎಂದು ಹಾಗೂ ಅದನ್ನು ಪರಿಷ್ಕರಿಸಲಾಗಿದೆ ಎಂದು ನಮೂದಿಸಿರುವುದನ್ನು ಪರಿಗಣಿಸಲಾಗಿದ್ದು,  ಕಂಪನಿಯು ವಿನಾಕಾರಣ ಪಾಲಿಸಿಯ ನಾಮಿನಿದಾರರು ಸಲ್ಲಿಸಿದ ಕ್ಲೇಂ-ಫಾರ್ಮ್ ಅನ್ನು ತಿರಸ್ಕರಿಸಿರುವುದು ಸೇವಾ ನ್ಯೂನತೆ ಎಂದು ಪರಿಗಣಿಸಲಾಗಿದೆ.  ಕಂಪನಿಯು ನಿಯಮಾನುಸಾರ ಪಾಲಿಸಿಯ ಪೂರ್ಣ ಮೊತ್ತ ೨ ಲಕ್ಷ ರೂ. ಪಾವತಿಸಬೇಕು.  ಈಗಾಗಲೆ ಪಾವತಿಸಿರುವ ಫಂಡ್ ವ್ಯಾಲ್ಯು ರೂ. ೨೨೬೩೦ ಗಳನ್ನು ಕಡಿತಗೊಳಿಸಿ, ಉಳಿದ ರೂ. ೧,೭೭,೩೭೦ ಗಳನ್ನು ಶೇ. ೧೦ ರ ಬಡ್ಡಿಯೊಂದಿಗೆ ಪಾವತಿಸಬೇಕು. ಹಾಗೂ ಪ್ರಕರಣದ ಖರ್ಚು ೩೦೦೦ ರೂ.ಗಳನ್ನು ೯೦ ದಿನಗಳ ಒಳಗಾಗಿ ಪಾಲಿಸಿಯ ನಾಮಿನಿದಾರರಿಗೆ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

Advertisement

0 comments:

Post a Comment

 
Top