PLEASE LOGIN TO KANNADANET.COM FOR REGULAR NEWS-UPDATES


ಯುವಜನತೆ ಶಿಕ್ಷಣ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಯುವಜನರಿಗೆ ಕರೆ ನೀಡಿದರು.
 ನಗರದ ಸಾಹಿತ್ಯ ಭವನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
 ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಯುವಜನತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಬರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು, ಗ್ರಾಮೀಣ ಸೊಗಡಿನ ಜಾನಪದ ಕ್ಷೇತ್ರದತ್ತ ಗಮನಹರಿಸುತ್ತಿಲ್ಲ.  ಇದರಿಂದಾಗಿ ನಮ್ಮ ಭಾರತೀಯ ಸಂಸ್ಕೃತಿ ತ್ವರಿತಗತಿಯಲ್ಲಿ ಬದಲಾಗುತ್ತಿದೆ.  ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಾಸಕ್ತಿ ತೋರುತ್ತಿದ್ದು, ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಭಾಗವಹಿಸದಿರುವುದೇ ಇದಕ್ಕೆ ನಿದರ್ಶನವಾಗಿದೆ.  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯು ಯುವಕ, ಯುವತಿ ಮಂಡಳಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು, ಈ ಮೂಲಕ ಯುವಜನತೆಯನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸುವಂತೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.  ಬಡವಾಗುತ್ತಿರುವ ಸಾಂಸ್ಕೃತಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸುವ ಅಗತ್ಯವಿದೆ ಎಂದು ಜಿ.ಪಂ. ಅಧ್ಯಕ್ಷ ಕೆ. ರಾಘವೇಂದ್ರ ಹಿಟ್ನಾಳ್ ಅವರು ಅಭಿಪ್ರಾಯಪಟ್ಟರು.
 ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದ ಭಾಗ್ಯನಗರದ ಸರ್ಕಾರಿ ಪ.ಪೂ. ಕಾಲೇಜಿನ ಪ್ರಾಚಾರ್ಯ ಸಿ.ವಿ. ಜಡಿಯವರ್ ಅವರು ಮಾತನಾಡಿ, ಇತ್ತೀಚೆಗೆ ನಾಡಿನಲ್ಲಿ ಕಲೆಯನ್ನು ಪ್ರೀತಿಸುವ ಮನಸ್ಸುಗಳ ಕೊರತೆ ಕಾಡುತ್ತಿದೆ.  ಗ್ರಾಮಿಣ ಭಾಗಗಳ ಯುವಜನರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ಸೂಕ್ತ ವೇದಿಕೆ ನಿರ್ಮಿಸುವ ನಿಟ್ಟಿನಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ತೊಡಗಿದ್ದರೂ, ಇದರ ಸದುಪಯೋಗವನ್ನು ಗ್ರಾಮೀಣ ಪ್ರದೇಶದ ಯುವಕರು ಪಡೆಯಲು ವಿಫಲರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
 ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ನಗರಸಭೆ ಅಧ್ಯಕ್ಷ ಸುರೇಶ್ ದೇಸಾಯಿ, ಯುವ ಮುಖಂಡ ಮಂಜುನಾಥ ಗೊಂಡಬಾಳ ಕಾರ್ಯಕ್ರಮ ಕುರಿತು ಮಾತನಾಡಿದರು.  ಶಿವಾನಂದ ಹೊದ್ಲೂರ್, ರಾಕೇಶ್ ಕಾಂಬ್ಳಿಕರ್ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.  ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಲಾವಿದ ಹನುಮಂತಪ್ಪ ಮುಧೋಳ, ಕೊಪ್ಪಳದ ಸದಾಶಿವ ಪಾಟೀಲ್, ಎಸ್.ಎಸ್. ಹಿರೇಮಠ ಅವರು ಯುವಜನೋತ್ಸವದಲ್ಲಿ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.
 ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಭಾಗ್ಯನಗರದ ನಾಗರಾಜ ಶ್ಯಾವಿ ಅವರ ಕೊಳಲು ವಾದನ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವಲ್ಲಿ ಯಶಸ್ವಿಯಾಯಿತು.  ರಾಘವೇಂದ್ರ ಗಂಗಾವತಿ ಅವರು ಇವರಿಗೆ ತಬಲಾ ಸಾಥ್ ನೀಡಿದರು.  ಯಲಬುರ್ಗಾ ತಾಲೂಕಿನ ಅಕ್ಷತಾ ಬಣ್ಣದಬಾವಿ ಅವರ ಹಿಂದೂಸ್ತಾನಿ ಗಾಯನ, ಸಂಗೀತ ಪ್ರಿಯರಿಗೆ ರಸದೌತಣ ಒದಗಿಸಿತು.  ಕರಮುಡಿ ಗ್ರಾಮದ ಕಲಾತಂಡದವರ ಜಾನಪದ ನೃತ್ಯ ಅತ್ಯಾಕರ್ಷಕವಾಗಿತ್ತು.  ಉಳಿದಂತೆ ಯುವಜನೋತ್ಸವದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಕಾಲೇಜಿನ ತಂಡದವರಿಂದ ನಾಟಕ, ಭರತನಾಟ್ಯ, ಕಿನ್ನಾಳ ಗ್ರಾಮದ ಶಾರದ ಕಲಾಸಂಘ, ಕವಲೂರಿನ ಅಂಬೇಡ್ಕರ್ ಯುವ ಸಂಘದಿಂದ ಜನಪದ ಗೀತೆಗಳು ಮೂಡಿ ಬಂದವು.

Advertisement

0 comments:

Post a Comment

 
Top