PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ ಜ.   ಸರ್ಕಾರಿ ಸೇವೆ ನನಗೆ ಸಂತೃಪ್ತಿ ನೀಡಿದ್ದರೂ, ಸಮಾಜ ಸೇವೆಗೆ ಮನಸ್ಸು ತುಡಿಯುತ್ತಿದೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಹೇಳಿದರು. 
  ಕೊಪ್ಪಳ ಅಪರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ಬಿ.ಪಿ. ಅಡ್ನೂರ್ ಅವರು ಸ್ವಯಂ ನಿವೃತ್ತಿ ಪಡೆದ ಕಾರಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಏರ್ಪಡಿಸಲಾಗಿದ್ದ ಹೃದಯಸ್ಪರ್ಶಿ ಬೀಳ್ಕೊಡುಗೆ ಪಡೆದು, ಅವರು ಮಾತನಾಡಿದರು.
  ಸಾರ್ವಜನಿಕರ ಹಾಗೂ ಬಡಜನರ ಸೇವೆಗೆ ಸರ್ಕಾರಿ ನೌಕರಿ ಒಂದು ಬಹುದೊಡ್ಡ ಅವಕಾಶವಾಗಿದ್ದು, ಕಂದಾಯ ಇಲಾಖೆಯಲ್ಲಿ ತಹಸಿಲ್ದಾರ್, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿಯಂತಹ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿರುವ ಸಂತೃಪ್ತಿ ನನಗಿದೆ.  ಸೇವೆಯಲ್ಲಿ ಪ್ರಾಮಾಣಿಕತೆ ಇದ್ದಲ್ಲಿ, ದಕ್ಷತೆ ತಾನೇ ತಾನಾಗಿಯೇ ಬರುತ್ತದೆ. ಮಾನಸಿಕ ನೆಮ್ಮದ್ದಿ ಇದ್ದಲ್ಲಿ ಸುಗಮ ಆಡಳಿತ ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ನೌಕರರು ಕಾನೂನಿನ ಚೌಕಟ್ಟಿನಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸಲು ಪಣ ತೊಡಬೇಕು.  ಇದರ ಜೊತೆಗೆ ಮಾನವೀಯತೆಗೂ ಮೊದಲ ಆದ್ಯತೆ ನೀಡಬೇಕು.  ಸೇವೆಯಲ್ಲಿ ತೃಪ್ತಿ ಇದ್ದರೂ, ಸಮಾಜ ಸೇವೆಗಾಗಿ ನನ್ನ ಮನಸ್ಸು ತುಡಿಯುತ್ತಿದೆ.  ಇತ್ತೀಚಿನ ದಿನಗಳಲ್ಲಿ ಸರ್ಕಾರಿ ನೌಕರರು ಯಾವುದೇ ತೊಂದರೆ ಇಲ್ಲದೆ ನಿವೃತ್ತರಾಗುವುದೇ ಒಂದು ದೊಡ್ಡ ಸಾಧನೆ ಎನ್ನುವಂತಾಗಿದೆ ಎಂದು ನಿವೃತ್ತ ಅಪರ ಜಿಲ್ಲಾಧಿಕಾರಿ ಬಿ.ಪಿ. ಅಡ್ನೂರ್ ಅವರು ಅಭಿಪ್ರಾಯಪಟ್ಟರು.  
  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಬಿ.ಪಿ. ಅಡ್ನೂರ್ ಅವರು ಸರ್ಕಾರ ಸೇವೆಯಲ್ಲಿ ಉತ್ತಮ ಹುದ್ದೆಯಲ್ಲಿದ್ದರೂ, ಸರಳತೆ ಹಾಗೂ ಸಜ್ಜನಿಕೆಯನ್ನು ಮೈಗೂಡಿಸಿಕೊಂಡಿದ್ದರು.  ಮಾತಿಗಿಂತ ಕೃತಿ ಲೇಸು ಎನ್ನುವ ಸಿದ್ದಾಂತದ ಮೇಲೆ ನಂಬಿಕೆ ಇಟ್ಟವರು.  ಕಳೆದ ವರ್ಷ ಗಂಗಾವತಿಯಲ್ಲಿ ಜರುಗಿದ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ವಿಯಲ್ಲಿ ಬಿ.ಪಿ. ಅಡ್ನೂರ್ ಅವರ ಶ್ರಮ ಅತ್ಯಂತ ಮಹತ್ವದ್ದಾಗಿದೆ.  ಕಾಗದ ರಹಿತ ಆಡಳಿತ (ಪೇಪರ್‌ಲೆಸ್) ಅಳವಡಿಕೆಯಲ್ಲಿ ಇಡೀ ರಾಜ್ಯದಲ್ಲಿಯೇ ಕೊಪ್ಪಳ ಜಿಲ್ಲೆ ಎರಡನೆ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರ ವಿಶ್ರಾಂತ ಜೀವನ ಸುಖಕರವಾಗಿರಲಿ, ಅವರ ಮಹತ್ವಾಕಾಂಕ್ಷೆ ಈಡೇರಲಿ ಎಂದು ಶುಭ ಹಾರೈಸಿದರು. 
  ಗದುಗಿನ ಕಾಲೇಜು ಒಂದರಲ್ಲಿ ಇತಿಹಾಸ ಉಪನ್ಯಾಸಕರಾಗಿ ತಮ್ಮ ಸೇವೆ ಪ್ರಾರಂಭಿಸಿದ ಬಿ.ಪಿ. ಅಡ್ನೂರ್ ಅವರು ೧೯೮೫ ರಲ್ಲಿ ಕೆಎಎಸ್ ಆಗಿ ಆಯ್ಕೆಗೊಂಡು, ತಹಸಿಲ್ದಾರ್, ಉಪವಿಭಾಗಾಧಿಕಾರಿ, ಕೇಂದ್ರಸ್ಥಾನಿಕ ಸಹಾಯಕ, ಅಪರ ಜಿಲ್ಲಾಧಿಕಾರಿ ಮುಂತಾದ ಹುದ್ದೆಗಳಲ್ಲಿ ಬಾಗಲಕೋಟೆ, ಗದಗ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದನ್ನು ಇದೇ ಸಮಾರಂಭದಲ್ಲಿ ವಿವಿಧ ಅಧಿಕಾರಿಗಳು ಸ್ಮರಿಸಿದರು.  ಸಹಾಯಕ ಆಯುಕ್ತ ಮಂಜುನಾಥ್, ಕೊಪ್ಪಳ ತಹಸಿಲ್ದಾರ್ ಬಿ.ಎಲ್. ಗೋಠೆ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ, ಆಹಾರ ಇಲಾಖೆ ಉಪನಿರ್ದೇಶಕ ಅಶೋಕ್ ಕಲಘಟಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಪ್ರಾಚಾರ್ಯ ಸಿ.ವಿ. ಜಡಿಯವರ್ ಸೇರಿದಂತೆ ವಿವಿಧ ಅಧಿಕಾರಿಗಳು ಬಿ.ಪಿ. ಅಡ್ನೂರ್ ಅವರ ಸೇವೆಯ ಬಗ್ಗೆ ಮಾತನಾಡಿದರು. ಜಿಲ್ಲೆಯ ಎಲ್ಲ ತಹಸಿಲ್ದಾರರು, ಜಿಲ್ಲಾಧಿಕಾರಿಗಳ ಕಚೇರಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.  ಸ್ವಯಂ ನಿವೃತ್ತಿ ಹೊಂದಿದ ಬಿ.ಪಿ. ಅಡ್ನೂರ್ ಅವರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ, ಭಾರ ಹೃದಯದಿಂದ ಬೀಳ್ಕೊಡಲಾಯಿತು.

17 Jan 2013

Advertisement

0 comments:

Post a Comment

:) :)) ;(( :-) =)) ;( ;-( :d :-d @-) :p :o :>) (o) [-( :-? (p) :-s (m) 8-) :-t :-b b-( :-# =p~ $-) (b) (f) x-) (k) (h) (c) cheer
Click to see the code!
To insert emoticon you must added at least one space before the code.

 
Top