ಯುನಿವೆಫ್‌ನಿಂದ ಟಿಪ್ಪು ಸಮಾವೇಶ
ಮಂಗಳೂರು, ಫೆ.7: ತಪ್ಪೇ ಮಾಡದ ರಾಜ ಇತಿಹಾಸದಲ್ಲಿ ಸಿಗುವುದಿಲ್ಲ. ತಪ್ಪು ಘಟಿಸಿದ್ದರೆ ಅದು ಆಗಿನ ಕಾಲ ಘಟ್ಟದ ಅನಿವಾರ್ಯತೆ. ಚಿಕ್ಕ ತಪ್ಪನ್ನು ವಿಮರ್ಶೆ ಮಾಡುವುದಕ್ಕಿಂತ ಸಾಧನೆಗಳ ಅವಲೋಕನ ನಡೆಸುವುದು ಸೂಕ್ತ. ಗತ ಇತಿಹಾಸವನ್ನು ವರ್ತಮಾನದೊಂದಿಗೆ ಅವಲೋಕಿಸಬೇಡಿ ಎಂದು ರಾಜ್ಯ ಹಿಂದುಳಿದ ಆಯೋಗದ ನಿಕಟಪೂರ್ವ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ್ ನುಡಿದರು.
ನಗರದ ಪುರಭವನದಲ್ಲಿ ಯುನಿವರ್ಸಲ್ ವೆಲ್ಫೇರ್ ಫೋರಂ (ಯುನಿವೆಫ್) ಆಯೋಜಿಸಿದ್ದ ‘ಮಹಾ ಮಾನವತಾವಾದಿ ಟಿಪ್ಪು’ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾ ಡುತ್ತಿದ್ದರು.
ಟಿಪ್ಪುವನ್ನು ದ್ವೇಷಿಸುವುದೆಂದರೆ ಉಂಡ ಮನೆಗೆ ದ್ರೋಹ ಬಗೆದಂತೆ. ಟಿಪ್ಪು ನಾಡಿಗೆ ರೇಷ್ಮೆ ಪರಿಚಯಿಸಿ ದ್ದರಿಂದಲೇ ಈಗಲೂ ಬಹಳಷ್ಟು ಕುಟುಂಬಗಳು ಹೊಟ್ಟೆ ತುಂಬ ಊಟ ಮಾಡುತ್ತಿವೆ. ಆತ ಫ್ರಾನ್ಸ್, ಮಧ್ಯಪ್ರಾಚ್ಯ ದೇಶಗಳೊಂದಿಗೆ ಸಾಂಬಾರು ವ್ಯಾಪಾರವನ್ನು ವೃದ್ಧಿಸಿದ್ದ. ಟಿಪ್ಪು ಕೊಟ್ಟ ಅನ್ನವನ್ನು ತಿಂದವರೇ ಇಂದು ಟಿಪ್ಪುವನ್ನು ದ್ವೇಷಿಸುತ್ತಿದ್ದಾರೆ. ಟಿಪ್ಪು ವಿರುದ್ಧ ಮಾತನಾಡುತ್ತಿರುವವರ ಹಿಂದಿನವರ್ಯಾರು ಸ್ವಾತಂತ್ರ ಹೋರಾಟದಲ್ಲಿ ಧುಮುಕಿದವರಲ್ಲ. ಅವರೆಲ್ಲ ಬ್ರಿಟಿಷರ ಪರವಾಗಿ ಇದ್ದವರು. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದಾನೆ ಎಂಬ ಕಾರಣಕ್ಕೆ ಆತನನ್ನು ದ್ವೇಷಿಸುತ್ತಿದ್ದಾರೆ ಎಂದು ಸಂಶೋಧಕ ಚಿದಾನಂದ ಮೂರ್ತಿ, ಪ್ರಮೋದ್ ಮುತಾಲಿಕ್ ಮತ್ತು ಗೋ. ಮಧುಸೂದನ್‌ರನ್ನು ಪ್ರಸ್ತಾಪಿಸಿ ದ್ವಾರಕಾನಾಥ್ ಹೇಳಿದರು.
ಟಿಪ್ಪು ಸುಲ್ತಾನ್ ಸ್ವಾರ್ಥಕ್ಕಾಗಿ ಹೋರಾಡಿದ್ದಾನೆ ಎನ್ನುವುದಾದರೆ ಕಿತ್ತೂರು ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿಯವವರು ಕೂಡಾ ಸ್ವಾರ್ಥಿ ಗಳು ಏಕಲ್ಲ ಎಂದು ಪ್ರಶ್ನಿಸಿದರು.
ದಲಿರಿಗೆ ಭೂಮಿ ಬಳಸಲು ಅವಕಾಶ ನೀಡಿದ್ದೇ ಟಿಪ್ಪು ಸುಲ್ತಾನ್. ಕನ್ನಂಬಾಡಿ ಯೋಜನೆ ರೂಪಿಸಿದ್ದು ಕೂಡಾ ಟಿಪ್ಪು. ಅದನ್ನು ಕಾರ್ಯ ರೂಪಕ್ಕೆ ತಂದವರು ಮಾತ್ರ ನಾಲ್ವಡಿ ಕೃಷ್ಣರಾಜ ಒಡೆಯರ್. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದೂ ಟಿಪ್ಪು ಸುಲ್ತಾನ್ ಎಂದು ಡಾ.ಸಿ.ಎಸ್. ದ್ವಾರಕಾನಾಥ್ ಇತಿಹಾಸವನ್ನು ಅವಲೋಕಿಸಿದರು.
ಸಾಚಾರ್ ವರದಿ ಆಧರಿಸಿ ಮುಸ್ಲಿಮರಿಗೆ ಶೈಕ್ಷಣಿಕ ನ್ಯಾಯ ಒದಗಿಸುವ ಆಸಕ್ತಿ ಕೇಂದ್ರದ ಕಾಂಗ್ರೆಸ್ ಆಡಳಿತಗಾರರಿಗೆ ಇದ್ದಿದ್ದರೆ ಕಳೆದ ನಾಲ್ಕೂವರೆ ವರ್ಷದ ಆಡಳಿತ ದಲ್ಲೇ ಅದನ್ನು ಮಾಡುತ್ತಿತ್ತು. ಚುನಾವಣೆಯ ಸಂದರ್ಭದಲ್ಲಿ ವಿವಾದ ಹುಟ್ಟು ಹಾಕಿದ್ದರ ಹಿಂದಿನ ರಾಜಕೀಯ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ವಿವಿ ಸ್ಥಾಪನೆಯ ಪ್ರಸ್ತಾಪ ಇಟ್ಟವರು ಟಿಪ್ಪುವನ್ನೇಕೆ ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ದ್ವಾರಕಾನಾಥ್ ಪ್ರಶ್ನಿಸಿದರು.
ಏಕಲವ್ಯ, ಸಾವರ್ಕರ್ ಬಗ್ಗೆ ಚರ್ಚಿಸಬೇಕಿದೆ: ಅಬ್ದುಸ್ಸಲಾಮ್ ಪುತ್ತಿಗೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮಾತನಾಡಿ, ನಾವು ಚರ್ಚಿಸುವ ವಿಷಯವನ್ನು ನಾವೇ ನಿರ್ಧರಿಸು ವಂತಾಗಬೇಕು. ಏಕಲವ್ಯನ ಬಗ್ಗೆ ಚರ್ಚೆಯನ್ನು ಎತ್ತಿಕೊಳ್ಳಬೇಕು. ಒಂದಕ್ಷರವೂ ಕಲಿಸದ ಗುರು ಏಕಲವ್ಯನ ಹೆಬ್ಬೆರಳು ಕಾಣಿಕೆಯಾಗಿ ಪಡೆಯುವಂತಾದದ್ದು ಏಕೆ ಎಂಬ ಬಗ್ಗೆ ಅದನ್ನು ಸಮರ್ಥಿಸುವವರಿಂದ ಸಮಜಾಯಿಷಿ ಪಡೆಯಬೇಕು. ಸಾವರ್ಕರ್‌ರ ವಿಷಯದ ವಿಮರ್ಶೆ ನಡೆಯಬೇಕು. ಇದರ ಹೊರತು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಟಿಪ್ಪುವಿನ ಬಗ್ಗೆ ವಕಾಲತು ವಹಿಸುವ ಕೆಲಸ ನಮ್ಮಿಂದ ನಡೆಯಬೇಕಾಗಿ ಬಂದಿರುವುದು ದುರಂತ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ‘ಧೀರ ಸ್ವ್ವಾತಂತ್ರ ಸೇನಾನಿ ಮಾನವತಾವಾದಿ ಟಿಪ್ಪು’ ಎಂಬ ವಿಷಯದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಪ್ರಾಸ್ತಾ ವಿಕವಾಗಿ ಮಾತನಾಡಿದರು. ಕೆಪಿಸಿಸಿ ಸದಸ್ಯ ಸುರೇಶ್ ಬಲ್ಲಾಳ್, ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ.ಬಿ.ಎಂ. ಇಚ್ಲಂಗೋಡು, ಜೆಡಿಎಸ್ ಮೀನು ಗಾರಿಕಾ ಘಟಕದ ರಾಜ್ಯಾಧ್ಯಕ್ಷ ರತ್ನಾಕರ ಸುವರ್ಣ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಜಲೀಲ್ ಕೃಷ್ಣಾಪುರ, ವೆಲ್ಫೇರ್ ಪಾರ್ಟಿಯ ದ.ಕ. ಜಿಲ್ಲಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್, ಯುನಿವೆಫ್ ಜಿಲ್ಲಾಧ್ಯಕ್ಷ ಯು.ಕೆ. ಖಾದರ್ ಉಪಸ್ಥಿತರಿದ್ದರು. ಸಮಾವೇಶದ ಸಂಚಾಲಕ ಸಲೀಂ ಮಲಾರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಟಿಪ್ಪು ಕೇರಳದಲ್ಲಿ 8 ಸಾವಿರ ದೇವಳಗಳನ್ನು ಕೆಡವಿದ ಎನ್ನುತ್ತಾರೆ. ಆದರೆ ಆಗ ಕೇರಳದಲ್ಲಿ ಇದ್ದ ಒಟ್ಟು ದೇವಳಗಳ ಸಂಖ್ಯೆಯೇ 3 ಸಾವಿರ. ಕೊಡಗಿನಲ್ಲಿ 75 ಸಾವಿರ ಮಂದಿಯನ್ನು ಮತಾಂತರ ಮಾಡಲಾಗಿತ್ತು ಎನ್ನುತ್ತಾರೆ. ಕೊಡಗಿನಲ್ಲಿ ಆಗಿನ ಜನಸಂಖ್ಯೆ ಇದ್ದುದೇ 50 ಸಾವಿರ ಎಂದು ಬ್ರಿಟಿಷ್ ಅಂಕಿ ಅಂಶವೇ ಹೇಳುತ್ತದೆ. ಸುಳ್ಳನ್ನು ಪದೇ ಪದೆ ಹೇಳಿದರೆ ಅದು ಸತ್ಯವಾಗುತ್ತದೆ ಎಂದು ನಂಬಿರುವವರು ಟಿಪ್ಪುವಿನ ವಿರುದ್ಧ ನಿರಂತರ ಅಪಪ್ರಚಾರ ಮಾಡುತ್ತಿದ್ದಾರೆ.
- ಡಾ.ಸಿ.ಎಸ್.ದ್ವಾರಕಾನಾಥ್
0 comments:
Post a Comment