: ತುಂಗಭದ್ರಾ ಜಲಾಶಯದಿಂದ ನೀರು ಪಡೆಯುತ್ತಿರುವ ಕಾರ್ಖಾನೆಗಳು ಇನ್ನು ಮುಂದೆ ಕಡ್ಡಾಯವಾಗಿ ಜಾಕ್‌ವೆಲ್‌ಗಳಿಂದ ಮೀಟರ್ ಅಳವಡಿಸಿಕೊಂಡು ಪಡೆಯಬೇಕು, ಇಲ್ಲದಿದ್ದಲ್ಲಿ ಅಂತಹ ಕಾರ್ಖಾನೆಗಳಿಗೆ ನೀರು ಒದಗಿಸುವುದನ್ನು ಸ್ಥಗಿತಗೊಳಿಸಲು ವಿಶೇಷ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ಅವರು ಹೇಳಿದರು.
ಮುನಿರಾಬಾದ್‌ನ ಕಾಡಾ ಕಚೇರಿ ಸಭಾಂಗಣದಲ್ಲಿ ತುಂಗಭದ್ರಾ ಯೋಜನೆಯ ಅನಧಿಕೃತ ನೀರು ಸರಬರಾಜು ತಡೆಗಟ್ಟುವ ಹಾಗೂ ಇತರೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಏರ್ಪಡಿಸಲಾಗಿದ್ದ ವಿಶೇಷ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಿಂದ ಸದ್ಯ ೮ ಬೃಹತ್ ಕಾರ್ಖಾನೆಗಳಿಗೆ ೩. ೨೬೫ ಟಿ.ಎಂ.ಸಿ. ನೀರು ಬಳಕೆಗೆ ಪರವಾನಿಗೆ ನೀಡಲಾಗಿದೆ. ವಿವಿಧ ಕಾಲುವೆಗಳಿಂದ ೩ ಕಾರ್ಖಾನೆಗಳಿಗೆ ೦. ೧೯೭ ಟಿ.ಎಂ.ಸಿ., ಹಾಗೂ ನದಿ ಮತ್ತು ಇತರೆ ಮೂಲಗಳಿಂದ ೮ ಕಾರ್ಖಾನೆಗಳಿಗೆ ೩. ೧೭೮ ಟಿ.ಎಂ.ಸಿ. ಹೀಗೆ ಒಟ್ಟು ೬. ೬೪೦ ಟಿ.ಎಂ.ಸಿ. ನೀರು ಒದಗಿಸಲಾಗುತ್ತಿದೆ. ಕಾರ್ಖಾನೆಗಳು ಷರತ್ತುಗಳಿಗನುಗುಣವಾಗಿ ಬಳಸುವ ನೀರು ನಿಗದಿತ ಪ್ರಮಾಣ ಮೀರದಂತೆ ಎಲ್ಲ ಕಾರ್ಖಾನೆಗಳು ನೀರು ಬಳಸಲು ಮೀಟರ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗುವುದು. ಕಾರ್ಖಾನೆಗಳು ಕಡ್ಡಾಯವಾಗಿ ಜಾಕ್‌ವೆಲ್ ನಿರ್ಮಿಸಿ, ಅಲ್ಲಿಂದ ನೀರು ಒಯ್ಯಬೇಕೆಂಬ ನಿರ್ಣಯವನ್ನು ಸಭೆ ತೆಗೆದುಕೊಂಡಿದೆ. ಜಲಾಶಯದಲ್ಲಿ ನೀರಿನ ಮಟ್ಟ ೧೫೭೫ ಅಡಿಗಿಂತ ಹೆಚ್ಚು ಇದ್ದರೆ ಮಾತ್ರ ಕಾರ್ಖಾನೆಗಳಿಗೆ ನೀರು ಒದಗಿಸಲು ನಿಯಮಗಳಲ್ಲಿ ಅವಕಾಶವಿದೆ. ಇದಕ್ಕಿಂತ ಕಡಿಮೆ ಇದ್ದಲ್ಲಿ ನೀರು ಪಡೆಯಲು ಸಾಧ್ಯವಿಲ್ಲ. ಮುಂದಿನ ವರ್ಷದೊಳಗೆ ಕಾರ್ಖಾನೆಗಳು ಜಾಕ್‌ವೆಲ್ ನಿರ್ಮಿಸಿಕೊಳ್ಳದಿದ್ದಲ್ಲಿ ನೀರು ಬಿಡುಗಡೆ ಸ್ಥಗಿತಗೊಳಿಸಲಾಗುವುದು ಎಂದು ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ್ ತಿಳಿಸಿದರು.
ರಾಜ್ಯ ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಯಾವುದೇ ಕಾರ್ಖಾನೆಗಳು ನಿಗದಿಗಿಂತ ಹೆಚ್ಚಿನ ನೀರು ಪಡೆದಿರುವ ಯಾವುದೇ ಪ್ರಕರಣ ಕಂಡುಬಂದಿಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ, ಬಲದಂಡೆ ಕೆಳಮಟ್ಟದ ಹಾಗೂ ಮೇಲ್ಮಟ್ಟದ ಕಾಲುವೆಗಳಿಂದ ಪಂಪ್‌ಸೆಟ್, ಸೈಫನ್ ಪೈಪ್ ಇತ್ಯಾದಿ ಉಪಕರಣಗಳಿಂದ ಅನಧಿಕೃತವಾಗಿ ನೀರು ಉಪಯೋಗಿಸಿಕೊಳ್ಳುತ್ತಿರುವುದನ್ನು ಪತ್ತೆ ಹಚ್ಚಿ, ಅಂತಹ ಸಂದರ್ಭದಲ್ಲಿ ಕಠಿಣ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ತಂಡವನ್ನು ರಚಿಸಲಾಗಿದ್ದು, ಕಂದಾಯ, ಪೊಲೀಸ್, ಜೆಸ್ಕಾಂ ಮತ್ತು ನೀರಾವರಿ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ, ಅಕ್ರಮ ನೀರು ಪಡೆಯುವುದನ್ನು ತಡೆಗಟ್ಟಬೇಕು. ಅಗತ್ಯ ಬಿದ್ದಲ್ಲಿ ಸೂಕ್ತ ಪೊಲಿಸ್ ರಕ್ಷಣೆ ಪಡೆಯಬೇಕು. ಜಿಲ್ಲಾಧಿಕಾರಿಗಳಿಗೆ ಇದರ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದರು.
ಕಲುಷಿತ ನೀರು ವರದಿಗೆ ಕ್ರಮ : ಕಾರ್ಖಾನೆಗಳ ತ್ಯಾಜ್ಯದಿಂದ ತುಂಗಭದ್ರಾ ಜಲಾಶಯದ ನೀರು ಕಲುಷಿತವಾಗಿತ್ತಿರುವುದಾಗಿ ದೂರುಗಳು ಬರುತ್ತಿದ್ದು, ಈ ಕುರಿತಂತೆ ಪ್ರತಿಯೊಂದು ಕಾರ್ಖಾನೆಗಳು ತ್ಯಾಜ್ಯ ವಿಲೇವಾರಿ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲಿಸಿ ಸಮಗ್ರ ವರದಿಯನ್ನು ಸಲ್ಲಿಸುವಂತೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಅಧಿಕಾರಿಗಳು ನೀಡುವ ವರದಿಯನ್ನಾಧರಿಸಿ, ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಶಿರಗುಪ್ಪ ಶಾಸಕ ಸೋಮಲಿಂಗಪ್ಪ, ಅಧೀಕ್ಷಕ ಅಭಿಯಂತರ ಮಂಜಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಗೂ ಮುನ್ನ ತುಂಗಭದ್ರಾ ಯೋಜನೆಯ ಅನಧಿಕೃತ ನೀರು ಸರಬರಾಜು ತಡೆಗಟ್ಟುವ ಹಾಗೂ ಇತರೆ ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಲು ಏರ್ಪಡಿಸಲಾಗಿದ್ದ ವಿಶೇಷ ಸಭೆಯಲ್ಲಿ ಶಾಸಕರುಗಳಾದ ಸಂಗಣ್ಣ ಕರಡಿ, ಸೋಮಲಿಂಗಪ್ಪ, ಪರಣ್ಣ ಮುನವಳ್ಳಿ, ಶಿವರಾಜ್ ತಂಗಡಗಿ, ವೆಂಕಟರಾವ್ ನಾಡಗೌಡ, ಹಾಲಪ್ಪ ಆಚಾರ್, ಪ್ರತಾಪಗೌಡ ಪಾಟೀಲ್, ರಾಜಾ ರಾಯಪ್ಪ ನಾಯಕ್, ಹಂಪಯ್ಯ ನಾಯಕ್, ಕೊಪ್ಪಳ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ರಾಯಚೂರು ಜಿಲ್ಲಾಧಿಕಾರಿ ಸಾವಿತ್ರಿ, ಬಳ್ಳಾರಿ ಜಿಲ್ಲಾಧಿಕಾರಿ ಅಮ್ಲನ್ ಆದಿತ್ಯ ಬಿಸ್ವಾಸ್, ಪೊಲೀಸ್ ವರಿಷ್ಠಾಧಿಕಾರಿಗಳಾದ ಬಿ.ಎಸ್. ಪ್ರಕಾಶ್, ಚಂದ್ರಹಾಸ್ ಗುಪ್ತ, ಬಿಸನಳ್ಳಿ, ಮುಖ್ಯ ಅಭಿಯಂತರ ಮಲ್ಲಿಕಾರ್ಜುನ್ ಸೇರಿದಂತೆ ನೀರಾವರಿ ಇಲಾಖೆ, ಜೆಸ್ಕಾಂ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment