ಜಿಲ್ಲೆಯಲ್ಲಿನ ಬಹಳಷ್ಟು ಗ್ರಾಮಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಿಸಲು ಜಿಲ್ಲೆಯ ೧೪ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತಿರುವ ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಗಳ ಕುರಿತು ಪಂಚಾಯತಿ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಅನೇಕ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರೆ, ಹಲವು ಗ್ರಾಮಗಳು ಫ್ಲೋರೈಡ್‌ಯುಕ್ತ ನೀರಿನಿಂದಾಗಿ ತೊಂದರೆಯಲ್ಲಿವೆ. ಇಂತಹ ಸಮಸ್ಯಾತ್ಮಕ ಗ್ರಾಮಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಸಲುವಾಗಿ, ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಯೋಜನೆಯಡಿ ಜಿಲ್ಲೆಯಲ್ಲಿ ೧೪ ಯೋಜನೆಗಳು ಜಾರಿಯಲ್ಲಿವೆ. ಆದರೆ ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಯೋಜನೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದಾಗಿ ಜನರ ನೀರಿನ ಬವಣೆ ತಪ್ಪುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಯೋಜನೆಗಳನ್ನು ಪೂರ್ಣಗೊಳಿಸಿ, ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವಂತಾಗಬೇಕು ಎಂದರು. ರಾಜೀವ್‌ಗಾಂಧಿ ಸಬ್‌ಮಿಷನ್ ಯೋಜನೆಯಡಿ ಸದ್ಯ ಶ್ರೀರಾಮನಗರ ಮತ್ತು ೧೨ ಗ್ರಾಮಗಳು, ಉಳೇನೂರು ಮತ್ತು ೦೭ ಗ್ರಾಮಗಳು ಹಾಗೂ ಆನೆಗೊಂದಿ ಮತ್ತು ೧೨ ಗ್ರಾಮಗಳ ಯೋಜನೆಗಳು ಪೂರ್ಣಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಸರಬರಾಜು ಮಾಡಲಾಗುತ್ತಿದೆ. ಕನಕಗಿರಿ ಮತ್ತು ೯ ಗ್ರಾಮಗಳು, ಕಾರಟಗಿ ಮತ್ತು ೨೭ ಗ್ರಾಮಗಳು, ನವಲಿ ಮತ್ತು ೨೨ ಗ್ರಾಮಗಳು, ಬಸಾಪಟ್ಟಣ ಮತ್ತು ೯ ಗ್ರಾಮಗಳ ಯೋಜನೆಗಳನ್ನು ಇನ್ನು ೨-೩ ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು, ಮುಂಡರಗಿ ಮತ್ತು ೩೭ ಗ್ರಾಮಗಳು, ಭಾಗ್ಯನಗರ ಮತ್ತು ೮ ಗ್ರಾಮಗಳು, ಮುದ್ಲಾಪುರ- ಹಿರೇಸೂಳಿಕೇರಿ ಮತ್ತು ೩೫ ಗ್ರಾಮಗಳ ಯೋಜನೆಗಳ ಕಾಮಗಾರಿಗಳು ತ್ವರಿತವಾಗಿ ನಡೆಯಬೇಕು. ಸಭೆಗೆ ಗೈರು ಹಾಜರಾದ ಗಂಗಾವತಿ ತಾಲೂಕು ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಪಾಟೀಲ್ ಅವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಜಿ.ಪಂ. ಸಿಇಓ ಎಸ್. ರಾಜಾರಾಂ ಅವರು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ಮುರಳಿಧರ್ ಅವರು ಮಾತನಾಡಿ, ರಾಜೀವ್‌ಗಾಂಧಿ ಸಬ್‌ಮಿಷನ್ ಬಹುಗ್ರಾಮಗಳ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಿದ್ದಾಪುರ ಮತ್ತು ೮ ಗ್ರಾಮಗಳು, ಹೇರೂರು ಮತ್ತು ೧೫ ಗ್ರಾಮಗಳು, ಹುಲಿಹೈದರ್ ಮತ್ತು ೧೨ ಗ್ರಾಮಗಳು, ಚಿಕ್ಕಮಾದಿನಾಳ ಮತ್ತು ೧೧ ಗ್ರಾಮಗಳು ಈ ಯೋಜನೆಗಳಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಇಲಾಖೆ ಶ್ರಮಿಸಲಿದೆ ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜ್ಯೋತಿ ಬಿಲ್ಗಾರ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
0 comments:
Post a Comment