PLEASE LOGIN TO KANNADANET.COM FOR REGULAR NEWS-UPDATES



- ಸನತ್‌ಕುಮಾರ ಬೆಳಗಲಿ

ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರೆ, ನಕ್ಸಲೀಯರು ಎಂದು ಗುಂಡಿಕ್ಕಿ ಕೊಲ್ಲುವ ಪ್ರಭುತ್ವ ನಮ್ಮದು.ಈ ದೇಶದಲ್ಲಿ ಯಾರನ್ನು ಬೇಕಾದರೂ ಮಾವೊವಾದಿಗಳೆಂದು, ಭಯೋತ್ಪಾದಕರೆಂದು ಕರೆದು ಹೊಸಕಿ ಹಾಕಿಬಿಡಬಹುದು.ಹಾಗೆ ಹೊಸಕಿ ಹಾಕುವ ತುರ್ತು ಈಗಿನ ಭಾರತದ ಆಳುವ ವರ್ಗಕ್ಕೆ ಇದೆ.ಈ ದೇಶದ ಬೆಟ್ಟಗುಡ್ಡಗಳನ್ನು, ನದಿ ಕೆರೆಗಳನ್ನು, ಕಾಡು, ಉದ್ಯಾನಗಳನ್ನು ಮಾರಾಟ ಮಾಡಲು ಹೊರಟವರಿಗೆ ಇಂಥ ಒಂದು ಅನಿವಾರ್ಯತೆಯಿದೆ.ಈ ಕಾಡಿನಲ್ಲಿ ನೆಲೆಸಿದ ಆದಿವಾಸಿಗಳನ್ನು ತುರ್ತಾಗಿ ಹೊರದಬ್ಬಬೇಕಿದೆ. ಹೊರದಬ್ಬಲು ಪೊಲೀಸ್ ಮತ್ತು ಸೇನಾಪತಿಗಳನ್ನು ಬಳಸಿ ಕೊಳ್ಳಲೇಬೇಕಾಗಿದೆ. ನೂರಾರು ವರ್ಷಗಳಿಂದ ತಮಗೆ ಆಸರೆ ನೀಡಿದ ನೆಲವನ್ನು ಬಿಟ್ಟುಕೊಡುವುದಿಲ್ಲವೆಂದು ಪ್ರತಿಭಟಿಸಿದರೆ, ಅಂಥ ಪ್ರತಿಭಟನೆ ರಾಷ್ಟ್ರದ ಭದ್ರತೆಗೆ ಹಿಂದೆಂದೂ ಒದಗದ ಅಪಾಯವೆಂದು ಅಧಿಕಾರದಲ್ಲಿದ್ದವರು ಅಬ್ಬರಿಸುತ್ತಾರೆ.ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಆದಿವಾಸಿ ಯುವಕ ವಿಠಲ್ ಮಲೆಕುಡಿಯ ಈಗ ಸರಕಾರದ ದೃಷ್ಟಿಯಲ್ಲಿ ಗಂಡಾಂತರ ತಂದೊಡ್ಡಿರುವ ಅಪಾಯಕಾರಿ ವ್ಯಕ್ತಿ. ಈತನನ್ನು ಮಾವೊವಾದಿ ಎಂದು ಜೈಲಿಗೆ ತಳ್ಳಿದ್ದಾರೆ.
ಮಂಗಳೂರು ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿದ್ಯಾರ್ಥಿಯಾದ ವಿಠಲ ನಕ್ಸಲೀಯನಾದದ್ದು ಯಾವಾಗ? ಇದಕ್ಕೆ ಸರಕಾರದ ಬಳಿ ಏನು ಪುರಾವೆಗಳಿವೆ? ಹೀಗೆಂದು ಪ್ರಶ್ನಿಸಿದರೆ ಪೊಲೀಸರ ಬಳಿ ಉತ್ತರವಿಲ್ಲ. ಆದರೆ ಉತ್ತರ ನೀಡಲಾಗದ ಪೊಲೀಸರು ವಿಠಲ್‌ನ ತಂದೆ ಲಿಂಗಣ್ಣನ ಕಾಲು ಮುರಿದಿದ್ದಾರೆ. ಈ ಹಿಂದೆ ಇಂಟರ್ನಲ್ ಅಸೆಸ್‌ಮೆಂಟ್ ಪರೀಕ್ಷೆ ಬರೆಯಲು ನ್ಯಾಯಾಲಯ ಅವಕಾಶ ನೀಡಿತ್ತು. ಆಗ ಪೊಲೀಸರ ಕಾವಲಿನಲ್ಲಿ ಬಂದು ಈತ ಈ ಪರೀಕ್ಷೆಯನ್ನು ಬರೆದ. ಆದರೆ ಮೇ 21ರಂದು ನಡೆಯಲಿರುವ ಅಂತಿಮ ಪರೀಕ್ಷೆಯನ್ನು ಬರೆಯಲು ವಿವಿ ಆಡಳಿತ ಅಡ್ಡಗಾಲು ಹಾಕಿತ್ತು.
ಇದಕ್ಕೆ ಕಾರಣ, ಈತನಿಗೆ ಶೇ. 75ರಷ್ಟು ಹಾಜರಾತಿ ಇರಲಿಲ್ಲವಂತೆ. ಅದುದರಿಂದ ವಿಠಲ್‌ನಿಗೆ ಸಮೂಹ ಸಂವಹನ ಪರೀಕ್ಷೆ ಬರೆಯುವ ಅವಕಾಶವನ್ನು ನಿರಾಕರಿಸಲಾಗಿತ್ತು.ಈ ಹಿಂದೆ ವಿಠಲ್‌ನ ಹಾಜರಾತಿ 90ರಷ್ಟು ಇದೆ ಎಂದು ಹೇಳಿದ್ದ ಮಂಗಳೂರು ವಿಶ್ವವಿದ್ಯಾಲಯ ಈಗ ಯಾರದೋ ಒತ್ತಡಕ್ಕೆ ಒಳಗಾಗಿ ಹಾಜರಾತಿಯ ಕೊರತೆ ನೆಪ ತೋರಿಸುತ್ತಿದೆ. ಸ್ನಾತಕೋತ್ತರ ಪರೀಕ್ಷೆ ಬರೆಯುವ ವಿದ್ಯಾರ್ಥಿಗೆ ಶೇ.70ರಷ್ಟು ಹಾಜರಾತಿ ಇರಬೇಕು ಎಂಬುದೇನೋ ನಿಜ. ಆದರೆ ಕಳೆದ ಎರಡು ತಿಂಗಳ ಕಾಲ ಸೆರೆಮನೆಯಲ್ಲಿರುವ ವಿಠಲ್‌ನಿಗೆ ತರಗತಿಯಲ್ಲಿ ಹಾಜರಾಗಲು ಹೇಗೆ ಸಾಧ್ಯವಾಗುತ್ತದೆ? ಏಕಕಾಲದಲ್ಲಿ ಜೈಲು ಮತ್ತು ತರಗತಿ ಎರಡೂ ಕಡೆ ಪ್ರತ್ಯಕ್ಷವಾಗಿರುವ ಅತಿಮಾನುಷ ಶಕ್ತಿಯನ್ನೇನೂ ವಿಠಲ್ ಪಡೆದಿಲ್ಲ.
ಈ ಸಂಗತಿ ಗೊತ್ತಿದ್ದರೂ ವಿವಿ ಆಡಳಿತ ವರ್ಗ ನ್ಯಾಯಾಲಯಕ್ಕೆ ಪತ್ರ ಕೊಟ್ಟು ಈ ಯುವಕನ ಭವಿಷ್ಯಕ್ಕೆ ಕಲ್ಲು ಹಾಕಿತ್ತು. ಈ ಮಧ್ಯೆ ಪುತ್ತೂರಿನ ತ್ವರಿತ ನ್ಯಾಯಾಲಯ ಜೈಲು ಸಿಬ್ಬಂದಿಗೆ ನಿರ್ದೇಶನ ನೀಡಿ ವಿಠಲ್‌ನಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಆದೇಶ ಮಾಡಿದೆ. ಈ ಹಿಂದೆ ಬೆಳ್ತಂಗಡಿ ಕೋರ್ಟ್ ಇಂತಹ ಅವಕಾಶವನ್ನು ನಿರಾಕರಿಸಿತ್ತು.ವಿಠಲ್ ಮಲೆಕುಡಿಯನ ಮೇಲೆ ಪ್ರಭುತ್ವಕ್ಕೆ ಹಾಗೂ ಪ್ರಭುತ್ವದ ಕಾವಲು ರಕ್ಷಕರಾದ ಪೊಲೀಸರಿಗೆ ಈ ಪರಿ ಕೋಪವೇಕೆ? ಈ ಹಿಂದೆ ವಿಠಲ್‌ನ ತಂದೆ ಸಾಗುವಳಿ ಮಾಡುತ್ತಿದ್ದ ಕೃಷಿಯೋಗ್ಯ ಭೂಮಿಯನ್ನು ಬಿಟ್ಟು ಕೊಡಬೇಕೆಂದು ಅಧಿಕಾರದಲ್ಲಿದ್ದವರು ಒತ್ತಡ ತಂದಿದ್ದರು.
ಎಕರೆಗೆ 60 ಲಕ್ಷ ರೂಪಾಯಿ ಬೆಲೆಬಾಳುವ ಭೂಮಿಯನ್ನು ಕೇವಲ ಹತ್ತು ಲಕ್ಷ ರೂಪಾಯಿಗೆ ಬಿಟ್ಟುಕೊಡಬೇಕೆಂದು ಒತ್ತಡ ಹೇರಿದರು. ಆದರೆ ಈ ಒತ್ತಡಕ್ಕೆ ವಿಠಲ್ ಮತ್ತು ಆತನ ತಂದೆ ಮಣಿಯಲಿಲ್ಲ. ಮಾತ್ರವಲ್ಲ ತಮ್ಮೂರಿಗೆ ರಸ್ತೆ, ನೀರು, ಶಾಲೆ ಮುಂತಾದ ಮೂಲಸೌಕರ್ಯ ಕಲ್ಪಿಸಬೇಕೆಂದು ಜನರನ್ನು ಸಂಘಟಿಸಿ ಹೋರಾಟಕ್ಕಿಳಿದರು. ಇದಕ್ಕಾಗಿ ಚುನಾವಣಾ ಬಹಿಷ್ಕಾರ ಹಾಕುವುದಾಗಿ ಘೋಷಿಸಿದ್ದರು. ಆದರೆ ಅಧಿಕಾರಿಗಳು ಬಂದು ಬೇಡಿಕೆಗಳನ್ನು ಈಡೇರಿಸುವುದಾಗಿ ಒಪ್ಪಿಕೊಂಡ ನಂತರ ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದ್ದಾರೆ. ಈ ಸಂಗತಿ ಮುಚ್ಚಿಟ್ಟ ಪೊಲೀಸರು ಚುನಾವಣಾ ಬಹಿಷ್ಕಾರ ಹಾಕಿರುವುದರಿಂದ ಇವರನ್ನೆಲ್ಲ ನಕ್ಸಲೀಯರು ಎಂದು ಕರೆದು ಜೈಲಿಗೆ ತಳ್ಳಿದ್ದಾರೆ.
ವಿಠಲ್ ಮಲೆಕುಡಿಯ ನಕ್ಸಲೀಯನೆನ್ನಲು ಪೊಲೀಸರ ಬಳಿಯಿರುವ ಸಾಕ್ಷ್ಯಾಧಾರಗಳಾದರೂ ಏನು? ಆತನ ಮನೆಯಲ್ಲಿ ನೂರು ಗ್ರಾಂ ಚಹಾಪುಡಿ, 250 ಗ್ರಾಂ ಸಕ್ಕರೆ, ಒಂದು ಟೂತ್‌ಬ್ರಶ್ ಮತ್ತು ಒಂದು ಬೈನಾಕುಲರ್ ಸಿಕ್ಕಬಿಟ್ಟವಂತೆ. ಇದರ ಜೊತೆಗೆ ಕುಲದೀಪ್ ನಯ್ಯರ್ ಬರೆದ ಜಿ.ಪಿ.ಬಸವರಾಜು ಅನುವಾದಿಸಿದ ಭಗತ್‌ಸಿಂಗ್ ಎಂಬ ಪುಸ್ತಕ ಸಿಕ್ಕಿದೆಯಂತೆ. ಇದು ನಕ್ಸಲ್ ಸಾಹಿತ್ಯವಂತೆ. ಆದರೆ ಈ ಪುಸ್ತಕವನ್ನು ವಿಠಲ್‌ನಿಗೆ ತಾನು ನೀಡಿದ್ದಾಗಿ ಡಿವೈಎಫ್‌ಐ ನಾಯಕ ಮುನೀರ್ ಕಾಟಿಪಳ್ಳ ಹೇಳುತ್ತಾರೆ. ಆದರೂ ಪೊಲೀಸರಿಗೆ ಹೇಗಾದರೂ ಮಾಡಿ ಈತನನ್ನು ನಕ್ಸಲೀಯನೆಂದು ಬ್ರಾಂಡ್ ಮಾಡಿ ಸರಕಾರದಿಂದ ಶಹಬ್ಬಾಸ್‌ಗಿರಿ ಪಡೆಯಬೇಕಿದೆ. ಆ ಕಾರಣಕ್ಕಾಗಿ ಮಂಗಳೂರು ವಿವಿ ಕುಲಪತಿ ಮೇಲೆ ಒತ್ತಡ ತಂದು ಕೋರ್ಟ್‌ಗೆ ಪತ್ರ ಬರೆಯುವಂತೆ ಮಾಡಿದ್ದಾರೆ.
ಈತ ನಕ್ಸಲೀಯನಲ್ಲ. ನಮ್ಮ ಸಂಘಟನೆಗೆ ಸೇರಿದವನು ಎಂದು ಡಿವೈಎಫ್‌ಐ ನಾಯಕರು ಪದೇ ಪದೇ ಹೇಳುತ್ತಾರೆ. ಸಿಪಿಎಂ ಸಂಸದ ರಾಜೇಶ್ ಮಂಗಳೂರಿಗೆ ಬಂದು ಜೈಲಿನಲ್ಲಿರುವ ವಿಠಲ್‌ನನ್ನು ಭೇಟಿಯಾಗಿ ಹೋಗಿದ್ದಾರೆ. ಚಿಂತಕ ಜಿ.ಕೆ.ಗೋವಿಂದರಾವ್ ಮತ್ತು ಡಿಎಸ್‌ಎಸ್ ನಾಯಕ ಮಾವಳ್ಳಿ ಶಂಕರ್ ವಿಠಲ್‌ನನ್ನು ಭೇಟಿ ಮಾಡಿ, ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಕೂಡ ಈತನನ್ನು ಕಾಣಲು ಬಂದಿದ್ದಾರೆ. ಆದರೂ ಪೊಲೀಸರು ಒಪ್ಪಿಕೊಳ್ಳಲು ತಯಾರಿಲ್ಲ.ನಕ್ಸಲರನ್ನು ಹತ್ತಿಕ್ಕಲು ನಕ್ಸಲ್ ನಿಗ್ರಹ ಪಡೆಗೆ ಸರಕಾರದಿಂದ ಕೋಟ್ಯಂತರ ರೂಪಾಯಿ ಬರುತ್ತದೆ. ಅದಕ್ಕಾಗಿ ನಕ್ಸಲೀಯರನ್ನು ಹಿಡಿಯಲಾಗದಿದ್ದರೂ ಇಂತಹ ಅಮಾಯಕರನ್ನು ಹಿಡಿದು ಸರಕಾರಕ್ಕೆ ದಾಖಲೆ ಒದಗಿಸುವುದು ಪೊಲೀಸರ ಚಾಳಿಯಾಗಿದೆ. ಮಲೆನಾಡಿನಲ್ಲಿ ಕೋರ್ಟ್‌ನಲ್ಲಿ ಖುಲಾಸೆಯಾಗಿ ಬಂದ ನಕ್ಸಲ್ ಬೆಂಬಲಿಗರನ್ನು ಸಂಪರ್ಕಿಸಿ ಶರಣಾಗತರಾದರೆ,ನಕ್ಸಲ್ ಪ್ಯಾಕೇಜ್‌ನ ಹಣ ಕೊಡುವುದಾಗಿ ಒತ್ತಡ ಹೇರಿದ ಉದಾಹರಣೆಗಳಿವೆ.
ಇದು ಒಬ್ಬ ವಿಠಲ್‌ನ ಕತೆಯಲ್ಲ, ಈ ದೇಶದ ನೂರಾರು ಬಡವರ ಮಕ್ಕಳ ವ್ಯಥೆ. ಛತ್ತೀಸಗಡದ ಶಾಲಾ ಶಿಕ್ಷಕಿ ಸೋನಿ ಸೂರಿ ಎಂಬ ಯುವತಿಯನ್ನು ಇದೇ ರೀತಿ ಬೆನ್ನು ಹತ್ತಿ ಕಾಡುತ್ತಿದ್ದಾರೆ. ಆಕೆ ನಕ್ಸಲ್ ಬೆಂಬಲಿಗಳೆಂದು ಜೈಲಿಗೆ ತಳ್ಳಿ ಪೈಶಾಚಿಕ ಚಿತ್ರಹಿಂಸೆ ನೀಡುತ್ತಿದ್ದಾರೆ. ಆಕೆಯ ಮರ್ಮಾಂಗದಲ್ಲಿ ಕಲ್ಲುಗಳನ್ನು ಹಾಕಿ ಹಿಂಸಿಸಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಗಾಯಗೊಂಡ ಆಕೆ ದಿಲ್ಲಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಹೋದರೆ, ಆಕೆಗೆ ಚಿಕಿತ್ಸೆ ನೀಡಲು ನಿರಾಕರಿಸಲಾಯಿತು. ಈ ಬಗ್ಗೆ ಸಂಸತ್ತಿನಲ್ಲಿ ಕಮ್ಯುನಿಸ್ಟ್ ಸದಸ್ಯರು ಆಕ್ಷೇಪಿಸಿದಾಗ, ಹಾಗೇನೂ ಇಲ್ಲ. ಚಿಕಿತ್ಸೆ ನೀಡುವುದಾಗಿ ಸಬೂಬು ನೀಡಿತು.

ಜೂಲಿನಾ ಪೂರ್ತಿ ಜಾರ್ಖಂಡದ 9ನೆ ಕ್ಲಾಸಿನ ವಿದ್ಯಾರ್ಥಿನಿ. ಈಕೆ ತನ್ನ ಹಳ್ಳಿಯಿಂದ ಹಾಕಿ ಪಂದ್ಯ ನೋಡಲು ಗೆಳತಿಯರೊಂದಿಗೆ ರಾಂಚಿಗೆ ಬಂದಿದ್ದಳು. ಹಾಕಿ ಪಂದ್ಯ ನೋಡಿದ ನಂತರ ಈ ಆದಿವಾಸಿ ಹುಡುಗಿ ತನ್ನ ಸಂಬಂಧಿಕರ ಮನೆಗೆ ಹೋಗಿ ತಂಗಿದಳು.ಆದರೆ ಆಕೆ ತಂಗಿದ ಮನೆ ನಕ್ಸಲ್ ಬೆಂಬಲಿಗನದೆಂದು ಪೊಲೀಸರು ಈ ಬಾಲಕಿಯನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ. ಈಕೆ ಓದುತ್ತಿರುವ ಶಾಲೆಯ ಶಿಕ್ಷಕರು ಆಕೆ ಅಂಥವಳಲ್ಲ. ಆಕೆಯ ಹಾಜರಾತಿ ದಾಖಲೆ ನೋಡಿಯೆಂದು ತೋರಿಸಿದರೂ ಪೊಲೀಸರು ಕೇಳಲಿಲ್ಲ. ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಬಂಡಾಯವೆದ್ದ ಆದಿವಾಸಿ ಹೋರಾಟಗಾರ ಬಿರ್ಸಾ ಮುಂಡಾನ ಹಳ್ಳಿಯಿಂದ ಬಂದ ಈ ಬಾಲಕಿ ಇಂದಿಗೂ ಜೈಲಿನಲ್ಲಿದ್ದಾಳೆ.
ಸುಧೀರ್ ಢವಳೆ ಮಹಾರಾಷ್ಟ್ರದ ದಲಿತ ಸಂಘಟನೆಯೊಂದರ ಕಾರ್ಯಕರ್ತ. ಹವ್ಯಾಸಿ ಪತ್ರಕರ್ತ. ದಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದು ಹೆಸರು ಮಾಡಿದ ಯುವಕ. ಇಂಥ ಜನಪರ ಹೋರಾಟಗಾರನನ್ನು ನಕ್ಸಲೀಯ ಎಂದು ಕರೆದು ಪೊಲೀಸರು ಬಂಧಿಸಿದ್ದಾರೆ. 2011ರ ಜನವರಿಯಲ್ಲಿ ವರ್ಧಾ ನದಿಯಲ್ಲಿ ಬಂಧಿಸಲ್ಪಟ್ಟ ಢವಳೆಯನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಮರಾಠಿ ದಲಿತ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ವಾಪಸು ಬರುತ್ತಿರುವಾಗ ಈ ಬಂಧನವಾಗಿದೆ. ಇದರಿಂದಾಗಿ ಈತನನ್ನೇ ಅವಲಂಬಿಸಿದ ಇಬ್ಬರು ಮಕ್ಕಳು ಮತ್ತು ಪತ್ನಿಯ ಸ್ಥಿತಿ ಚಿಂತಾಜನಕವಾಗಿದೆ. ಭೀಮರಾವ್ ಭೂತೆ ಎಂಬ ನಕ್ಸಲ್ ನಾಯಕನ ಜೊತೆಗೆ ಢವಳೆ ಸಂಪರ್ಕವಿತ್ತು ಎಂದು ಪೊಲೀಸರು ಕತೆ ಕಟ್ಟಿದ್ದಾರೆ.

ಜಾರ್ಖಂಡ್‌ನಲ್ಲಿ ಬಲವಂತದ ಭೂಸ್ವಾಧೀನದ ವಿರುದ್ಧ ಮಾನವಹಕ್ಕುಗಳ ಪರವಾಗಿ ಹೋರಾಟ ಮಾಡುತ್ತ ಬಂದಿರುವ ಚೇತನ್ ಮರಾಂಡಿಯನ್ನು ನಕ್ಸಲವಾದಿ ಎಂದು ಆರೋಪಿಸಿ ಜೈಲಿಗೆ ತಳ್ಳಲಾಗಿತ್ತು. ಆದರೆ ನ್ಯಾಯಾಲಯದ ಮಧ್ಯಪ್ರವೇಶದ ನಂತರ ಬಿಡುಗಡೆಯಾಯಿತು.ಒಡಿಶಾದ ಸಾಮಾಜಿಕ ಕಾರ್ಯಕರ್ತ ಕೋಪಾಕುಂಜಂ ಯುನೆಸೆಫ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.ಬಸ್ತಾರ್‌ನ ವನವಾಸಿ ಚೇತನ ಆಶ್ರಮದಂತಹ ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದಾರೆ. ಸರಕಾರಿ ಕೃಪಾಪೋಷಿತ ಗೂಂಡಾ ಗ್ಯಾಂಗ್ ಆದ ಸಲ್ವಾ-ಜುಡಂ ನಂತಹ ಹಂತಕ ಪಡೆ ವಿರುದ್ಧ ಈತ ಹೋರಾಡುತ್ತಾ ಬಂದಿದ್ದಾನೆ. ಡಾ. ಬಿನಾಯಕ ಸೇನ್ ಅವರು ಆದಿವಾಸಿಗಳ ಆರೋಗ್ಯ ರಕ್ಷಣೆಗಾಗಿ ಕೈಗೊಂಡ ಕಾರ್ಯಕ್ರಮಗಳಲ್ಲೂ ಇವರು ಪಾಲ್ಗೊಂಡಿದ್ದಾರೆ.
ಇಂತಹ ವ್ಯಕ್ತಿಯನ್ನು ಛತ್ತೀಸಗಡದ ಪೊಲೀಸರು 2010ರ ಡಿಸೆಂಬರ್ 10ರಂದು ಬಂಧಿಸಿದರು. ಈತನ ಭೇಟಿಗೆ ಬಂದ ಮೇಧಾ ಪಾಟ್ಕರ್ ಅವರಿಗೂ ಭೇಟಿ ಮಾಡಲು ಅವಕಾಶ ನೀಡಲಿಲ್ಲ್ಲ. ಬರೆಯುತ್ತ ಹೋದರೆ, ಇಂಥ ನೂರಾರು ಕತೆಗಳು ಕಣ್ಣೆದುರು ಬಂದು ನಿಲ್ಲುತ್ತವೆ. ಛತ್ತೀಸಗಡದಲ್ಲಿ ಒಟ್ಟು 2065 ಮಂದಿಯನ್ನು ಜೈಲಿಗೆ ತಳ್ಳಲಾಗಿದೆ. ಜಾರ್ಖಂಡ್‌ನಲ್ಲಿ 500 ಜನರನ್ನು ದಸ್ತಗಿರಿ ಮಾಡಲಾಗಿದೆ.ಒಡಿಶಾದಲ್ಲಿ 460 ಮಂದಿಯನ್ನು ಕಾರಾಗೃಹಕ್ಕೆ ತಳ್ಳಲಾಗಿದೆ. ಜಾರ್ಖಂಡ್‌ನಲ್ಲಿ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿದ ಇಡೀ ತಂಡವನ್ನೇ ಬಂಧಿಸಲಾಗಿದೆ. ಪೊಲೀಸರಿಗೆ ಹೆದರಿ ಮಹಾರಾಷ್ಟ್ರದ ಸಾಂಸ್ಕೃತಿಕ ತಂಡವೊಂದು ಇಡಿಯಾಗಿ ಭೂಗತವಾಗಿದೆ.
ಇದು ನಮ್ಮ ಪ್ರಜಾಪ್ರಭುತ್ವ. ನವ ಉದಾರವಾದದ ಕರಾಳ ಛಾಯೆ ಎಲ್ಲೆಡೆ ಕವಿಯುತ್ತಿರುವಂತೆ ಪ್ರತಿರೋಧದ ಧ್ವನಿಗಳು ಹೊರಗೆ ಬರಬಾರದಂತೆ ಕುತ್ತಿಗೆ ಹಿಸುಕುವ ಕೆಲಸವನ್ನು ಪ್ರಭುತ್ವ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ. ಬರಲಿರುವ ದಿನಗಳು ಇನ್ನೂ ಭಯಾನಕವಾಗಿವೆ ಎಂದು ಅನ್ನಿಸುತ್ತಿದೆ. ಬಂಡವಾಳಶಾಹಿ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ ಜನ ಚಳವಳಿಗಳು ಭುಗಿಲೇಳಬೇಕು.ಆದರೆ ಹಾಗೆ ಭುಗಿಲೇಳದಂತೆ ಹತ್ತಿಕ್ಕಲು ಪ್ರಭುತ್ವ ಹೊಸ ಅಸ್ತ್ರಗಳನ್ನು ಪ್ರಯೋಗಿಸವ ಅಪಾಯವಿದೆ.ಅಂತಲೇ ಹೋರಾಟಗಾರರು ಸಾಂಪ್ರದಾಯಿಕವಲ್ಲದ ಹೊಸದಾರಿಯನ್ನು ಅನ್ವೇಷಿಸಿದರೆ ಅಚ್ಚರಿಪಡಬೇಕಾಗಿಲ್ಲ.

Advertisement

0 comments:

Post a Comment

 
Top