ಸ್ಪೀಡ್ ಆಗಿ ಓಡೋ ಡಬ್ಬಾ ಗಾಡಿ ಥರಾ
ರೋಡು ಚೆನ್ನಾಗಿದೆ. ಗಾಡಿ ಓಡ್ಸೋನು ಚೆನ್ನಾಗಿದಾನೆ. ಗಾಡಿಗೂ ಸ್ಪೀಡ್ ಇದೆ. ಆದರೆ ಏನ್ಮಾಡೋದು ಇದು ಹತ್ತಾರು ವರ್ಷಗಳಿಂದ ಓಡ್ಕೋಂಡು ಬಂದೀರೊ ಡಬ್ಬಾ ಗಾಡಿ ಥರಾ ಅನ್ನೋ ಹಾಗಿದೆ ಈ ವಾರ ತೆರೆಕಂಡ ಕನ್ನಡದ ರೋಮಿಯೋ ಕತೆ. ಫಸ್ಟ್ ಆಫ್ ಟೈಂ ಹೋಗಿದ್ದೆ ಗೊತ್ಲಾಗ್ಲಿಲ್ಲ ಕಣ್ರೀ ಅನ್ನುವಷ್ಟು ಸ್ಪೀಡ್. ಸೆಕೆಂಡ್ ಆಫ್ ಯಪ್ಪಾ ಯಾವಾಗ ಮುಗಿಯತಪ್ಪಾ ಸೀಟ್ ಕೆಳಗಿನ ತಿಗಣೆ ಕಾಟ ಎನ್ನುವಷ್ಟು ಬೋರು.
ರೋಮಿಯೋಗೆ ಆಕ್ಷನ್, ಕಟ್ ಹೇಳಿರೋ ಪಿಸಿ ಶೇಖರ್ ಕಾಮಿಡಿ ಟ್ರ್ಯಾಕ್ ಕಡೆ ಕೊಟ್ಟ ಗಮನವನ್ನು ಕತೇನಾ ಇನ್ನಷ್ಟು ಗಟ್ಟಿ ಮಾಡೋ ಕಡೆ ಕೊಟ್ಟಿದ್ದರೆ ರೋಮಿಯೋ ೫೦ ಬಾಲ್‌ನಲ್ಲಿ ೩೫೦ ರನ್ ಹೊಡೆದು ಗೆದ್ದಂಗಿರ್‍ತಿದ್ದ. ಮೊದಲ ೨೫ ಓವರ್‌ನಲ್ಲಿ ಭರ್ಜರಿ ೧೫೦ ರನ್ ಹೊಡಿಯೋ ರೋಮಿಯೋ ಟೀಮ್, ಉಳಿದ ೨೫ ಓವರ್‌ನಲ್ಲಿ ೩೦ ರನ್‌ಗೆ ಆಲೌಟ್ ಆದಂಗೆ ಫೀಲ್ ಆಗ್ತದೆ ಸಿನಿಮಾ ನೋಡ್ದೋರ್‍ಗೆ.
ಈ ವಾರ ಈಗ ನೋಣದ ಕಾಟ ಬೇರೆ. ಮೊದಲ ವಾರದಲ್ಲೇ ನಮ್ ರೋಮಿಯೋ ೨ ಕೋಟಿ ಬಾಚ್ಕೋಂತಾನೆ ಅನ್ಕೊಂಡಿರೋ ಫೈನಾನ್ಷಿಯರ್‌ಗಳಿಗೆ ನೋಣ ತುಂಬಾನೆ ಕಷ್ಟ ಕೊಡ್ತಾ ಅದೆ. ಕಾಮಿಡಿ, ಡೈಲಾಗ್‌ನಲ್ಲಿ ಫುಲ್ ಮಾರ್ಕ್ಸ ಪಡೆಯೋ ರೋಮಿಯೋ, ಇನ್ನುಳಿದ ವಿಷಯದಲ್ಲಿ ಪ್ರೇಕ್ಷಕರ ನಿರೀಕ್ಷೆಯನ್ನು ಫುಲ್ ಫಿಲ್ ಮಾಡೋಕಾಗಿಲ್ಲ.
ಹುಟ್ತಾನೆ ತುಂಟತನ ಮಾಡ್ತಾ ಹುಟ್ಟಿರೋ ಗಣೇಶನಿಗೆ ಅಪ್ಪನ್ನ ಗೋಳಾಡಿಸೋದು, ಸುಳ್ಳು ಹೇಳೋದು, ಫ್ಲರ್ಟ್ ಮಾಡೋದು ತುಂಬಾನೇ ಸಲೀಸು. ಸುಳ್ಳೇ ಈತನ ಬದುಕನ್ನ ಹಾಳು ಮಾಡಿ, ಮತ್ತದೇ ಸುಳ್ಳೇ ಬದುಕನ್ನ ಸರಿ ಮಾಡುತ್ತೆ. ಸತ್ಯ ಹಾಗೂ ಸುಳ್ಳನ್ನ ಸಮಯಕ್ಕೆ ಸರಿಯಾಗಿ ಸಂದರ್ಭ ನೋಡಿಕೊಂಡು ಹೇಳಬೇಕು ಎನ್ನುವ ಮಹಾನ್ ಸಂದೇಶವನ್ನು ರೋಮಿಯೋ ನೀಡ್ತಾನೆ.
ಪೋಲಿ ಅಲೆಯೋ ಮಗನಿಗೆ ಅಪ್ಪನ ಸ್ನೇಹಿತ ಕ್ರೇಜಿ ಕರ್ನಲ್ ಆಫೀಸಿನಲ್ಲಿ ಕೆಲಸ. ಅದೂ ಅಲ್ಲಿ ಸುಂದರಿ ಇದಾಳೆ ಅನ್ನೋ ಕಾರಣಕ್ಕೆ ಕೆಲಸ ಮಾಡೋ ಗಣೇಶ, ಸುಂದರಿ ಕೆಲಸದಲ್ಲಿ ತನಗಿಂತ ಸೀನಿಯರ್ ಆದ್ರೂ ಸುಳ್ಳಿನ ತಾಜ್ ಮಹಲ್ ಕಟ್ತಾ ಕಾಳು ಹಾಕ್ತಾನೆ. ಹಕ್ಕಿ ಬಲೆಗೆ ಬೀಳುತ್ತೆ. ನಾಯಕಿ ಶ್ರುತಿ ತಂದೆಗೆ ಭಾವಿ ಅಳಿಯನ ಕರಾಮತ್ತು ಗೋತ್ತಾಗಿ ಅವನ್ನ ಮದುವೆ ಆಗ್ಬೇಡ ಅಂತ ಗಿಣಿಗೆ ಹೇಳ್ದಂಗೆ ಹೇಳಿದ್ರು ಹುಡುಗ್ರು ಸಿನಿಮಾದ ಶಂಭೋ ಶಿವ ಶಂಭೊ ಮ್ಯೂಸಿಕ್ ಟ್ರ್ಯಾಕ್ ಆಕೆಗೆ ಸ್ಪೂರ್ತಿ ನೀಡಿದಂತೆ ಮೆಚ್ಚಿದ ವರನಿಗೆ ಕೊರಳೊಡ್ಡುತ್ತಾಳೆ.
ಇಲ್ಲಿಂದ ಶುರು ನೋಡಿ ಗಣೇಶ್ ಮೊದಲು ಹೇಳಿದಂಗೆ ಡಾಲರ್ ಕಾಲನೀಲಿ ಎಲ್ಲಿರ್‍ಬೇಕು ಮನೆ. ಗಣೇಶ್‌ನ ಮನೆ ಇರೋದೇ ಸ್ಲಂ ಥರಾ ಇರೋ ಕಾಲನಿಯಲ್ಲಿ. ದಿನ ಬೆಳಗಾದರೆ ಸಾಲಗಾರರ ಕಾಟ. ಗಣೇಶ್‌ನ ಸುಳ್ಳಾಟಕ್ಕೆ ರೋಸಿ ಹೋದ ಶ್ರುತಿ ಡೈವೋರ್ಸ್ ಮಾಡ್ತಾಳೆ. ಆಗ ಒಂದೇ ಹಾಡಿನಲ್ಲಿ ಲೈಫ್‌ನ್ನ ಸಿರಿಯಸ್ ತಗೊಂಡು ನಾಯಕ ಉದ್ಧಾರ ಆಗ್ತಾನೆ. ಮುಂದಿಂದು ಹೇಳೋದು ಬೇಡ ಬಿಡಿ. ಥೇಟರ್‌ಗೆ ಹೋಗಿ ನೀವೆ ನೋಡಿ.
ಬರೀ ಓಳು ಬರೀ ಓಳು, ತಗಲ್ಹಾಕೊಂಡೆ ನಾನು ತಗಲ್ಹಾಕೊಂಡೆ, ಹೇಳಿದ್ದು ಸುಳ್ಳಾಗಬಹುದು ಹಾಡಿನ ತುಣುಕುಗಳನ್ನು ಸಿಚ್ಯುವೇಷನ್ ಸರಿಹೊಂದುವಂತೆ ಮ್ಯಾಚ್ ಮಾಡಿದ್ದು ಪಿಸಿ ಶೇಖರ್ ಜಾಣ್ಮೆ ಎನ್ನಬಹುದು. ಸಿನಿಮಾದುದ್ದಕ್ಕೂ ಸ್ಪೀಡ್ ಆಗಿ ಎರಡೆರಡು ಅರ್ಥದ ಮಾತುಗಳನ್ನು ಬಳಸಿರೋ ರಂಗಾಯಣ ರಘು ಚಿತ್ರದ ಕೊನೆಯಲ್ಲಿ ನನ್ನ ಹೆಸರಷ್ಟೇ ಕಾಶೀನಾಥ ಅಷ್ಟೇ ಎಂದು ಕ್ಲ್ಯಾರಿಫೀಕೇಷನ್ ಕೊಡ್ತಾರೆ.
ಸಿನಿಮಾದ ಛಾಯಾಗ್ರಹಣ, ಸಂಭಾಷಣೆ ಬಗ್ಗೆ ಎರಡು ಮಾತಿಲ್ಲ. ಸೆಕೆಂಡ್ ಆಫ್ ಡಲ್ಲು. ಕ್ಲೆಮ್ಯಾಕ್ಸ ನೀರಸ. ಮಾಸ್ ಪ್ರಿಯರಿಗೆ ಒಂದೇ ಫೈಟ್ ಇರೋದು ಬೇಸರ ತಂದಿದೆ. ರೋಮಿಯೋಗೆ ಸಂಗೀತ ನೀಡಿರೋ ಆರ್ಜುನ್ ಜನ್ಯ ಚಿತ್ರದ ಎರಡನೇ ನಾಯಕ ಎನ್ನಲು ಅಡ್ಡಿಯಿಲ್ಲ. ಭಟ್ರು ಬರೆದಿರುವ ಹಾಡುಗಳು ಕಚಗುಳಿ ಇಡ್ತವೆ. ಬಟು ಬೆಡ್‌ಶೀಟಿನಲ್ಲಿ ಹಾಡಿನಲ್ಲಿ ಬಡತನದ ಮಧ್ಯವಯಸ್ಕ ಮಹಿಳೆಯರ ನೃತ್ಯ ಅತ್ಯಂತ ಶ್ರೀಮಂತಿಕೆಯಿಂದ ಕೂಡಿದೆ.ಯುದ್ಧಕಾಂಡ ಸಿನಿಮಾದಲ್ಲಿ ರವಿಚಂದ್ರನ್ ಮಾಡ್ತಿರೋ ವಾದ ಕೇಳಿಯೇ ನಾನು ತಾಯಿ ಗರ್ಭದಿಂದ ಹೊರಬಂದೆ ಎನ್ನುವ ವಕೀಲ ಮಿತ್ರನ ಡೈಲಾಗ್‌ಗೆ ಚಪ್ಪಾಳೆ ಸಿಳ್ಳೆ.
ಅಭಿನಯದ ವಿಷಯದಲ್ಲಿ ಗಣೇಶ್ ಸೂಪರ್‍ಬ್. ನಾಯಕಿ ಭಾವನಾ ನಕ್ಕರೆ ಚಂದ. ಅದರಲ್ಲೂ ಕನ್ನಡಕ ಹಾಕಿದ ಭಾವನಾ ತುಂಬಾ ಮುದ್ದಾಗಿ ಕಾಣ್ತಾಳೆ. ನಟನೆಯಲ್ಲಿ ಗಣೇಶ್‌ಗೆ ಪೈಪೋಟಿ. ರಂಗಾಯಣ ರಘು ಅಲ್ಲಲ್ಲಿ ಸ್ಪೀಡ್ ಮಾತಾಡೋದ್ರಿಂದ ಕೆಲ ಮಾತುಗಳು ಕಿವಿಗೆ ಬೀಳೋವಷ್ಟರಲ್ಲಿ ಮುಂದಿನ ಡೈಲಾಗ್ ಬಂದ್‌ಬಿಟ್ಟಿರುತ್ತೆ. ಅವರ ಎಂದಿನಂತೆ ಅಂಗಿಕ ಅಭಿನಯದಿಂದ ಇಷ್ಟವಾಗ್ತಾರೆ. ಸಾಧುಕೋಕಿಲಾ ಇದ್ದಲ್ಲಿ ನಗುವಿಗೆ ಕೊರತೆ ಎಲ್ಲಿ ಎನ್ನುವಂತೆ ಸಾಧು ನಟಿಸಿದ್ದಾರೆ. ಸುಧಾ ಬೆಳವಾಡಿ, ರಮೇಶ್ ಭಟ್, ಮಿತ್ರಾ, ಅವಿನಾಶ್ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಚಿತ್ರದಲ್ಲಿ ನಮ್ಮ ರೋಮಿಯೋ ಗಣೇಶ್ ಒಂದು ಕಡೆ ಹೇಳ್ತಾನೆ. ಪ್ರತಿಯೊಂದು ಒಳ್ಳೇದರ ಹಿಂದೆ ಕಟ್ಟದ್ದು ಇರತ್ತಂತೆ. ಹಾಗೇನೇ ಪ್ರತಿಯೊಂದು ಕೆಟ್ಟದ್ದರ ಹಿಂದೆ ಒಳ್ಳೇದೂ ಇರುತ್ತಂತೆ. ಹಾಗಾದ್ರೆ ರೋಮಿಯೋನನ್ನ ನೋಡೋದು ಒಳ್ಳೇಯದಾ ಕೆಟ್ಟದ್ದಾ. ನಿರ್ಧರಿಸೋರು ನೀವು.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಶಾರದಾ ಚಿತ್ರಮಂದಿರ, ಕೊಪ್ಪಳ.
ಮಾರ್ಕ್ಸು : ೧೦೦ಕ್ಕೆ ೫೫.
ಚಿತ್ರಕೃಪೆ : ಅಂತರ್ಜಾಲ
u r right....
ReplyDeletehttp://ravindratalkies.blogspot.in