PLEASE LOGIN TO KANNADANET.COM FOR REGULAR NEWS-UPDATES


ಬೆಂಗಳೂರು, ಫೆ.25: ಪ್ರಸಕ್ತ ಸಾಲಿನ ವೃತ್ತಿಶಿಕ್ಷಣ ಪ್ರವೇಶ ಪರೀಕ್ಷೆ (ಸಿಇಟಿ) ಮೇ 1 ಹಾಗೂ 2ರಂದು ನಡೆಯಲಿದ್ದು, ಕಳೆದ ವರ್ಷದ ಸೀಟು ಹಂಚಿಕೆ ಹಾಗೂ ಶುಲ್ಕ ಪದ್ಧತಿ ಮುಂದುವರಿಸಲಾಗಿದೆ.ವಿಧಾನಸೌಧದಲ್ಲಿ ಸರಕಾರ ಹಾಗೂ ಕಾಮೆಡ್-ಕೆ ನಡುವೆ ನಡೆದ ಸಭೆಯಲ್ಲಿ ವೃತ್ತಿ ಶಿಕ್ಷಣ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಪ್ರಸಕ್ತ ವರ್ಷದ ವೃತ್ತಿ ಶಿಕ್ಷಣ ಪರೀಕ್ಷೆಯನ್ನು ಮೇ 1 ಹಾಗೂ ೨ರಂದು ನಡೆಸಲು ನಿರ್ಧರಿಸಲಾಗಿದೆ. ಮೇ 12ರಂದು ಕಾಮೆಡ್-ಕೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.ಮೆಡಿಕಲ್ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ನೆಟ್ ಪರೀಕ್ಷೆ ಸಂಬಂಧ ಸುಪ್ರೀಂ ಕೋರ್ಟ್ ಇದೇ ೨೮ರಂದು ಆದೇಶ ನೀಡಲಿದೆ. ಇದಾದ ಬಳಿಕ ದಿನಾಂಕವನ್ನು ಪ್ರಕಟಿಸಲಾಗುವುದು.
ಹೀಗಾಗಿ ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಪರೀಕ್ಷೆಗೆ ದಿನಾಂಕ ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು. ಜುಲೈ ೨೨ರೊಳಗೆ ಎಂಜಿನಿಯರಿಂಗ್ ವಿಭಾಗದ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಕಳೆದ ವರ್ಷದ ಮಾದರಿಯಲ್ಲೇ ಸೀಟು ಹಂಚಿಕೆ ಹಾಗೂ ಶುಲ್ಕ ನಿಗದಿಪಡಿಸಲಾಗಿದೆ. ಶುಲ್ಕ ಹೆಚ್ಚಳಕ್ಕೆ ಕಾಮೆಡ್-ಕೆ ಮನವಿ ಮಾಡಿದ್ದರೂ ಬಡ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಸರಕಾರ ಅದನ್ನು ತಿರಸ್ಕರಿಸಿದೆ ಎಂದು ತಿಳಿಸಿದರು.
ಪ್ರಸಕ್ತ ಸರಕಾರದ ಶುಲ್ಕ ನೀತಿಯಂತೆ ವೈದ್ಯಕೀಯ ವಿಭಾಗಕ್ಕೆ  38,500 ರೂ., ದಂತ ವೈದ್ಯಕೀಯ ವಿಭಾಗಕ್ಕೆ  ೨೮,೭೦೦ ರೂ. ಹಾಗೂ ಎಂಜಿನಿಯರಿಂಗ್ ವಿಭಾಗಕ್ಕೆ 33ರಿಂದ ೩೮ ಸಾವಿರ ರೂ. ವರೆಗೆ ಶುಲ್ಕ ನಿಗದಿ ಪಡಿಸಲಾಗಿದೆ. ಅದೇ ರೀತಿ ಕಾಮೆಡ್-ಕೆ ಸಂಸ್ಥೆಗಳಿಗೆ ವೈದ್ಯಕೀಯ ವಿಭಾಗಕ್ಕೆ 3 ಲಕ್ಷದ ೫೫ ಸಾವಿರದ 700 ರೂ., ದಂತ ವೈದ್ಯಕೀಯ ವಿಭಾಗಕ್ಕೆ ಎರಡು ಲಕ್ಷದ 53 ಸಾವಿರ ರೂ., ಮತ್ತು ಎಂಜಿನಿಯರಿಂಗ್ ವಿಭಾಗಕ್ಕೆ  ಒಂದು ಲಕ್ಷದ ಹತ್ತು ಸಾವಿರ ದಿಂದ, ಒಂದು ಲಕ್ಷದ ೩೭ ಸಾವಿರದ ೫೦೦ ರೂ. ವರೆಗೆ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ವಿವರಿಸಿದರು.
ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೂ ಸರಕಾರ ನಿಗದಿಪಡಿಸಿರುವ ಶುಲ್ಕ ಮಿತಿ ಅನ್ವಯ ವಾಗಲಿದೆ. ತನಿಖೆ: ಸರ್ವಶಿಕ್ಷಣ ಅಭಿಯಾನ ಯೋಜನೆಯ ಪುಸ್ತಕಗಳ ಮುದ್ರಣದಲ್ಲಿನ ಅವ್ಯವಹಾರ, ವಂಚನೆ ಆಗಿರುವುದರ ಸಂಬಂಧ ಪರಿಶೀಲನೆ ನಡೆಸಿ, ತಪ್ಪಾಗಿದ್ದರೆ  ನಿಶ್ಚಿತವಾಗಿ ಅಗತ್ಯ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Advertisement

0 comments:

Post a Comment

 
Top