PLEASE LOGIN TO KANNADANET.COM FOR REGULAR NEWS-UPDATES


 ಕೊಪ್ಪಳ, ಜೂ. ೨೩ : ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ಲಾಡಿ ಅವರು ಹೇಳಿದರು.
ಅವರು ಜೂ. ೨೩ ರಂದು ಇಲ್ಲಿಗೆ ಸಮೀಪದ ಓಜನಹಳ್ಳಿ ಗ್ರಾಮದಲ್ಲಿ ಚೇತನ್ ಸಾಂಸ್ಕೃತಿಕ ಕಲಾ ಸಂಸ್ಥೆ ಆಯೋಜಿಸಿದ್ದ ೫ನೇ ವಾರ್ಷಿಕೋತ್ಸವ, ಪಂ. ಡಾ. ಪುಟ್ಟರಾಜರ ಪುಣ್ಯಸ್ಮರಣೋತ್ಸವ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಯೋಜನಾಧಿಕಾರಿಗಳಾದ ಬಸವರಾಜ ಹಿರೇಗೌಡ್ರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಚೇತನ್ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಶಿವಮೂರ್ತಿ ಮೇಟಿ ಉತ್ತಮ ಸಂಘಟಕರಾಗಿದ್ದು, ಸರಕಾರದ ಯೋಜನೆ, ಸಾಧನೆ ಹಾಗೂ ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ ಕಾರ್ಮಿಕ ಪದ್ದತಿ, ದೇವದಾಸಿ ಪದ್ದತಿ, ಬಾಲ್ಯ ವಿವಾಹ ಪದ್ದತಿ ಮುಂತಾದ ಯೋಜನೆಗಳ ಕುರಿತು ಬೀದಿ ನಾಟಕದ ಮೂಲಕ ಸಮುದಾಯದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಮ್ಮ ಇಲಾಖೆಯ ಯೋಜನಾ ಸಂಘದಿಂದ ಇಂಥ ಸಂಸ್ಥೆಗಳಿಗೆ ಯಾವತ್ತು ನಮ್ಮ ಸಹಕಾರ ನೀಡಲಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಯುನಿಸೆಫ್‌ನ ಸಹಾಯಕ ತರಬೇತಿ ಸಂಯೋಜಕರಾದ ಶಿವರಾಂ ಅವರು ಮಾತನಾಡಿ, ಕಲೆ ಎಲ್ಲರನ್ನು ಕೈ ಬೀಸಿ ಕರೆಯತ್ತದೆ, ಕೆಲವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ ಎನ್ನುವ ಹಾಗೆ ಶಿವಮೂರ್ತಿ ಮೇಟಿ ತಮ್ಮ ಕಲಾ ತಂಡದ ಮೂಲಕ ಅನಿಷ್ಟ ಪದ್ದತಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿರುವುದು ಹೆಮ್ಮೆಯ ವಿಷಯವಾಗಿದ್ದು, ಇವರ ತಂಡ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಲಿ ಎಂದರು.
ಕಲಾವಿದ ಹಾಗೂ ಪತ್ರಕರ್ತ ವೈ. ಬಿ. ಜೂಡಿ ಮಾತನಾಡಿ, ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದು ತುಂಬಾ ಕಷ್ಟದ ಕೆಲಸವಾಗಿದ್ದು, ಇಂಥ ಸಂಸ್ಥೆಗಳ ಬೆಳವಣಿಗೆಗೆ ಇಲಾಖೆಗಳು ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಹಕಾರ ನೀಡುವಂತಾಗಲಿ ಎಂದರು.
ಓಜನಹಳ್ಳಿ ಗ್ರಾಮದ ಮಾದಿಗ ದಂಡೋರ ಪದಾಧಿಕಾರಿ ನಿಂಗಪ್ಪ ಮುಂದಲಮನಿ ಹಾಗೂ ಸಂಗಡಿಗರು ಕೋಲಾಟ ಪ್ರದರ್ಶನ ನೀಡಿದರು. ಹಿರಿಯ ಕಲಾವಿದ ಆಬಲಕಟ್ಟಿಯ ದಾವಲಸಾಬ ಅತ್ತಾರ್ ತತ್ವಪದ ಹಾಗೂ ಗೀಗೀ ಪದಗಳನ್ನು ಪ್ರಸ್ತುತಪಡಿಸಿದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ಜಿಲ್ಲಾ ಅಧ್ಯಕ್ಷರಾದ ಬಸಲಿಂಗಪ್ಪ ಲಾಡಿ ಹಾಗೂ ಗ್ರಾಮದ ದಳಪತಿ ಶೇಖರಗೌಡ ಮಾಲಿಪಾಟೀಲ ಅವರ ಸಮಾಜ ಸೇವೆಯನ್ನು ಗುರುತಿಸಿ ನಾಟಕಕಾರ ದಿವಂಗತ ಎಚ್. ಸಿದ್ದಪ್ಪ ಮಾಸ್ತರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಗ್ರಾಮದ ಹಿರಿಯರಾದ ಶೇಖರಗೌಡ ಮಾಲಿಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬಾಲ ಕಾರ್ಮಿಕ ಯೋಜನಾ ಸಂಘದ ಜಿಲ್ಲಾ ಕ್ಷೇತ್ರಾಧಿಕಾರಿ ವೀರಣ್ಣ ಕುಂಬಾರ, ಕುಷ್ಟಗಿ ಸಂಯೋಜಕ ಶರಣಪ್ಪ, ಗ್ರಾಮದ ಮುಖಂಡರು ಹಾಗೂ ಅಖಿಲಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ತಾಲೂಕ ಅಧ್ಯಕ್ಷರಾದ ದೇವರಾಜ ಹಾಲಸಮುದ್ರ, ಹುಲುಗಪ್ಪ ಮೋಟಿ, ಮೈಲಾರೆಪ್ಪ ಮುಂದಲಮನಿ ಮುಂತಾದವರು ವೇದಿಕೆಯಲ್ಲಿದ್ದರು
ಸಂಗೀತ ಶಿಕ್ಷಕ ವೈ. ಎಸ್. ಭಜಂತ್ರಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಯುನಿಸೆಫ್‌ನ ಗ್ರಾ.ಪಂ. ಸಂಯೋಜಕ ಆನಂದ ಹಳ್ಳಿಗುಡಿ ನಿರೂಪಿಸಿದರು. ಡಾ. ಶರಣಪ್ಪ ಮೇಟಿ ವಂದಿಸಿದರು.

Advertisement

0 comments:

Post a Comment

 
Top