ಕೊಪ್ಪಳ ಜ.೧೬ : ಕೊಪ್ಪಳ ತಾಲೂಕಿನ ಯತ್ನಟ್ಟಿ ಗ್ರಾಮದ ಸುರೇಶ ಗೌಡ ತಂದಿ ಫಕೀರಗೌಡ ಪಾಟೀಲ್ ಎಂಬುವವರ ಮನೆಯಲ್ಲಿ ಕಳೆದ ಡಿ. ೨೮ ರಂದು ನಡೆದಿದ್ದ ಕಳ್ಳತನದ ಪ್ರಕರಣವನ್ನು ಕೊಪ್ಪಳ ಗ್ರಾಮೀಣ ಪೊಲೀಸರು ಭೇದಿಸಿದ್ದು, ಇಬ್ಬರು ಕಳ್ಳರನ್ನು ಬಂಧಿಸಿ ೩ ಲಕ್ಷ ರೂ. ಮೌಲ್ಯದ ಬಂಗಾರದ ಒಡವೆಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಅದೇ ಗ್ರಾಮದವರಾಗಿದ್ದು, ಸುರೇಶ ತಂದೆ ಸಂಕನಗೌಡ ಬುಡ್ಡನಗೌಡ್ರ, ಮಲ್ಲಪ್ಪ ತಂದೆ ದೊಡ್ಡಪ್ಪ ಯಲಬುರ್ಗಿ@ ಉಳ್ಳಾಗಡ್ಡಿ ಎಂದು ಗುರುತಿಸಲಾಗಿದೆ. ಕಳೆದ ಡಿ. ೨೮ ರಂದು ರಾತ್ರಿ ೧೨-೩೦ ಗಂಟೆ ಸುಮಾರಿಗೆ ಯತ್ನಟ್ಟಿ ಗ್ರಾಮದ ಸುರೇಶ್‌ಗೌಡ ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮಹಡಿ ಮನೆಯ ತೆರೆದ ಬಾಗಿಲಿನಿಂದ ಒಳ ಪ್ರವೇಶಿಸಿ, ಮನೆಯ ಅಲಮಾರಿನಲ್ಲಿದ್ದ ೨. ೪೦ ಲಕ್ಷ ರೂ. ಮೌಲ್ಯದ ಬಂಗಾರದ ಒಡವೆಗಳನ್ನು ಆರೋಪಿಗಳು ಕದ್ದೊಯ್ದಿದ್ದರು. ಪ್ರಕರಣ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಪ್ರಭಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಮಹಾಂತೇಶ, ಡಿ.ಎಸ್.ಪಿ. ಸುರೇಶ ಬಿ.ಮಸೂತಿ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ವೃತ್ತದ ಸಿಪಿಐ ವೆಂಕಟಪ್ಪ ನಾಯಕ, ಗ್ರಾಮೀಣ ವೃತ್ತದ ಮಹಾಂತೇಶ ಸಜ್ಜನ್, ಎಎಸ್‌ಐ ತಿಪ್ಪೇಸ್ವಾಮಿ, ಹೆಚ್.ಸಿ. ರಾಜ ಮಹ್ಮದ್ ಇವರ ತಂಡ ಕಳ್ಳರ ಪತ್ತೆಗೆ ಕಾರ್ಯೋನ್ಮುಖರಾಗಿ ಇಬ್ಬರು ಆರೋಪಿಗಳನ್ನು ಜ. ೧೫ ರಂದು ಬಂಧಿಸುವಲ್ಲಿ ಯಶಸ್ವಿಯಾಯಿತು. ಆರೋಪಿಗಳು ವಿಚಾರಣೆ ಸಂದರ್ಭದಲ್ಲಿ, ಕಳ್ಳತನ ಮಾಡಿದ ಒಡವೆಗಳನ್ನು ಊರಿನ ಬಸವರಾಜೇಂದ್ರ ಮಠಕ್ಕೆ ಹೋಗುವ ದಾರಿ ಬದಿಯ ಗಟಾರದಲ್ಲಿ ಜಾಗವನ್ನು ಗುರುತು ಮಾಡಿಕೊಂಡು ಪ್ಲಾಸ್ಟಿಕ್ ಕ್ಯಾರಿ ಬ್ಯಾಗಿನಲ್ಲಿ ಹಾಕಿರುವುದಾಗಿ ಆರೋಪಿಗಳು ಒಪ್ಪಿಕೊಂಡ ನಂತರ, ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ, ಸುಮಾರು ೩ ಲಕ್ಷ ರೂ. ಮೌಲ್ಯದ ಬಂಗಾರದ ಒಡವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ .
0 comments:
Post a Comment