PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು, ನ.30: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಫ್ಯಾಕ್ಸ್ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿಗೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ ನಲ್ವತ್ತು ವರ್ಷಗಳ ಕಾಲದ ಬಿಜೆಪಿ ಒಡನಾಟದಿಂದ ಹಿಂದೆ ಸರಿದಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಿವಾರ್ಯ ಕಾರಣಗಳಿಂದ ತಾನು ಬಿಜೆಪಿಗೆ ರಾಜೀನಾಮೆ ನೀಡುತ್ತಿದ್ದೇನೆ. 40 ವರ್ಷಗಳಿಂದ ಕಟ್ಟಿ ಬೆಳೆಸಿದ ಪಕ್ಷವನ್ನು ಬಿಡಲು ನನಗೆ ನೋವಾಗುತ್ತದೆ. ಪಕ್ಷಕ್ಕಾಗಿ ನಾನು ಎಲ್ಲವನ್ನೂ ತ್ಯಾಗ ಮಾಡಿದೆ. ಪಕ್ಷವೂ ನನಗೆ ಎಲ್ಲವನ್ನೂ ನೀಡಿತು. ಆದರೆ, ಬಿಜೆಪಿಯಲ್ಲಿ ಕೆಲವು ನಾಯಕ ಸಂಚಿನಿಂದಾಗಿ ನನಗಿಂದ ಈ ಪರಿಸ್ಥಿತಿ ಬಂದೊದಗಿದೆ ಎಂದು ಕಣ್ಣೀರಿಟ್ಟರು.

ಕೆಲವರಿಗೆ ನಾನು ಪಕ್ಷದಲ್ಲಿ ಮುಂದುವರಿಯುವುದು ಇಷ್ಟವಿರಲಿಲ್ಲ. ಹಾಗಾಗಿ ಪಕ್ಷದ ಕೆಲ ಮುಖಂಡರೇ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು. ಕಳೆದ ಒಂದು ವರ್ಷದಿಂದ ನಾನು ಇದೆಲ್ಲವನ್ನೂ ತಾಳ್ಮೆಯಿಂದ ಸಹಿಸಿಕೊಂಡಿದ್ದೇನೆ. ಇನ್ನು ಸಹಿಸಿಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೂ ನಾನು ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಭ್ರಷ್ಟಾಚಾರ ಆರೋಪ ಬಂದಾಗ ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಶಿಸ್ತಿನ ಸಿಪಾಯಿಯಾಗಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದೆ. ಆದರೆ ನನ್ನ ಒಳ್ಳೆಯತನವನ್ನೇ ಅವರು ನನ್ನ ದೌರ್ಬಲ್ಯ ಎಂದು ಪರಿಗಣಿಸಿದರು ಎಂದ ಅವರು, ಹಾವೇರಿಯಲ್ಲಿ ಡಿ.9ರಂದು ನಡೆಯುವ ಸಮಾವೇಶದಲ್ಲಿ ಅಧಿಕೃತವಾಗಿ ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ)ಗೆ ಸೇರಲಿರುವುದಾಗಿ ಹೇಳಿದರು

Advertisement

0 comments:

Post a Comment

 
Top