ಕೆರೆಗಳು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಕೆರೆಗಳಲ್ಲಿ ತುಂಬಿರುವ ಹೂಳೆತ್ತಿ, ಪುನಶ್ಚೇತನಗೊಳಿಸಿದಲ್ಲಿ ಪಾತಾಳಕ್ಕಿಳಿದಿರುವ ಅಂತರ್ಜಲ ಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ ಎಂದು ಕೊಪ್ಪಳ ಶಾಸಕ ಕರಡಿ ಸಂಗಣ್ಣ ಹೇಳಿದರು.
ತಾಲೂಕಿನ ಗಿಣಿಗೇರಾ ಕೆರೆಯ ಪುನಃಶ್ಚೇತನ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ವರು ಮಾತನಾಡಿದರು. ಕೊಪ್ಪಳ ತಾಲೂಕಿನಲ್ಲೆ ಗಿಣಿಗೇರಾ ಕೆರೆ ದೊಡ್ಡದು ಹಾಗೂ ಹಳೆಯ ಕೆರೆ ಎಂಬ ಖ್ಯಾತಿ ಹೊಂದಿದ್ದು, ಇತ್ತೀಚೆಗೆ ಶಿಥಿಲಗೊಳ್ಳತೊಡಗಿತ್ತು. ಹಾಗಾಗಿ ಸಾಕಷ್ಟು ನೀರು ನಿಲ್ಲದೆ ಪೋಲಾಗಿ ಹೋಗುತ್ತಿತ್ತು. ಈ ಕೆರೆ ಅಭಿವೃದ್ಧಿಯಾಗಿ ಸಮೃದ್ಧ ನೀರು ಸಂಗ್ರಹವಾದರೆ ಈ ಭಾಗದ ೭-೮ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚುತ್ತದೆ. ಹಾಗೂ ಸುಮಾರು ೩೦೦ ಎಕರೆ ಪ್ರದೇಶ ಇದರಿಂದ ನೀರಾವರಿ ಸೌಲಭ್ಯ ಹೊಂದುವುದರ ಜತೆಗೆ ನೂರಾರು ರೈತರಿಗೆ ಅನುಕೂಲವಾಗುತ್ತ್ತದೆ. ಈ ಉದ್ದೇಶದಿಂದ ಕೆರೆ ಪುನಃಶ್ಚೇತನ ಕಾರ್ಯ ಕೈಗೊಳ್ಳಲಾಗಿದೆ. ಇತ್ತೀಚೆಗೆ ಅರಣ್ಯ ನಾಶವಾಗುತ್ತಿದ್ದು, ಇದರಿಂದ ಪ್ರಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹೀಗಾಗಿ ಮಳೆ ಕಡಿಮೆಯಾಗಿ ಬರಗಾಲ ತಾಂಡವವಾಡಲು ಕಾರಣವಾಗಿದೆ. ಪರಿಸರ ನಾಶವಾಗದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಮ್ಮ ಹೊಲಗಳಲ್ಲಿ ಹಾಗೂ ಮನೆ ಮುಂದೆ ಗಿಡಗಳನ್ನು ಬೆಳೆಸುವದನ್ನು ರೂಢಿಸಿಕೊಳ್ಳಬೇಕು ಎಂದು ಶಾಸಕ ಸಂಗಣ್ಣ ಕರಡಿ ಅವರು ಮನವಿ ಮಾಡಿದರು.
ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ ಪಾಟೀಲ್ ಮಾತನಾಡಿ, ಗಿಣಿಗೇರಾ ಕೆರೆ ಪುನಃಶ್ಚೇತನಕ್ಕಾಗಿ ರೂ. ೨೮.೨೪ ಲಕ್ಷ ಮಂಜೂರಾಗಿದ್ದು ಈ ಅನುದಾನದಲ್ಲಿ ಕೆರೆಯ ಕೋಡಿ ದುರಸ್ತಿ, ಬಂಡ್ ನಿರ್ಮಾಣ, ಗೇಟ್ ಹಾಗೂ ಕಾಲುವೆಗಳ ದುರಸ್ತಿ, ಜಲಾನಯನ ಅಭಿವೃದ್ಧಿ, ಸೌಂದರ್ಯೀಕರಣ ಇತ್ಯಾದಿ ಕಾಮಗಾರಿಗಳನ್ನು ಮಾಡಲಾಗುವುದರ ಜತೆಗೆ ಈ ಭಾಗದ ಜನತೆಗೆ ಅನುಕೂಲವಾಗುವಂತೆ ಕೆರೆ ಪುನಃಶ್ಚೇತನಗೊಳಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ಸೀತಾ ಗೂಳಪ್ಪ ಹಲಗೇರಿ, ತಾ.ಪಂ. ಅಧ್ಯಕ್ಷ ನಾಗರಾಜ ಚಳ್ಳೊಳ್ಳಿ, ಮುನಿರಾಬಾದ್ ಗ್ರಾ.ಪಂ. ಅಧ್ಯಕ್ಷ ಬಾಲಚಂದ್ರನ್, ಗಿಣಿಗೇರಾ ಗೂಳಪ್ಪ ಹಲಗೇರಿ, ಮಾರುತೆಪ್ಪ ಹಲಗೇರಿ, ಕರಿಯಪ್ಪ ಮೇಟಿ, ನೀಲಪ್ಪ ಮೇಟಿ, ಶೇಖರ್ ಇಂದರಗಿ, ಗ್ರಾ.ಪಂ. ಸದಸ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
0 comments:
Post a Comment