PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ: ಮಕ್ಕಳ ಮನಸ್ಸ್ಸಿನ ಮೇಲೆ ಒತ್ತಡ ಹಾಕುವ ಬದಲು ಎಸ್‌ಎಸ್‌ಎಲ್‌ಸಿ ಅಧ್ಯಯನ ಏಕೆ ಮಹತ್ವದ್ದು ಎಂದು ಹೇಳಿಕೊಡುವ ಅಗತ್ಯವಿದೆ ಎಂದು ಎಸ್‌ಎಸ್‌ಎಲ್‌ಸಿ ಆಪಲ್ ಪುಸ್ತಕದ ಸಂಪಾದಕ ಬೆಂಗಳೂರಿನ ವಿಜಯಕುಮಾರ ಬಳಿಗಾರ ಹೇಳಿದರು.
ಕೊಪ್ಪಳದ ಬೆಳಕು ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಮತ್ತು ಜ್ಞಾನಸರೋವರ ಚಿಲ್ಡ್ರನ್ ಸ್ಟಡಿ ಸರ್ಕಲ್ ಭಾನುವಾರ ಆಯೋಜಿಸಿದ್ದ ಬೇಸಿಗೆ ಶಿಬಿರ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳು ಎಸ್‌ಎಸ್‌ಎಲ್‌ಸಿ ಪ್ರವೇಶಿಸಿದ ತಕ್ಷಣ ಅವರಿಗೆ ಎಸ್‌ಎಸ್‌ಎಲ್‌ಸಿ ಅಧ್ಯಯನದಿಂದ ಅಗುವ ಲಾಭಗಳು, ಎಸ್‌ಎಸ್‌ಎಲ್‌ಸಿಯಲ್ಲಿ ಪಡೆಯುವ ಅಂಕಗಳ ಮಹತ್ವ, ಭವಿಷ್ಯದಲ್ಲಿ ಇರುವ ಅವಕಾಶಗಳ ಕುರಿತು ಮಾಹಿತಿ ನೀಡಬೇಕು. ವರ್ಷದ ಆರಂಭದಿಂದಲೇ ಮಕ್ಕಳಿಗೆ ಅಧ್ಯಯನ ಮಾಡುವ ವಿಧಾನ, ಪರೀಕ್ಷೆಯಲ್ಲಿ ಎದುರಾಗುವ ಸಮಸ್ಯೆಗಳು, ಪರೀಕ್ಷೆಯಲ್ಲಿ ಉತ್ತರಿಸುವ ಮಾದರಿ, ಅಧ್ಯಯನ ಮಾಡುವ ವಿಧಾನಗಳನ್ನು ಹೇಳಿಕೊಡಬೇಕು. ಈ ರೀತಿಯ ಪ್ರಯತ್ನ ಮಾಡಿದಾಗ ಮಕ್ಕಳು ಇಡೀ ವರ್ಷ ಅನುಸರಿಸುವ ಕಾರಣ ಸಹಜವಾಗಿಯೇ ಅತಿ ಹೆಚ್ಚಿನ ಸ್ಕೋರ್ ಮಾಡಲು ಸಾಧ್ಯ ಎಂದರು.
ಪ್ರಸ್ತುತ ವ್ಯವಸ್ಥೆಯಲ್ಲಿ ಎಸ್‌ಎಸ್‌ಎಲ್‌ಸಿಗೆ ಬಂದಾಕ್ಷಣ ಮಕ್ಕಳ ಮೇಲೆ ಪೋಷಕರು ಸಾಕಷ್ಟು ಒತ್ತಡ ಹಾಕುತ್ತಾರೆ. ಜೊತೆಗೆ ಪಠ್ಯ ಚಟುವಟಿಕೆ ಹೊರತು ಪಡಿಸಿ ಇನ್ನೇಲ್ಲ ಚಟುವಟಿಕೆಗಳಿಗೆ ನಿರ್ಬಂಧ ಹಾಕುವ ಕಾರಣ ಮಕ್ಕಳ ವ್ಯಕ್ತಿತ್ವ ವಿಕಸನ ಕುಂಠಿತವಾಗುತ್ತದೆ. ವರ್ಷದ ಆರಂಭದಿಂದಲೇ ಅಗತ್ಯವಾದ ಮಾಹಿತಿ, ದಿನಕ್ಕೆ ಕನಿಷ್ಠ ನಾಲ್ಕು ಗಂಟೆ ಅಧ್ಯಯನ ಮಾಡಲು ಪ್ರೋತ್ಸಾಹಿಸಿದ್ದೇ ಆದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಮಕ್ಕಳಲ್ಲಿಯ ಸಾಕಷ್ಟು ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರಿನ ಖ್ಯಾತ ಮನೋವಿಜ್ಞಾನಿ ಡಾ. ಅ. ಶ್ರೀಧರ್, ಡಾ. ಶಶಿಕಲಾ ಕೃಷ್ಣಮೂರ್ತಿ, ಅನುಭವಿ ಶಿಕ್ಷಕರ ಸಲಹೆ ಪಡೆದು ಎಸ್‌ಎಸ್‌ಎಲ್‌ಸಿ ಆಪಲ್ ಪುಸ್ತಕ ರಚನೆ ಮಾಡಲಾಗಿದೆ. ಅದರ ಸಹಾಯವನ್ನು ಮಕ್ಕಳು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಮಹಾಂತೇಶ ಮಲ್ಲನಗೌಡ, ಮಕ್ಕಳಿಗೆ ಶಾಲೆ ಎಂಬುದು ಕಲಿಕೆಯ ವಾತಾವರಣ ಬೆಳಸದೆ ಶಾಲೆಯತ್ತ ವಿಮುಖನಾಗುವ ಪರಿಸ್ಥಿತಿ ಇದೆ. ಹಾಗಾಗಿ ಶಿಕ್ಷಕರಾದವರು ಮಕ್ಕಳಿಗೆ ಪ್ರೀತಿಯಿಂದ ಮತ್ತು ಆಸಕ್ತಿಯಿಂದ ಪಾಠ ಹೇಳಿಕೊಡುವ ಅಗತ್ಯವಿದೆ ಎಂದರು.
ಎಲ್ಲ ಮಕ್ಕಳಲ್ಲಿಯೂ ಒಂದು ಪ್ರತಿಭೆ ಇರುತ್ತದೆ ಅದನ್ನು ಪ್ರೋತ್ಸಾಹಿಸಿ ಬೆಳೆಸುವಂತ ಕೆಲಸ ಆದಾಗ ಮಾತ್ರ ನಮ್ಮ ಜಿಲ್ಲೆಯ ಮಕ್ಕಳು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಸಂಸ್ಥೆಯ ಮತ್ತು ಶಿಬಿರದ ನಿರ್ದೇಶಕ ಫಕ್ಕಿರಪ್ಪ ಎಮ್ಮ್ಮೀಯರ್ ಮಾತನಾಡಿ, ಕಳೆದ ೩ ವರ್ಷಗಳಿಂದ ಬೇಸಿಗೆ ಶಿಬಿರ ಮತ್ತು ನಿರಂತರ ತರಗತಿಯನ್ನು ನಡೆಸಿಕೊಂಡು ಬರಲಾಗುತ್ತಿದೆ. ಪಠ್ಯ ವಿಷಯಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ತರಬೇತಿಯನ್ನು ಬೆಂಗಳೂರಿನ ವಿಷಯ ತಜ್ಞರಿಂದ ಕೊಡಿಸುವಲ್ಲಿ ನಮ್ಮ ಸಂಸ್ಥೆ ಹೊಸ ಹೆಜ್ಜೆ ಇರಿಸಿದೆ. ಪೋಷಕರ ಮತ್ತು ಹಿರಿಯರ ಬೆಂಬಲದಿಂದ ಬರುವ ವರ್ಷಗಳಲ್ಲಿ ನಗರದ ಮಕ್ಕಳಿಗೆ ಇನ್ನು ಉತ್ತಮ ತರಬೇತಿ ಆಯೋಜಿಸುವ ಉದ್ದೇಶವಿದೆ. ಬರುವ ಜುಲೈ ಅಥವಾ ಅಗಷ್ಟ ತಿಂಗಳಿನಲ್ಲಿ ಪೋಷಕರಿಗೆ ಮತ್ತು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಒಂದು ದಿನದ ವಿಶೇಷ ತರಬೇತಿ ಏರ್ಪಡಿಸುವ ಉದ್ದೇಶ ಇದೆ ಎಂದು ಹೇಳಿದರು.
ಜಾನಪದ ಕಲಾವಿದ ಜೀವನಸಾಬ ಬಿನ್ನಾಳ, ವಿಜ್ಞಾನ ಶಿಕ್ಷಕ ಮಹಾಂತೇಶ ಚನ್ನೀನಾಯಕ್, ಕೆ.ಎನ್. ಬಡಿಗೇರ್, ಮಲ್ಲಿಕಾರ್ಜುನ, ಯಮನೂರಪ್ಪ ಭಜಂತ್ರಿ ಹಾಜರಿದ್ದರು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಶರಣಪ್ಪ ಕುರ್ನಾಳ ನಿರೂಪಿಸಿದರು, ಶಿಕ್ಷಕಿ ಪ್ರತಿಮಾ ವಂದಿಸಿದರು. 
ಬಳಿಕ ಕಲಾವಿದರಾದ ಜೀವನಸಾಬ ಬಿನ್ನಾಳ ಮತ್ತು ಜಿ.ಎಚ್. ಮಾರಿಯಾ ಅವರ ತಂಡದ ಸದಸ್ಯರು ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು, ಬೇಸಿಗೆ ಶಿಬಿರದ ಮಕ್ಕಳು ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top