ಕೊಪ್ಪಳ ಜ. ೧೬ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ತುಂಗಭದ್ರ ಎಡದಂಡೆ ಮುಖ್ಯಕಾಲುವೆ ಮೈಲ್ ೦.೦೦ ರಿಂದ ೬೯.೦೦ ರವರೆಗಿನ ಕಾಲುವೆಯ ಎಡ ಮತ್ತು ಬಲ ದಡಗಳಿಂದ ೧೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜ. ೧೫ ರವರೆಗೆ ಜಾರಿಗೊಳಿಸಲಾಗಿತ್ತು. ಇದೀಗ ನಿಷೇಧಾಜ್ಞೆಯನ್ನು ಜ. ೩೧ ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತವಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕಡಿಮೆ ಇದ್ದು, ಲಭ್ಯವಾಗುತ್ತಿರುವ ನೀರಿನ ಪ್ರಮಾಣ ಆಧರಿಸಿ, ಮಿತ ಬೆಳೆ ಮಾತ್ರ ಬೆಳೆಯಲು ಕಾಲುವೆಗಳಲ್ಲಿ ಹರಿಸಬಹುದಾದ ನೀರಿನ ಪ್ರಮಾಣ ಮತ್ತು ಅವಧಿಯನ್ನು ನಿಗದಿಪಡಿಸಲಾಗಿದೆ. ಹಿಂಗಾರು ಹಂಗಾಮಿಗೆ ನೀರಿನ ಕೊರತೆಯಾಗಲಿರುವ ಕಾರಣ ವಿತರಣಾ ಕಾಲುವೆಗಳ ಹತ್ತಿರ ರೈತರು ವಿತರಣಾ ಕಾಲುವೆ ಗೇಟುಗಳನ್ನು ಮನಬಂದಂತೆ ಎತ್ತಿ ನೀರನ್ನು ಹರಿಸಿಕೊಳ್ಳುವುದು ಹಾಗೂ ಮುಖ್ಯ ಕಾಲುವೆಯ ಎಡಭಾಗಕ್ಕೆ ಸೈಫನ್/ಪಂಪ್/ಪೈಪುಗಳ ಮೂಲಕ ಅನಧಿಕೃತವಾಗಿ ನೀರನ್ನು ಪಡೆದು ನೀರಾವರಿ ಮಾಡಿಕೊಳ್ಳುವುದನ್ನು ತಡೆಗಟ್ಟುವುದು ಅಗತ್ಯವಾಗಿರುತ್ತದೆ. ಅಧೀಕೃತ ಅಚ್ಚುಕಟ್ಟುದಾರರಿಗೆ ನೀರನ್ನು ಒದಗಿಸಲು ಮತ್ತು ಈ ವಿಭಾಗದ ಗಡಿ ವ್ಯಾಪ್ತಿಯಲ್ಲಿ ನಿಗಧಿಪಡಿಸಿದ ನೀರಿನ ಮಟ್ಟವನ್ನು ಮುಖ್ಯ ಕಾಲುವೆಯಲ್ಲಿ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಇಲಾಖೆಯ ಸಿಬ್ಬಂದಿಯವರಿಗೆ ರಕ್ಷಣೆ ನೀಡಲು ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಲು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ.೦.೦೦ ರಿಂದ ೬೯.೦೦ ರವರೆಗಿನ ಮುಖ್ಯ ಕಾಲುವೆಯ ಎಡ ಮತ್ತು ಬಲ ದಡಗಳಿಂದ ೧೦೦.೦೦ ಮೀ.ಅಂತರದ ವ್ಯಾಪ್ತಿಯಲ್ಲಿ ಜ. ೩೧ ರವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಲಾಗಿದೆ. ಅಲ್ಲದೆ ವಿತರಣಾ ಕಾಲುವೆ ೧೭-ದಾಸನಾಳ ಗ್ರಾಮದ ಹತ್ತಿರ, ೨೧-ಕೆಸರಹಟ್ಟಿ ಗ್ರಾಮದ ಹತ್ತಿರ, ೨೫-ಜೀರಾಳ ಕಲ್ಗುಡಿ ಹತ್ತಿರ, ಮೈಲ್ ೩೬ ಎಸ್ಕೇಪ್ ಡಂಕನಕಲ್ಲು ಹತ್ತಿರ, ೩೧-ಗುಡೂರು ಹತ್ತಿರ, ೩೨-ಮೈಲಾಪೂರ ಹತ್ತಿರ ವಿತರಣಾ ಕಾಲುವೆಗಳಿಗೆ/ಎಸ್ಕೇಪ್‌ಗಳಿಗೆ ಹಗಲು ರಾತ್ರಿ ಪಾಳೆಯ ಪ್ರಕಾರ ದಿನದ ೨೪ ಗಂಟೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಈಗಾಗಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಿಷೇಧಾಜ್ಞೆಯನ್ವಯ ತುಂಗಭದ್ರಾ ಮುಖ್ಯ ಕಾಲುವೆ ದಡದಲ್ಲಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರು ಎರಡು ಅಥವಾ ಮೂರು ಜನಕ್ಕಿಂತ ಹೆಚ್ಚಾಗಿ ಓಡಾಡುವುದು, ತುಂಗಭದ್ರಾ ಮುಖ್ಯ ಕಾಲುವೆ ದಡದ ಪ್ರದೇಶದಲ್ಲಿ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment