- ಸನತ್‌ಕುಮಾರ ಬೆಳಗಲಿ
ಅಧಿಕಾರ ರಾಜಕಾರಣ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ರಾಜಸ್ಥಾನ, ಉತ್ತರಖಂಡ, ಕರ್ನಾಟಕ ಹೀಗೆ ಎಲ್ಲೆಡೆ ಹಿಂದುತ್ವವಾದಿ ಪಕ್ಷ ಒಡೆದ ಮನೆಯಾಗಿದೆ. ಉತ್ತರಖಂಡದಿಂದ ರಾಜ್ಯ ಸಭೆಗೆ ಸ್ಪರ್ಧಿಸಿದ್ದ ಅಹ್ಲುವಾಲಿಯಾ ಸೋಲು, ಕರ್ನಾಟಕದಲ್ಲಿನ ಹಗರಣಗಳ ಸರಮಾಲೆ, ಯಡಿಯೂರಪ್ಪ ಗ್ಯಾಂಗ್ ವಿರುದ್ಧ ಸದಾನಂದ ಗೌಡ, ಈಶ್ವರಪ್ಪ ಹೈಕಮಾಂಡ್‌ಗೆ ಬರೆದ ಪತ್ರ.... ಹೀಗೆ ಬಿಕ್ಕಟ್ಟಿನ ದಳ್ಳುರಿಯಲ್ಲಿ ದಹಿಸಿಹೋಗುತ್ತಿರುವ ಪಕ್ಷಕ್ಕೆ ಮತ್ತೆ ಹಿಂದುತ್ವದ ಅಮಲೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ಅಂತಲೆ ಮತ್ತೆ ತೊಗಾಡಿಯಾ ಎಂಬ ಭೂತ ಕರ್ನಾಟಕದಲ್ಲಿ ಸಂಚರಿಸತೊಡಗಿದೆ. ಮತ್ತೆ ಜನಸಾಮಾನ್ಯರಲ್ಲಿ ಕೋಮು ಉನ್ಮಾದ ಕೆರಳಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆದಿದೆ.ಮುಂದಿನ ಲೋಕಸಭಾ ಚುನಾವಣೆಯೊಳಗಾಗಿ ಹಿಂದೂ ಓಟ್ ಬ್ಯಾಂಕ್ ನಿರ್ಮಿಸುವುದು ಆರೆಸ್ಸೆಸ್‌ನ ಷಡ್ಯಂತರವಾಗಿದೆ. ಈ ಷಡ್ಯಂತ್ರದ ಭಾಗವಾಗಿ ಅದರಲ್ಲಿ ಹೊಸ ಕಾರ್ಯತಂತ್ರ ರೂಪಿಸಲಾಗಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನನ್ನು ತಂದು ಸಮಾಜದಲ್ಲಿ ಕೋಲಾಹಲ ಉಂಟು ಮಾಡುವ ಮಸಲತ್ತು ನಡೆದಿದೆ. ಮಧ್ಯಪ್ರದೇಶ ಹಾಗೂ ಕರ್ನಾಟಕಗಳ ಬಿಜೆಪಿ ಸರಕಾರಗಳು ಈಗಾಗಲೇ ಇಂಥ ಶಾಸನವನ್ನು ರೂಪಿಸಿವೆ. ಇದರೊಂದಿಗೆ ಭಗವದ್ಗೀತಾ ಅಭಿಯಾನಾ ಎಂಬ ಇನ್ನೊಂದು ಪ್ರಚಾರಾಂದೋಲನವನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಲಾಗುತ್ತಿದೆ.
ಅಧಿಕಾರದಲ್ಲಿರುವ ಬಿಜೆಪಿ ರಾಜಕಾರಣಿಗಳೇ ಭ್ರಷ್ಟಾಚಾರದ, ಸ್ವಜನ ಪಕ್ಷಪಾತದ ಹಗರಣಗಳಲ್ಲಿ ಸಿಲುಕಿ ಮೈತುಂಬಾ ಹೊಲಸು ಮೆತ್ತಿಕೊಂಡು ನಿಂತಿದ್ದರೂ ಜನ ಅದನ್ನು ಪ್ರಶ್ನಿಸದಂತೆ ಹಿಂದುತ್ವದ ಉನ್ಮಾದ ಕೆರಳಿಸಲು ಇನ್ನಿಲ್ಲದ ಮಸಲತ್ತು ನಡೆದಿದೆ. ಈ ಕುತಂತ್ರದ ಭಾಗವಾಗಿ ವಿಶ್ವ ಹಿಂದೂ ಪರಷತ್ತು ಈಗಾಗಲೇ ದೇಶವ್ಯಾಪಿಯಾಗಿ ಗ್ರಾಮೀಣ ಮಟ್ಟದಲ್ಲೂ ಕೋಮುಧ್ರುವೀಕರಣ ಕಾರ್ಯಾಚರಣೆ ನಡೆಸಿದೆ. ಹಿಂದೂ ಓಟ್ ಬ್ಯಾಂಕ್ ನಿರ್ಮಿಸುವಂತೆ ತೊಗಾಡಿಯಾ ಎಂಬ ಅವಿವೇಕಿ ಇತ್ತೀಚೆಗೆ ಬಹಿರಂಗವಾಗಿ ಕರೆ ನೀಡಿದ್ದಾನೆ. ಹಿಂದೂ ರಾಷ್ಟ್ರ ನಿರ್ಮಾಣದ ಗುರಿ ಸಾಧನೆಗಾಗಿ ಹೋರಾಡಲು ಸಂಕಲ್ಪ ಮಾಡಬೇಕೆಂದು ಆತ ಹೇಳಿದ್ದಾನೆ.
ಕೆಲ ತಿಂಗಳ ಹಿಂದೆ ನನ್ನನ್ನು ಭೇಟಿ ಮಾಡಿದ್ದ ಆರೆಸ್ಸೆಸ್ ಪ್ರಚಾರಕ (ನನ್ನ ಮಾಜಿ ಗೆಳೆಯ) ‘‘ನೀವು ಎಡ ಪಂಥೀಯರಾಗಿದ್ದರೂ ಮೊದಲು ನೀವು ಹಿಂದೂ ಎಂಬುದನ್ನು ಮರೆಯಬೇಡಿ’’ ಎಂದು ಹೇಳಿದ. ‘‘ಹಿಂದುವಾಗಿದ್ದರಿಂದಲೇ ಬಡವರ ಬಗ್ಗೆ ನಿಮ್ಮಲ್ಲಿ ಅನುಕಂಪ ಮತ್ತು ಕಾಳಜಿ ಇದೆ’’ ಎಂದು ಆತ ಹೇಳಿದ. ಆಗ ಆತನನ್ನು ತರಾಟೆಗೆ ತೆಗೆದುಕೊಂಡ ನಾನು ‘‘ನಾನು ಹಿಂದೂ ಎಂದು ನಿನಗೆ ಯಾರು ಹೇಳಿದರು. ‘‘ ಹಿಂದೂ ಎಂದು ಕರೆಸಿಕೊಳ್ಳುವುದು ನಿನಗೆ ಅಭಿಮಾನವಾಗಿರಬಹುದು. ಆದರೆ ನನಗೆ ಅದು ಅಪಮಾನ’’ ಎಲ್ಲಕ್ಕಿಂತ ಮೊದಲು ನೀನೊಬ್ಬ ಮನುಷ್ಯ ಎಂಬುದನ್ನು ಮರೆಯಬೇಡ. ಮರೆತರೆ ನೀನೊಬ್ಬ ಮೃಗ ಮಾತ್ರ’’ ಎಂದು ಆತನ ಭೂತ ಬಿಡಿಸಿದೆ.
ಹೀಗೆ ಜಾತಿ-ಧರ್ಮದ ಸಂಕೋಲೆಯನ್ನು ಕಿತ್ತು ಬಿಸಾಡಿದ ನನ್ನಂಥವನಿಗೂ ಈ ಶನಿಗಳು ಆಗಾಗ ಗಂಟು ಬೀಳುತ್ತವೆ. ತಲೆ ತಿನ್ನುತ್ತವೆ. ತಿರುಗಿ ನಿಂತರೆ ಕಾಲಿಗೆ ಬಿದ್ದಿ ಹೇಳುತ್ತವೆ. ನನಗೆ ಆರೆಸ್ಸೆಸ್ ಪ್ರಚಾರಕ ಹೇಳಿದ ಮಾತನ್ನೇ ತೊಗಾಡಿಯಾ ಬಹಿರಂಗವಾಗಿ ಹೇಳಿದ್ದಾನೆ. ಕಾಸರಗೋಡಿಗೆ ಇತ್ತೀಚಿಗೆ ಭೇಟಿ ನೀಡಿದ್ದ ಆತ ‘‘ಕೇರಳದ ಕಮ್ಯೂನಿಸ್ಟರೇ ಮೊದಲು ನೀವು ಹಿಂದೂಗಳು. ಬಳಿಕ ಕಮ್ಯೂನಿಸ್ಟರು’’ ಎಂದು ಬಹಿರಂಗವಾಗಿ ಹೇಳಿದ್ದಾನೆ. ತಾನು ಮೊದಲು ಮನುಷ್ಯ ಎಂಬುದನ್ನು ಮರೆತ ಅವಿವೇಕಿ ಮಾತ್ರ ಈ ರೀತಿ ‘ಹಿಂದೂ’ ಎಂದು ಅರಚುತ್ತಾನೆ.ಹಿಂದೂಗಳ ನೆರವಿಗಾಗಿ ಹೆಲ್ಪ್‌ಲೈನ್ ಮಾಡಿರುವುದಾಗಿ ಈ ಅವಿವೇಕಿ ತೊಗಾಡಿಯಾ ಹೇಳಿಕೊಂಡಿದ್ದಾನೆ.
ಭಾರತದ ಯಾವುದೇ ಮೂಲೆಯಲ್ಲಿ ಯಾವುದೇ ಹಿಂದೂವಿಗೆ ತೊಂದರೆಯಾದರೆ ಈ ಹಿಂದೂ ಹೆಲ್ಪ್‌ಲೈನ್ ಸಂಪರ್ಕಿಸಿದರೆ ನೆರವಿಗೆ ಧಾವಿಸುವುದಾಗಿ ಆತ ಹೇಳಿದ್ದಾನೆ. ದೇಶದ ಯಾವುದೇ ಭಾಗದಲ್ಲಿ ದೇವಸ್ಥಾನದಲ್ಲಿ ಪೂಜೆ, ಧಾರ್ಮಿಕ ಕಾರ್ಯ ಮಾಡುವುದಿದ್ದರೆ ಶಾಸ್ತ್ರೋಕ್ತವಾಗಿ ಕಡಿಮೆ ಖರ್ಚಿನಲ್ಲಿ ಆಗುವಂತೆ ಈ ಹೆಲ್ಪ್‌ಲೈನ್ ಮಾಡುತ್ತದಂತೆ. ಹಿಂದೂಗಳಿಗೆ ಕಾನೂನಿನ ತೊಂದರೆಯಾದರೆ ಈ ಹೆಲ್ಪ್‌ಲೈನ್‌ಗೆ ಫೋನ್ ಮಾಡಬೇಕಂತೆ ಕೇವಲ ನಿಮಿಷದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತೊಗಾಡಿಯಾ ಹೇಳಿದ್ದಾನೆ. ಈ ಅವಿವೇಕಿಯ ಹೆಲ್ಪ್‌ಲೈನ್ ಇರುವುದು ಯಾರಿಗಾಗಿ? ಇತ್ತೀಚೆಗೆ ದಲಿತ ಯುವಕರನ್ನು ಪ್ರೀತಿಸಿದ ತಪ್ಪಿಗಾಗಿ ಕೊಚ್ಚಿ ಹಾಕಲ್ಪಟ್ಟರಲ್ಲ ಆ ಹಿಂದೂ ಯುವತಿಯರ ನೆರವಿಗೆ ಈ ಹೆಲ್ಪ್‌ಲೈನ್ ಬರುವುದೇ?
ಮಹಾರಾಷ್ಟ್ರದ ಖೈರ್ಲಾಂಜಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಚ್ಚಿ ಹಾಕಲ್ಪಟ್ಟ ದಲಿತ ಸೋದರಿಯರ ನೆರವಿಗೆ ಈ ಹೆಲ್ಪ್‌ಲೈನ್ ಯಾಕೆ ಬರಲಿಲ್ಲ? ಬರಿ ಪುರೋಹಿತರಿಗೆ ರಕ್ಷಣೆ ಮತ್ತು ಮಕ್ಕಳ ಭೋಜನ ಒದಗಿಸಲು ಈ ಹೆಲ್ಪ್‌ಲೈನ್ ಮಾಡಲಾಗಿದೆಯೇ? ಯಾರನ್ನು ನಂಬಿಸಲು ಈ ಹಿಂದುತ್ವದ ಹೆಲ್ಪ್‌ಲೈನ್. ಆರೆಸ್ಸೆಸ್‌ನ ಇತಿಹಾಸ ಗೊತ್ತಿರುವವರು ಇಂಥ ವಂಚನೆಯ ಮಾತುಗಳಿಗೆ ಮರುಳಾಗುವುದಿಲ್ಲ. ಆದರೂ ಈ ನಯ ವಂಚಕರ ಇತಿಹಾಸ ಎಷ್ಟು ಜನರಿಗೆ ಗೊತ್ತಿದೆ. ಮಾಧ್ಯಮಗಳಲ್ಲಿ ಮಿಂಚುತ್ತಿರುವ ನಾರೋಹೆಣಾಚಾರಿಯಂತ ಉದ್ದನಾಮದ ದಂಡಪಿಂಡಗಳು ಜನರನ್ನು ಇಂದಿಗೂ ದಾರಿ ತಪ್ಪಿಸುತ್ತಲೇ ಇವೆ.
ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ ಕೇವಲ ಒಂದೆರಡು ದಿನ ಪತ್ರಿಕೆಗಳನ್ನು ಹೊರತು ಪಡಿಸಿದರೆ, ಇತ್ತೀಚೆಗೆ ಆರಂಭವಾದ ಪತ್ರಿಕೆ ಸೇರಿದಂತೆ ಎಲ್ಲ ದಿನಪತ್ರಿಕೆಗಳು ಅದೇ ಜಾತಿವಾದಿ, ಕೋಮುವಾದಿ ಹಾಗೂ ಕರಸೇವಕರ ತಾಣಗಳಾಗಿವೆ.ಈ ತೊಗಾಡಿಯಾ ಎಷ್ಟೇ ಹೆಲ್ಪ್‌ಲೈನ್ ಮಾಡಿದರೂ ಭಾರತದಲ್ಲಿ ಹಿಂದೂ ಓಟ್ ಬ್ಯಾಂಕ್ ನಿರ್ಮಾಣ ವಾಗುವುದಿಲ್ಲ.ಭಾರತ ಎಂದೂ ಹಿಂದೂ ರಾಷ್ಟ್ರವಾಗುವುದಿಲ್ಲ. ಆದರೆ ಆರೆಸ್ಸೆಸ್ ಎಂಬ ಫ್ಯಾಸಿಸ್ಟ್ ಸಂಘಟನೆ ಸುಮ್ಮನಿರು ವುದಿಲ್ಲ. ನಿರಂತರವಾಗಿ ತನ್ನ ಹುನ್ನಾರ ನಡೆಸುತ್ತಲೇ ಇರುತ್ತದೆ. ಅದಕ್ಕಾಗಿ ಅಮೆರಿಕಾದ ಬಹು ರಾಷ್ಟ್ರೀಯ ಕಂಪೆನಿಗಳಿಂದ ಕೋಟಿ ಕೋಟಿ ಡಾಲರ್ ಹಣ ಈ ಫ್ಯಾಸಿಸ್ಟ್ ಸಂಘಟನೆಗೆ ಹರಿದು ಬರುತ್ತದೆ. ಇವರ ಜೊತೆಗೆ ಮಠಾಧೀಶರು, ನಕಲಿ ಸಾಧುಗಳು, ರವಿಶಂಕರ್‌ರಂಥ ಲಫಂಗ ಸನ್ಯಾಸಿಗಳು ಈ ಪರಿವಾರಕ್ಕೆ ಬೆಂಬಲ ನೀಡುತ್ತಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸರಕಾರ ರಾಜಕೀಯ ಒಳಜಗಳವನ್ನು ಹೊಂದಿದ್ದರೂ ಆರೆಸ್ಸೆಸ್ ಅಜೆಂಡಾ ಜಾರಿಗೊಳಿಸುವಲ್ಲಿ ಯಡಿಯೂರಪ್ಪ,ಸದಾನಂದ ಗೌಡ,ಈಶ್ವರಪ್ಪ, ಕಾಗೇರಿ,ಮುಂತಾದವರಲ್ಲಿ ಯಾವುದೇ ಭಿನ್ನಾಭಿಪ್ರಾಯವಿರುವುದಿಲ್ಲ. ಗೋಹತ್ಯೆ ನಿಷೇಧ ಮಸೂದೆ, ಭಗವದ್ಗೀತೆ ಅಭಿಯಾನ, ಪಠ್ಯಪುಸ್ತಕ ಕೇಸರೀಕರಣ ಇವೆಲ್ಲ ಪ್ರಶ್ನೆಗಳಲ್ಲಿ ಇವರಲ್ಲಿ ಯಾವುದೇ ಒಡಕಿಲ್ಲ.ಒಡಕಿರುವುದು ಅಮೇಧ್ಯ ಹಂಚಿಕೊಳ್ಳುವುದರಲ್ಲಿ ಮಾತ್ರ. ಈ ಬಿಕ್ಕಟ್ಟಿನಿಂದ ಪಾರಾಗಲು ಬಿಜೆಪಿಗೆ ಹಿಂದೂ ಓಟ್ ಬೇಕಾಗಿದೆ.ಆರೆಸ್ಸೆಸ್ ಅಜೆಂಡಾ ಜಾರಿಗೂ ಅದು ಅನಿವಾರ್ಯವಾಗಿದೆ.ಆದರೆ ಈ ಹಿಂದೂ ಓಟ್ ಬ್ಯಾಂಕ್ ಛಿದ್ರಗೊಳಿಸುವುದು ಜಾತಿ ಬೇಡದ ಪ್ರಗತಿಪರರೆಲ್ಲರ ಸಂಕಲ್ಪವಾಗಬೇಕಾಗಿದೆ.
0 comments:
Post a Comment