ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ರೇವಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ೨೫,೦೦೦/- ರೂ. ದಂಡ ವಿಧಿಸಿ ಇಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಎಸ್.ಶಿಂಧೆ ಅವರು ತೀರ್ಪು ನೀಡಿದ್ದಾರೆ.
ಕಳೆದ ೨೦೧೦ ರ ಡಿಸೆಂಬರ್ ೨೬ ರಂದು ಚಿಕ್ಕಗೊನ್ನಾಗರ ಬಳಿಯ ಹೊಲದಲ್ಲಿ ತನ್ನ ಪತ್ನಿ ಭೀಮವ್ವ ಎಂಬುವವರು ಲಕ್ಷ್ಮವ್ವ ದೊಡ್ಡಮನಿ, ಮಂಜುಳಾ ಇವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆರೋಪಿ ರೇವಪ್ಪ ತನ್ನ ಪತ್ನಿ ಭೀಮವ್ವಳನ್ನು ಕೊಡಲಿಯಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಸಾಗರ ಪೊಲೀಸ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಧೀಶರಾದ ಡಿ.ಎಸ್.ಶಿಂಧೆ ಅವರು, ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಮಾನಿಸಿ, ಆರೋಪಿಗೆ ಭಾ.ದ.ಸ. ಕಲಂ: ೩೦೭, ೫೦೪ ಮತ್ತು ೫೦೬ ರ ಅಪರಾಧಕ್ಕೆ ಜೀವಾವಧಿ ಕಠಿಣ ಶಿಕ್ಷೆ ಹಾಗೂ ರೂ.೨೫,೦೦೦/- ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎನ್.ನಾಗೇಂದ್ರ ಇವರು ವಾದಿಸಿದ್ದರು.
0 comments:
Post a Comment