ಕೊಪ್ಪಳ ಜ.೧೬ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮವು ಜ.೨೦ ರಿಂದ ೨೩ ರವರೆಗೆ ದೇಶಾದ್ಯಂತ ಜರುಗಲಿದ್ದು, ಕೊಪ್ಪಳ ತಾಲೂಕಿನಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿ ಡಾ.ಎಸ್.ಬಿ.ದಾನರಡ್ಡಿ ಅವರು ತಿಳಿಸಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ ೦೫ ವರ್ಷದೊಳಗಿನ ಮಕ್ಕಳನ್ನು ಸಮೀಕ್ಷೆ ಮಾಡಲಾಗಿ ಕೊಪ್ಪಳ ನಗರ ಪ್ರದೇಶದಲ್ಲಿ ೧೪೩೪೭ ಮಕ್ಕಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ೪೧೨೪೯ ಮಕ್ಕಳು, ಒಟ್ಟು ೫೫೫೯೬ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಕೊಪ್ಪಳ ನಗರ ಸೇರಿದಂತೆ ೧೪೩ ಗ್ರಾಮಗಳಲ್ಲಿ ೨೬೨ ತಂಡಗಳನ್ನು ರಚಿಸಿದ್ದು ೭೧೩ ಸಿಬ್ಬಂದಿಗಳು, ೪೭ ಮೇಲ್ವಿಚಾರಕರು ಹಾಗೂ ತಾಲೂಕಿನಲ್ಲಿ ಎಲ್ಲಾ ವೈದ್ಯಾಧಿಕಾರಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಅಲ್ಲದೇ ರೋಟರಿ, ಇನ್ನರ್ ವೀಲ್, ಲಯನ್ಸ್ ಕ್ಲಬ್, ಓಲೇಕಾರ ಸಂಸ್ಥೆ, ಸಮೂಹ ಸಂರಕ್ಷಾ, ಮಹಿಳಾ ಸಮಖ್ಯಾ, ಎನ್.ಎಸ್.ಎಸ್. ಶಿಬಿರಾರ್ಥಿಗಳು, ವಂದೇಮಾತರಂ ಸಂಘಟನೆಗಳು ಸೇರಿದಂತೆ ಇತರೆ ಸಂಘ-ಸಂಸ್ಥೆಗಳವರು ಸಕ್ರೀಯವಾಗಿ ಪಾಲ್ಗೊಂಡು ಸಹಕಾರ ನೀಡಲಿದ್ದಾರೆ.
ಜ. ೨೦ ರಂದು ಮೊದಲ ದಿನ ಲಸಿಕಾ ಕೇಂದ್ರದಲ್ಲಿ ಮಕ್ಕಳಿಗೆ ಲಸಿಕೆ ಹಾಕಲಿದ್ದು, ಶೇ.೯೦% ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಉಳಿದಂತೆ ಮೂರು ದಿನದಲ್ಲಿ ಮನೆ-ಮನೆ ಭೇಟಿ ನೀಡಿ ಲಸಿಕೆ ಹಾಕುವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಈ ಬಾರಿ ಮುಖ್ಯವಾಗಿ ವಲಸೆ ಬಂದವರನ್ನು ಅವರು ಎಲ್ಲೇ ಇರಲಿ, ಅಲ್ಲಿಗೆ ಹೋಗಿ ಲಸಿಕೆ ಹಾಕುವ ಬಗ್ಗೆ ಹೆಚ್ಚು ಒತ್ತು ಕೊಡಲಾಗಿದೆ. ಈ ರೀತಿಯಾಗಿ ೧೨೫ ವಲಸೆ ತಾಣಗಳನ್ನು ತಾಲೂಕಿನಲ್ಲಿ ಗುರುತಿಸಲಾಗಿದೆ. ಸಾರ್ವಜನಿಕರು ತಮ್ಮ ೫ ವರ್ಷದೊಳಗಿನ ಎಲ್ಲ ಮಕ್ಕಳಿಗೆ ಈ ಹಿಂದೆ ಎಷ್ಟು ಬಾರಿ ಹಾಕಿಸಿದ್ದರೂ, ಈಗ ಮತ್ತೊಮ್ಮೆ ತಪ್ಪದೆ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು, ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ತಾಲೂಕ ಆರೋಗ್ಯಾಧಿಕಾರಿ ಡಾ.ಎಸ್.ಬಿ.ದಾನರಡ್ಡಿ ತಿಳಿಸಿದ್ದಾರೆ.
0 comments:
Post a Comment