ಬೆಂಗಳೂರು, ಫೆ.25: ಮಾರ್ಚ್ 13ರಿಂದ 28ರವರೆಗೆ ದ್ವಿತೀಯ ಪಿಯುಸಿ ಹಾಗೂ ಎಪ್ರಿಲ್ 1ರಿಂದ 10ರ ವರೆಗೆ ಎಸೆಸೆಲ್ಸಿ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗೆ ಅಗತ್ಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.ಸೋಮವಾರ ವಿಧಾನಸೌಧದಲ್ಲಿನ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡಿದ ಅವರು, 6.13 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ತೆಗೆದುಕೊಳ್ಳಲಿದ್ದು, ರಾಜ್ಯದ 961 ಕೇಂದ್ರಗಳಲ್ಲಿ ಪರೀಕ್ಷೆ ಜರಗಲಿದೆ ಎಂದು ಮಾಹಿತಿ ನೀಡಿದರು.8.49 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ತೆಗೆದುಕೊಳ್ಳಲಿದ್ದು, 3003 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಳೆದಬಾರಿಗೆ ಹೋಲಿಕೆ ಮಾಡಿದರೆ 25 ಸಾವಿರ ಮಂದಿ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆಂದ ಕಾಗೇರಿ, ವಿದ್ಯಾರ್ಥಿಗಳು ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಇದೇ ವೇಳೆ ಮಾನವಿ ಮಾಡಿದರು.
4 ಸಾವಿರ ಶಿಕ್ಷಕರ ನೇಮಕ: ಹೈ.ಕ.ಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೆ ತಿದ್ದುಪಡಿ ಆದೇಶದ ಹಿನ್ನೆಲೆಯಲ್ಲಿ ಹೈ.ಕ. ವ್ಯಾಪ್ತಿಯ ಆರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದಲ್ಲಿ ನಾಲ್ಕು ಸಾವಿರ ಮಂದಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿ ಯಲ್ಲಿದ್ದು, ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಹೈ.ಕ.ಪ್ರದೇಶದ ವ್ಯಾಪ್ತಿಯಲ್ಲಿ 1900 ಮಂದಿ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿದ್ದು, 371ನೆ ವಿಧಿ ಅನ್ವಯ ಮೀಸಲಾತಿ ನಿಗದಿಯ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಖಾಯಂ ಶಿಕ್ಷಕರ ನೇಮಕ ಆಗುವವರೆಗೂ ಅತಿಥಿ ಶಿಕ್ಷಕರನ್ನು ಮುಂದುವರಿಸಲಾಗುವುದು ಎಂದು ವಿಶ್ವೇಶ್ವರ ಹೆಗಡೆ ತಿಳಿಸಿದರು.
ಕನ್ನಡದಲ್ಲಿ ಸಹಿ: ರಾಜ್ಯದ ಎಲ್ಲ ಸರಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಭಾಷೆಯ ಬಗ್ಗೆ ಅಭಿಮಾನ ಮೂಡಿಸುವ ದೃಷ್ಟಿಯಿಂದ ಕನ್ನಡದಲ್ಲೆ ಸಹಿ ಮಾಡಿಸು ವುದನ್ನು ಅಭ್ಯಾಸ ಮಾಡಿಸುವ ಸಂಬಂಧ ಆದೇಶ ಹೊರಡಿಸಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು, ಕನ್ನಡ ಶಿಕ್ಷಕರಿಗೆ ಈ ಸಂಬಂಧ ಸೂಚನೆ ನೀಡ ಲಾಗಿದೆ ಎಂದು ಅವರು ಹೇಳಿದರು.
ಪ್ರತಿಭಾ ಫಲಕ: ರಾಜ್ಯದ ಎಲ್ಲ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಅವರುಗಳ ಹೆಸರನ್ನು ಪ್ರಕಟಿಸುವ ಪ್ರತಿಭಾ ಫಲಕವನ್ನು ಶಾಲೆಗಳಲ್ಲಿ ಅಳವಡಿಸಲು ಆದೇಶಿಸ ಲಾಗಿದೆ ಎಂದು ವಿಶ್ವೇಶ್ವರ ಹೆಗಡೆ ತಿಳಿಸಿದ್ದಾರೆ.
0 comments:
Post a Comment