PLEASE LOGIN TO KANNADANET.COM FOR REGULAR NEWS-UPDATES


  ಕೊಪ್ಪಳ ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷರಾಗಿ ಅನ್ನಪೂರ್ಣ ಕಂದಕೂರಪ್ಪ ಅವರು ಆಯ್ಕೆಯಾಗಿದ್ದಾರೆ.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ  ಜಿಲ್ಲಾ ಪಂಚಾಯತಿ ಎರಡನೆ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಹಿಟ್ನಾಳ್ ಕ್ಷೇತ್ರದ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷರಾಗಿ ಹಿರೇಮನ್ನಾಪುರ ಕ್ಷೇತ್ರದ ಅನ್ನಪೂರ್ಣ ಕಂದಕೂರಪ್ಪ ಅವರು ಆಯ್ಕೆಯಾಗಿದ್ದು, ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರಾವಧಿಯು ಅಕ್ಟೋಬರ್ ೦೧ ರಿಂದ ಪ್ರಾರಂಭವಾಗಲಿದೆ ಎಂದು ಚುನಾವಣಾಧಿಕಾರಿಯಾಗಿ ಆಗಮಿಸಿದ್ದ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಘೋಷಿಸಿದರು.
Raghavendra Hitnal koppal zp president 
  ಜಿ.ಪಂ. ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿರಿಸಲಾಗಿತ್ತು.  ಕೆ. ರಾಘವೇಂದ್ರ ಹಿಟ್ನಾಳ್ ಅವರ ನಾಮಪತ್ರಕ್ಕೆ ಜಿ.ಪಂ. ಸದಸ್ಯ ಅಶೋಕ್ ತೋಟದ ಅವರು ಸೂಚಕರಾಗಿದ್ದರೆ, ಜನಾರ್ಧನ ಹುಲಿಗಿ ಅವರ ನಾಮಪತ್ರಕ್ಕೆ ಪರಸಪ್ಪ ಕತ್ತಿ ಅವರು, ಅರವಿಂದಗೌಡ ಪಾಟೀಲ್ ಅವರ ನಾಮಪತ್ರಕ್ಕೆ ಕಸ್ತೂರಮ್ಮ ಪಾಟೀಲ್ ಅವರು ಸೂಚಕರಾಗಿದ್ದರು.  ನಾಮಪತ್ರ ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಎಲ್ಲ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಘೋಷಿಸಿದರು.  ನಾಮಪತ್ರ ಹಿಂಪಡೆಯಲು ನೀಡಿದ ಕಾಲಾವಕಾಶದಲ್ಲಿ ಜನಾರ್ಧನ ಹುಲಿಗಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದರು,  ಇದರಿಂದಾಗಿ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಅರವಿಂದಗೌಡ ಪಾಟೀಲ್ ಅವರು ಅಂತಿಮ ಕಣದಲ್ಲಿ ಉಳಿದರು.  ಒಟ್ಟು ೨೭ ಸದಸ್ಯ ಬಲ ಹೊಂದಿರುವ ಕೊಪ್ಪಳ ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಸ್ಥಾನದ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ಕೆ. ರಾಘವೇಂದ್ರ ಹಿಟ್ನಾಳ್ ಅವರ ಪರವಾಗಿ ಒಟ್ಟು ೨೦ ಜನ ಸದಸ್ಯರು ತಮ್ಮ ಬೆಂಬಲ ವ್ಯಕ್ತಪಡಿಸಿದರು.  ಅರವಿಂದಗೌಡ ಪಾಟೀಲ್ ಪರವಾಗಿ ೦೭ ಜನ ಸದಸ್ಯರು ಮಾತ್ರ ಬೆಂಬಲಿಸಿದರು.  ಇದರಿಂದಾಗಿ ಕೆ. ರಾಘವೇಂದ್ರ ಹಿಟ್ನಾಳ್ ಅವರು ಬಹುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾದರು.  ಕೆ. ರಾಘವೇಂದ್ರ ಹಿಟ್ನಾಳ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಸದಸ್ಯರ ವಿವರ ಇಂತಿದೆ.  ವಿದ್ಯಾಶ್ರೀ ಗಜೇಂದ್ರಗಡ, ಲಕ್ಷ್ಮೀದೇವಿ ಹಳ್ಳೂರು, ಅನ್ನಪೂರ್ಣ ಕಂದಕೂರಪ್ಪ, ನಾಗನಗೌಡ ಪಾಟೀಲ್, ಭಾಗೀರಥಿ ಪಾಟೀಲ, ವನಿತಾ ಗಡಾದ, ಜನಾರ್ಧನ ಹುಲಿಗಿ, ಸೀತಾ ಹಲಗೇರಿ, ವಿಜಯಲಕ್ಷ್ಮಿ ರಾಮಕೃಷ್ಣ, ಹೇಮಾವತಿ ಲಂಕೇಶ್, ಅಮರೇಶಪ್ಪ ಕುಳಗಿ, ಗಂಗಣ್ಣ ಸಮಗಂಡಿ, ವೀರೇಶ್ ನಾಗಪ್ಪ ಸಾಲೋಣಿ, ರಾಮಣ್ಣ ಸಾಲಭಾವಿ, ಅಶೋಕ್ ತೋಟದ, ಉಮಾ ಮುತ್ತಾಳ, ಹೇಮಲತಾ ಮತ್ತು ಈರಪ್ಪ ಕುಡಗುಂಟಿ.  ಅರವಿಂದಗೌಡ ಪಾಟೀಲ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಜಿ.ಪಂ. ಸದಸ್ಯರ ವಿವರ ಇಂತಿದೆ.  ಹನುಮಕ್ಕ ಚೌಡ್ಕಿ, ಪರಸಪ್ಪ ಕತ್ತಿ, ಕಸ್ತೂರಮ್ಮ ಪಾಟೀಲ, ಪಿಲ್ಲಿ ವೆಂಕಟರಾವ್ ಕೊಂಡಯ್ಯ, ಚನ್ನಮ್ಮ ಹೇರೂರು, ಜ್ಯೋತಿ ನಾಗರಾಜ್ ಬಿಲ್ಗಾರ್.
  ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರ ಸ್ಥಾನವನ್ನು ಅನುಸೂಚಿತ ಪಂಗಡ (ಮಹಿಳೆ) ವರ್ಗಕ್ಕೆ ಮೀಸಲಿರಿಸಲಾಗಿತ್ತು.  ಉಪಾಧ್ಯಕ್ಷರ ಸ್ಥಾನಕ್ಕಾಗಿ ಅನ್ನಪೂರ್ಣ ಕಂದಕೂರಪ್ಪ ಅವರ ನಾಮಪತ್ರಕ್ಕೆ ಉಮಾ ಶಿವಪ್ಪ ಮುತ್ತಾಳ್ ಅವರು ಸೂಚಕರಾಗಿದ್ದರೆ, ಜ್ಯೋತಿ ನಾಗರಾಜ್ ಬಿಲ್ಗಾರ್ ಅವರ ನಾಮಪತ್ರಕ್ಕೆ ಹನುಮಕ್ಕ ಚೌಡ್ಕಿ ಅವರು ಸೂಚಕರಾಗಿದ್ದರು.  ನಾಮಪತ್ರ ಪರಿಶೀಲನೆ ನಡೆಸಿದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಎರಡೂ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಘೋಷಿಸಿದರು.  ನಾಮಪತ್ರ ಹಿಂಪಡೆಯಲು ನೀಡಿದ ಕಾಲಾವಕಾಶದಲ್ಲಿ ಜ್ಯೋತಿ ನಾಗರಾಜ್ ಬಿಲ್ಗಾರ್ ಅವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದರಿಂದ, ಅನ್ನಪೂರ್ಣ ಕಂದಕೂರಪ್ಪ ಅವರೇ ಏಕೈಕ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದರು.  ಇದರಿಂದಾಗಿ ಜಿ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಅನ್ನಪೂರ್ಣಮ್ಮ ಕಂದಕೂರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಗುಲಬರ್ಗಾ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಅವರು ಘೋಷಿಸಿದರು.
  ಚುನಾವಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಸದಸ್ಯರುಗಳು, ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ, ಉಪಕಾರ್ಯದರ್ಶಿ ಮುಕ್ಕಣ್ಣ ಸೇರಿದಂತೆ ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Advertisement

0 comments:

Post a Comment

 
Top