PLEASE LOGIN TO KANNADANET.COM FOR REGULAR NEWS-UPDATES


  ಈಗಿನ ಸಮಾಜದಲ್ಲಿ ಎಲ್ಲರೂ ಒತ್ತಡದ ನಡುವೆ ಕಾರ್ಯ ನಿರ್ವಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ವಾಸ್ಥ್ಯ ಸಮಾಜಕ್ಕಾಗಿ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡುವ ಅಗತ್ಯವಿದೆ ಎಂದು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಕುಮಾರ್ ಅವರು ಹೇಳಿದರು.
  ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಯಾಂಗ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಮಾನಸಿಕ ಆರೋಗ್ಯ ಅರಿವು ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ಮಾನಸಿಕ ಕಾಯಿಲೆಗಳ ಬಗ್ಗೆ ನಮ್ಮ ಸಮಾಜದಲ್ಲಿ ಇಂದಿಗೂ ಸರಿಯಾದ ಅರಿವು ಬಹುತೇಕ ಜನರಿಗೆ ಇಲ್ಲದೆ, ಮೂಢನಂಬಿಕೆ, ಸಮಾಜದಲ್ಲಿ ಬೇರೂರಿರುವ ಅನಿಷ್ಠ ಸಂಪ್ರದಾಯಗಳ ಮೌಢ್ಯತೆಗೆ ಒಳಗಾಗಿ, ಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.  ಸಾಮಾಜಿಕ ವ್ಯವಸ್ಥೆಯಲ್ಲಿನ ಬದಲಾವಣೆ, ಕೂಡುಕುಟುಂಬ ಪದ್ಧತಿಯ ಪತನದಿಂದಾಗಿ, ಇತ್ತೀಚಿನ ಮಕ್ಕಳಿಗೆ ಮಾನವೀಯ ಸಂಬಂಧಗಳ ಪರಿಚಯವೇ ಇಲ್ಲದಂತಾಗುತ್ತಿದೆ.  ಅದರಲ್ಲೂ ವಿದ್ಯಾವಂತ ಕುಟುಂಬಗಳೇ ಇಂತಹ ಸ್ಥಿತಿಗೆ ತಲುಪಿದ್ದು, ವಿವಾಹ ವಿಚ್ಛೇದನಗಳು ಇಂತಹವರಲ್ಲಿಯೇ ಹೆಚ್ಚು.  ಜಗತ್ತಿನಲ್ಲಿ ಶೇ. ೧೦ ರಷ್ಟು ಜನರು ಮಾನಸಿಕ ಅಸ್ವಸ್ಥ್ಯರಿದ್ದರೆ, ಶೇ. ೧ ರಷ್ಟು ತೀವ್ರತನದ್ದಾಗಿದ್ದರೆ, ಶೇ. ೯ ರಷ್ಟು ಜನರಿಗೆ ತಮಗೆ ಮಾನಸಿಕ ತೊಂದರೆ ಇರುವುದೇ ಅರಿವಿಗೆ ಬಂದಿರುವುದಿಲ್ಲ.  ದೇಶದಲ್ಲಿ ೧೯೮೭ ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಗೆ ಬಂದಿದ್ದು, ಈ ಕಾನೂನು ಅನುಷ್ಠಾನಕ್ಕಾಗಿ ಪ್ರತಿ ರಾಜ್ಯಗಳ ಉಚ್ಛ ನ್ಯಾಯಾಲಯಗಳಲ್ಲಿ ಒಬ್ಬರು ನ್ಯಾಯಮೂರ್ತಿಗಳನ್ನು ಇದಕ್ಕಾಗಿಯೇ ನೇಮಿಸಲಾಗಿದೆ.  ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಮಾನಸಿಕ ವಿಭಾಗ ತೆರೆಯಬೇಕು, ಅಲ್ಲದೆ ಒಬ್ಬರು ಮನೋ ವೈದ್ಯರನ್ನು ನೇಮಿಸುವಂತೆ ಸೂಚನೆ ನೀಡಲಾಗಿದೆ.  ಆದರೆ, ರಾಜ್ಯದಲ್ಲಿ ಮನೋ ವೈದ್ಯರ ಕೊರತೆ ಇದೆ.  ಮಾನಸಿಕ ರೋಗ ತಜ್ಞರಾಗಲು ಅಭ್ಯರ್ಥಿಗಳು ಆಸಕ್ತಿ ತೋರುತ್ತಿಲ್ಲ.  ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇದೇ ಪ್ರಥಮ ಬಾರಿಗೆ ಎಲ್ಲ ಜಿಲ್ಲೆಗಳಲ್ಲಿ ವಿನೂತನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ.  ಬಹಳಷ್ಟು ಜನರು ಮಾನಸಿಕ ಅಸ್ವಸ್ಥ್ಯತೆಯಿಂದ ಬಳಲುತ್ತಿದ್ದರೂ, ಅವರಿಗೇ ಅದರ ಅರಿವಿರುವುದಿಲ್ಲ.  ಸಮಾಜದಲ್ಲಿ ಅಂತಹವರಿಗೆ ಗೌರವ ಹಾಗೂ ಅವರ ಮಾತಿಗೆ ಬೆಲೆ ಸಿಗುವುದಿಲ್ಲ.  ಅವರ ಮಾನಸಿಕ ಅಸ್ವಸ್ಥ್ಯತೆಯನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ದೊರಕಿಸುವಂತೆ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.  ಮನೋರೋಗಕ್ಕೆ ಔಷಧಿ ಇಲ್ಲ ಎಂಬ ಕಾಲ ಇದೀಗ ಬದಲಾಗಿದ್ದು, ಎಲ್ಲ ಬಗೆಯ ಮನೋರೋಗಕ್ಕೂ ಸೂಕ್ತ ಔಷಧಿ ಇದ್ದು, ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ.  ಮಾನಸಿಕ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಅರಿವು ಹೊಂದಿದಲ್ಲಿ, ಸುಸಂಸ್ಕೃತ, ಸ್ವಾಸ್ಥ್ಯ, ನೆಮ್ಮದಿಯುತ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ನ್ಯಾಯಮೂರ್ತಿ ಎನ್. ಕುಮಾರ್ ಅವರು ಹೇಳಿದರು.
  ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷ ಡಾ. ಕೆ.ಎ. ಅಶೋಕ್ ಪೈ ಅವರು ಮಾನಸಿಕ ಕಾಯಿಲೆ, ಲಕ್ಷಣಗಳು ಹಾಗೂ ಚಿಕಿತ್ಸೆ ಕುರಿತಂತೆ ವಿಶೇಷ ಉಪನ್ಯಾಸ ನೀಡಿ, ಜಾಗತೀಕರಣ, ಔದ್ಯಮೀಕರಣ, ಸ್ಪರ್ಧಾತ್ಮಕ ಯುಗದಲ್ಲಿನ ಜೀವನ ಶೈಲಿಯನ್ನು ಹೊಂದಿಕೊಳ್ಳಲಾರದೆ ಜನರು ಮಾನಸಿಕ ಒತ್ತಡಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.  ಈ ಒತ್ತಡದ ಜೀವನ ಅನೇಕ ಬಗೆಯ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ.  ಈ ಮಾನಸಿಕ ಅನಾರೋಗ್ಯದ ಸ್ವರೂಪ ವ್ಯಕ್ತಿಯಿಂದ, ವ್ಯಕ್ತಿಗೆ ಬದಲಾಗಿರುತ್ತದೆ.  ಒತ್ತಡದ ನಡುವಿನ ಜೀವನ ಸಾಮಾಜಿಕ ಜೀವನದಲ್ಲಿ ದುಷ್ಪರಿಣಾಮ ಬೀರುತ್ತಿದ್ದು, ಇಂತಹ ಒತ್ತಡದ ಜೀವನವನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಕಲಿತುಕೊಳ್ಳುವ ಅನಿವಾರ್ಯತೆ ಎಲ್ಲರಿಗೆ ಎದುರಾಗಿದೆ.  ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳು ಕಲಿಕಾ ತೊಂದರೆ, ಪರೀಕ್ಷಾ ಭಯ, ಆತ್ಮಹತ್ಯೆಯಂತಹ ಸಮಸ್ಯೆಗೆ ಒಳಗಾಗುತ್ತಿದ್ದು, ಇದನ್ನು ಮನಗಂಡಿರುವ ಸರ್ಕಾರ, ಮಾನಸಿಕ ಆರೋಗ್ಯ ಕಾರ್ಯಪಡೆಯನ್ನು ಪ್ರಥಮ ಬಾರಿಗೆ ರಚಿಸಿದ್ದು, ಇಡೀ ದೇಶದಲ್ಲಿಯೇ ನಮ್ಮ ರಾಜ್ಯದಲ್ಲಿ ಮಾತ್ರ ಇಂತಹ ಕಾರ್ಯಪಡೆ ರಚಿಸಿರುವುದು ಶ್ಲಾಘನೀಯ.  ಮಾನಸಿಕ ಅನಾರೋಗ್ಯದ ಬಗ್ಗೆ ವೈದ್ಯರು ಮಾತ್ರವಲ್ಲ, ಶಿಕ್ಷಕ ಬಳಗ, ಇಡೀ ಸಮುದಾಯವೇ ಗಮನ ಹರಿಸಬೇಕಿದ್ದು, ಪಾಲಕರಿಗೆ, ಶಿಕ್ಷಕರಿಗೆ ಆಪ್ತ ಸಮಾಲೋಚನೆ ನಡೆಸುವ ಬಗ್ಗೆ ತರಬೇತಿ ನೀಡುವ ಯೋಜನೆ ರೂಪಿಸಲಾಗಿದೆ.  ರಾಜ್ಯವನ್ನು ಮಾನಸಿಕ ಸ್ವಾಸ್ಥ್ಯ ರಾಜ್ಯವನ್ನಾಗಿಸುವ ಉದ್ದೇಶ ಹೊಂದಲಾಗಿದೆ ಎಂದರು.
  ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಯೋಜನಾ ನಿರ್ದೇಶಕ ಡಾ. ಬಿ.ವಿ. ಕರೂರ್, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಕಾರ್ಯದರ್ಶಿ ಡಾ. ಹೆಚ್. ಚಂದ್ರಶೇಖರ್,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಲೋಕೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹದೇವ ಮುಂತಾದ ಗಣ್ಯರು ಉಪಸ್ಥಿತರಿದ್ದರು.  ಪ್ರಾರಂಭದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀಕಾಂತ ದಾ. ಬಬಲಾದಿ ಸ್ವಾಗತಿಸಿದರು, 
  ಕಾರ್ಯಕ್ರಮದ ಅಂಗವಾಗಿ ಲೈಂಗಿಕತೆ, ವಿವಾಹ, ವಿವಾಹ ವಿಚ್ಛೇದನ ವಿಷಯ ಕುರಿತು ಮೈಸೂರಿನ ಜೆಎಸ್‌ಎಸ್ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಡಾ. ಟಿ.ಎಸ್. ಸತ್ಯನಾರಾಯಣರಾವ್, ದುಶ್ಚಟಗಳು, ಪರಿಣಾಮ ಹಾಗೂ ಚಿಕಿತ್ಸೆ ಕುರಿತು ತುಮಕೂರಿನ ಮನೋವೈದ್ಯ ಡಾ. ಸೋಮಶೇಖರ ಬಿಜ್ಜಳ್ ಅವರು ವಿಶೇಷ ಉಪನ್ಯಾಸ ನೀಡಿದರು.  ಮನೋ ವೈದ್ಯರಾದ ಡಾ. ನಾಗರಾಜ್, ಡಾ. ಶಿವಶಂಕರ ಪೋಳ್, ಮಾನಿಸಕ ಆರೋಗ್ಯ ಸೇವೆಗಳ ಉಪನಿರ್ದೇಶಕ ಡಾ. ಗುಂಡೇರಾವ್ ಮುಂತಾದವರು ಭಾಗವಹಿಸಿದ್ದರು.

Advertisement

0 comments:

Post a Comment

 
Top