ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ಇಂದು ವಿಜೃಂಭಣೆಯಿಂದ ಜರುಗಿತು. ಸಂಭ್ರಮ- ಸಡಗರದ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವ ವೀಕ್ಷಿಸಲು ನೆರೆದಿದ್ದ ಲಕ್ಷಾಂತರ ಭಕ್ತ ಸಮೂಹ ಇದಕ್ಕೆ ಸಾಕ್ಷಿಯಾಯಿತು.
ಸಂಜೆಯ ವೇಳೆಗೆ ಹುಲಿಗಿಯಲ್ಲಿ ಉಧೋ ಉಧೋ ಎನ್ನುವ ಭಕ್ತರ ಉದ್ಘಾರ ಮುಗಿಲು ಮುಟ್ಟಿತ್ತು. ಹುಲಿಗಿಯ ದೇವಸ್ಥಾನದ ಎದುರಿನ ಬೀದಿಯಲ್ಲಿ ಸಾಗಿದ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಸಮರ್ಪಿಸುವುದರ ಮೂಲಕ ಭಕ್ತರು ತಮ್ಮ ಭಕ್ತಿ ಭಾವ ಮೆರೆದರು. ರಥೋತ್ಸವದ ವೈಭವವನ್ನು ಸವಿಯಲು, ವಯೋವೃದ್ಧರು, ಮಕ್ಕಳು, ನೂತನ ದಂಪತಿಗಳು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತ ಸಮೂಹ ರಸ್ತೆಯ ಅಕ್ಕ ಪಕ್ಕದಲ್ಲಿ ನಿಂತು ವೀಕ್ಷಿಸಿದರೆ, ಯುವಕರು, ಅಕ್ಕ ಪಕ್ಕದ ಕಟ್ಟಡದ ಮೇಲೆ ನಿಂತು ವೀಕ್ಷಿಸಿ ಕೃತಾರ್ಥ ಭಾವ ಸವಿದರು. ಶ್ರೀ ಹುಲಿಗೆಮ್ಮ ದೇವಿಯ ಆಶೀರ್ವಾದ ಪಡೆಯಲು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ, ಶ್ರೀ ಹುಲಿಗೆಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಮೇಶ್ ವೈದ್ಯ, ದೇವಸ್ಥಾನದ ಕಾರ್ಯನಿವಾಹಕ ಅಧಿಕಾರಿ ಚಂದ್ರಮೌಳಿ ಸೇರಿದಂತೆ ಗಣ್ಯರು ರಥೋತ್ಸವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ಬಾರಿಯ ಶ್ರೀ ಹುಲಿಗೆಮ್ಮ ದೇವಿಯ ರಥೋತ್ಸವಕ್ಕೆ ದೂರದ ಊರುಗಳಿಂದ ಆಗಮಿಸಿದ್ದ ಭಕ್ತಾದಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ನೈರ್ಮಲ್ಯ ಅಚ್ಚುಕಟ್ಟಾಗಿದೆ. ನದಿಯ ಬಳಿ ಮಹಿಳೆಯರು ಸ್ನಾನದ ನಂತರ ಬಟ್ಟೆಗಳನ್ನು ಬದಲಾಯಿಸಿಕೊಳ್ಳಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದೆ ಅಲ್ಲದೆ ವಿವಿಧೆಡೆ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಿ, ನೈರ್ಮಲ್ಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಜಾತ್ರೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕೊಪ್ಪಳ, ಗಂಗಾವತಿ, ಹೊಸಪೇಟೆಯಿಂದ ವಿಶೇಷ ಬಸ್ ಸಂಚಾರದ ವ್ಯವಸ್ಥೆಗೊಳಿಸಲಾಗಿದೆ. ಆರೋಗ್ಯ ಇಲಾಖೆಯ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆ, ಜನಜಾಗೃತಿ ಕುರಿತಂತೆ ವಿಶೇಷ ಮಳಿಗೆ ತೆರೆಯಲಾಗಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ ಪದ್ಧತಿ ನಿಮೂಲನೆ ಕುರಿತಂತೆ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಪ್ರಾಣಿಬಲಿ, ಮದ್ಯಪಾನ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದೆ. ಒಟ್ಟಾರೆ ಈ ಬಾರಿಯ ಶ್ರೀ ಹುಲಿಗೆಮ್ಮ ದೇವಿ ರಥೋತ್ಸವ ಕಾರ್ಯಕ್ರಮ ಅತ್ಯಂತ ವಿಜೃಂಭಣೆಯಿಂದ ಜರುಗಿತು.
0 comments:
Post a Comment