ಬಳ್ಳಾರಿ, ನ.೧೩: ಕನ್ನಡ ಸಾಹಿತ್ಯದಲ್ಲಿ ಇತ್ತೀಚಿಗೆ ಹೇಳಿದ್ದನ್ನೆ ಹೇಳಲಾಗುತ್ತಿದೆ. ಹೊಸತನದ ಸಾಹಿತ್ಯವನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಖ್ಯಾತ ವಿಮರ್ಶಕ ಎಸ್.ದಿವಾಕರ್ ಅಭಿಪ್ರಾಯ ಪಟ್ಟರು.
ನಗರದ ಸಂಸ್ಕೃತಿ ಪ್ರಕಾಶನದ ವತಿಯಿಂದ ಬೆಂಗಳೂರಿನ ಕರ್ನಾಟಕ ನಾಟಕ ಅಕಾಡೆಮಿ ಚಾವಡಿಯಲ್ಲಿ ಈಚೆಗೆ ಬಿಡುಗಡೆಗೊಂಡ ಯುವಲೇಖಕ ವಿ.ಆರ್.ಕಾರ್ಪೇಂಟರ್ ಅವರ ‘ನೀಲಿಗ್ರಾಮ’ ಕಾದಂಬರಿ ಕುರಿತು ಅವರು ಮಾತನಾಡಿದರು.
ಬರೆದದ್ದನ್ನೆ ಬರೆದರೆ ಪತ್ರಿಕೆಗಳು ಮಾಡುವ ಕೆಲಸವನ್ನು ಸಾಹಿತಿಗಳು ಮಾಡಿದಂತಾಗುತ್ತದೆ. ಅಂಥ ಸಾಹಿತ್ಯ ಬೇಗ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆ. ಇಂಥ ಕೃತಿಗಳ ನಡುವೆ ‘ನೀಲಿಗ್ರಾಮ’ ವಿಭಿನ್ನವಾಗಿ ನಿಲ್ಲುತ್ತದೆ. ನೀಲಿಗ್ರಾಮದಂಥ ಪ್ಯಾಂಟಸಿ ಕೃತಿ ಇಲ್ಲಿಯವರೆಗೆ ಕನ್ನಡದಲ್ಲಿ ಬಂದಿಲ್ಲ. ಹೊಸತನಕ್ಕೆ ತುಡಿಯುವ ಇಂಥ ಸಾಹಿತಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಅವರು ನುಡಿದರು.
ತಮ್ಮ ಆಗಾಧವಾದ ಕಲ್ಪನಾಶಕ್ತಿಯಿಂದಲೇ ವಾಸ್ತವಲೋಕಕ್ಕೆ ಪರ್ಯಾಯವಾಗಿ ಭ್ರಮಕಲೋಕವನ್ನು, ಎಲ್ಲೂ ಇಲ್ಲದ ಲೋಕವನ್ನು ಸೃಷ್ಟಿಸಿಕೊಂಡು, ಆ ಅಪರಿಚಿತ ಲೋಕದಲ್ಲಿ ಲೇಖಕ ವಿ.ಆರ್.ಕಾರ್ಪೇಂಟರ್ ಬಿಡುಬೀಸಾಗಿ ವಿಹರಿಸಿದ್ದಾರೆ. ಓದುಗನ ಕಲ್ಪನಾಶಕ್ತಿಯು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಅವರು ಹೇಳಿದರು.
ದೇವನೂರು ಮಹಾದೇವ ಕುಸುಮಬಾಲೆಯನ್ನು ಬರೆಯುವವರೆಗೂ ಆ ಲೋಕದ ಬಗ್ಗೆ ಮೈಸೂರು ಭಗ ಹೊರತುಪಡಿಸಿ ಇನ್ನುಳಿದವರಗೆ ಗೊತ್ತೆ ಇರಲ್ಲಿಲ್ಲ. ವಿಭಿನ್ನ ಭಾಷೆ ಮತ್ತು ತಂತ್ರವನ್ನು ಬಳಸಿದ್ದ ಮಹಾದೇವರವರ ಆ ಕೃತಿಯನ್ನು ಕನ್ನಡಲೋಕ ಬಹಳ ದಿನಗಳವರೆಗೆ ಒಪ್ಪಿರಲಿಲ್ಲ. ಕ್ರಮೇಣ ಅದೇ ಕೃತಿ ಪ್ರಸಿದ್ಧಿ ಪಡೆಯಿತು. ನೀಲಿಗ್ರಾಮವು ಸಹ ಪ್ರಾರಂಭದಲ್ಲಿ ಸುಲಭಕ್ಕೆ ತನ್ನೊಳಗೆ ಓದುಗನನ್ನು ಬಿಟ್ಟುಕೊಳ್ಳದಂತೆ ಕಂಡರೂ ಅನಂತರ ಸಲೀಸಾಗಿ ಓದಿಸಿಕೊಂಡು ಹೋಗುತ್ತದೆ ಎಂದು ಅವರು ವಿವರಿಸಿದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಪತ್ರಕರ್ತ ಜಿ.ಎನ್.ಮೋಹನ್, ತನ್ನ ದಿನನಿತ್ಯದ ಬದುಕಿನಲ್ಲೂ ಬಂಡಾಯಗಾರನಾಗಿ ಕಾಣುವ ವಿ.ಆರ್.ಕಾರ್ಪೇಂಟರ್ ನೀಲಿಗ್ರಾಮದಂಥ ಫ್ಯಾಂಟಸಿ ಕಾದಂಬರಿಯನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯದಲ್ಲಿ ಗೆರಿಲ್ಲಾ ಬರಹಗಾರನಾಗಿ ಗೋಚರಿಸಿದ್ದಾರೆ ಎಂದು ಶ್ಲಾಘಿಸಿದರು.
ಹಿರಿಯ ಕವಿ ಸುಬ್ಬು ಹೊಲೆಯಾರ್ ಮಾತನಾಡಿ, ನೀಲಿಗ್ರಾಮದ ಓದುಗರಿಗೆ ಕಲ್ಪನಾಲೋಕವನ್ನೆ ಪರಿಚಯಿಸುತ್ತಿರುವ ವಿ.ಆರ್.ಕಾರ್ಪೇಂಟರ್ ಮುಖಾಂತರ ಕನ್ನಡಕೊಬ್ಬ ಹಾರಿಪಾಟರ್ ಸಿಕ್ಕಂತಾಗಿದೆ ಎಂದು ಪ್ರಶಂಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ. ಸುಭಾಷ್ ಭರಣಿ ಮಾತನಾಡಿ, ವಿಭಿನ್ನ ಬರವಣಿಗೆಯನ್ನು ಸೃಷ್ಟಿಸುವ ಯುವಕರ ಕೃತಿಗಳನ್ನು ಸಂಸ್ಕೃತಿ ಪ್ರಕಾಶನ ವತಿಯಿಂದ ಪ್ರಕಟಿಸಲಾಗುವುದು ಮತ್ತು ಕೊಂಡು ಓದುಗರಿಗೆ ನೀಡಲಾಗುವುದು ಎಂದು ತಿಳಿಸಿದರು.
ಲೇಖಕಿ ಚೇತನಾ ತೀರ್ಥಹಳ್ಳಿ, ಪತ್ರಕರ್ತ, ಪ್ರಕಾಶಕ ಸಿ.ಮಂಜುನಾಥ್ ಮತ್ತು ಕೃತಿಕಾರ ವಿ.ಆರ್.ಕಾರ್ಪೇಂಟರ್ ಉಪಸ್ಥಿತರಿದ್ದರು. ವಿನಯ್ ಮಂಡ್ಯ ನಿರೂಪಿಸಿದರು.
0 comments:
Post a Comment