
ನಾನು ಭ್ರಷ್ಟಾಚಾರ ಮಾಡಿದ್ದು ನಿಜ.ಆದರೆ ಅದರ ಫಲವನ್ನು ನೀವೆಲ್ಲರೂ ಉಂಡಿದ್ದೀರಿ.ನಾನೊಬ್ಬನೇ ಯಾಕೆ ಅಪರಾಧಿಯಾಗಬೇಕು? ಇದು ಯಡಿಯೂರಪ್ಪ ಬಿಜೆಪಿಯ ವರಿಷ್ಠರ ಮುಂದಿಟ್ಟ ಸವಾಲು.ಮತ್ತು ಆ ಮಾತಿನಲ್ಲಿ ಕೆಲವು ಸತ್ಯಗಳಿವೆ.ಆ ಸತ್ಯಗಳಿಗಾಗಿಯೇ ಅವರು ಯಡಿಯೂರಪ್ಪ ಎಂದರೆ ಹೆದರುತ್ತಾರೆ.ಇಲ್ಲಿಯವರೆಗೂ ವರಿಷ್ಠರೆಂದು ಕರೆಸಿಕೊಂಡ ಗಡ್ಕರಿ, ಸುಶ್ಮಾ ಸ್ವರಾಜ್ ಮೊದಲಾದವರು ಬಾಯಿ ಮುಚ್ಚಿ ಕೂತಿದ್ದಾರೆ.ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವಂತೆ ಮಾಡಿದ ಹೆಗ್ಗಳಿಕೆ ಸಂಪೂರ್ಣವಾಗಿ ಯಡಿಯೂರಪ್ಪ ಅವರಿಗೆ ಸೇರಬೇಕು. ಬಿಜೆಪಿಯೊಳಗಿದ್ದವರೇ ಅಡ್ಡಗಾಲು ಹಾಕಿದಾಗಲೂ ಯಡಿಯೂರಪ್ಪ ಅವುಗಳನ್ನೆಲ್ಲ ಬದಿಗೆ ಸರಿಸಿ ಬಿಜೆಪಿ ಸರಕಾರವನ್ನು ಅಧಿಕಾರಕ್ಕೇರಿಸಿದರು ಮತ್ತು ತಾನೇ ಮುಖ್ಯಮಂತ್ರಿಯಾದರು.
ಬಿಜೆಪಿ ಅಧಿಕಾರ ಹಿಡಿಯುವುದೇನೋ, ವರಿಷ್ಠರಿಗೆ ಮುಖ್ಯವಾಗಿ ಆರೆಸ್ಸೆಸ್‌ಗೆ ಬೇಕಿತ್ತು.ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಮಾತ್ರ ಅವರ್ಯಾರಿಗೂ ಬೇಕಾಗಿರಲಿಲ್ಲ.ಆರೆಸ್ಸೆಸ್‌ನ ಮುದ್ದಿನ ಕಂದ, ಅನಂತಕುಮಾರ್ ಮುಖ್ಯಮಂತ್ರಿಯಾಗಿದ್ದರೆ ಚೆನ್ನಾಗಿತ್ತು ಎನ್ನುವುದು ಅಡ್ವಾಣಿಯಾದಿಯಾಗಿ ಹಲವರ ಮನದೊಳಗಿನ ಇಂಗಿತವಾಗಿತ್ತು. ಪರಿಣಾಮವಾಗಿ ಯಡಿಯೂರಪ್ಪ ಸಾಕಷ್ಟು ನೋವನ್ನೂ ಅನುಭವಿಸಿದ್ದರು.ಸರಿ, ಬಿಜೆಪಿ ಅಧಿಕಾರ ಹಿಡಿದ ಬೆನ್ನಿಗೇ ರಾಜ್ಯವನ್ನು ದೋಚಲು ಬಿಜೆಪಿಯ ವರಿಷ್ಠರೆಲ್ಲರೂ ತಾಮುಂದು ನಾಮುಂದು ಎಂದು ಮುಗಿಬಿದ್ದರು.ಅವರನ್ನು ತಡೆಯುವ ಶಕ್ತಿ ಯಡಿಯೂರಪ್ಪನವರಿಗಿರಲಿಲ್ಲ.ರೆಡ್ಡಿಗಳು ತಮ್ಮ ಲಕ್ಷ್ಮಣ ರೇಖೆಯನ್ನು ದಾಟಿದಾಗ ಅವರನ್ನು ಕಾಪಾಡಿದ್ದೇ ಬಿಜೆಪಿಯ ಸೀತಾಮಾತೆ ಸುಶ್ಮಾ ಸ್ವರಾಜ್. ಗಡ್ಕರಿ, ಸುಶ್ಮಾ ಸೇರಿದಂತೆ ಬಿಜೆಪಿಯ ವರಿಷ್ಠರೆಲ್ಲ ಯಡಿಯೂರಪ್ಪರನ್ನು ಮುಂದಿಟ್ಟು ರಾಜ್ಯವನ್ನು ದೋಚಿದ್ದಾರೆ.
ಗಣಿ ಕಪ್ಪ ಯಡಿಯೂರಪ್ಪ ಅವರ ತಿಜೋರಿಯನ್ನು ಸೇರಿದ್ದಕ್ಕಿಂತಲೂ ಹಲವು ಪಟ್ಟು ಹೆಚ್ಚು ವರಿಷ್ಠರ ತಿಜೋರಿಯನ್ನು ಸೇರಿದೆ. ಈ ಕಾರಣದಿಂದಲೇ ಯಡಿಯೂರಪ್ಪ ಕೇಳುತ್ತಿದ್ದಾರೆ ‘‘ನನ್ನಿಂದ ಅಕ್ರಮಗಳನ್ನು ನೀವೆಲ್ಲರೂ ಮಾಡಿಸಿದ್ದಿರಿ. ನನ್ನ ಅಧಿಕಾರದ ಫಲದಿಂದ ನೀವೆಲ್ಲರೂ ರಾಜ್ಯವನ್ನು ದೋಚಿದ್ದೀರಿ. ಇದೀಗ ನಾನು ಮಾತ್ರ ಯಾಕೆ ಅಪರಾಧಿಯಾಗಬೇಕು? ಬಿಜೆಪಿಯಲ್ಲಿ ನಾನು ಮಾತ್ರ ಯಾಕೆ ಅಸ್ಪಶ್ಯನಾಗಬೇಕು?’’ ಈ ಪ್ರಶ್ನೆಗೆ ಉತ್ತರಿಸುವ ಶಕ್ತಿ ಈವರೆಗೂ ಬಿಜೆಪಿಯ ವರಿಷ್ಠರಿಗೆ ಬಂದಿಲ್ಲ. ಬರುವುದೂ ಇಲ್ಲ. ಇಂದು ಯಡಿಯೂರಪ್ಪ ಆ ಧೈರ್ಯದಿಂದಲೇ ವರಿಷ್ಠರಿಗೆ ಸವಾಲು ಹಾಕುತ್ತಿದ್ದಾರೆ. ವರಿಷ್ಠರು ದೋಚಿದ್ದಕ್ಕೆ ಹೋಲಿಸಿದರೆ ಯಡಿಯೂರಪ್ಪ ದೋಚಿದ್ದು ತೀರಾ ಸಣ್ಣ ಪ್ರಮಾಣದ್ದು. ಇದು ಬಿಜೆಪಿಯೊಳಗಿರುವ ಶಾಸಕರಿಗೆ, ಸಚಿವರಿಗೂ ಗೊತ್ತು. ಆದುದರಿಂದಲೇ ಇಂದಿಗೂ ಕೆಲವು ಶಾಸಕರು, ಸಚಿವರು ಯಡಿಯೂರಪ್ಪರ ಹಿಂದೆ ಬಲವಾಗಿ ನಿಂತಿದ್ದಾರೆ.
ಇಂದು ಹೊರನೋಟಕ್ಕೆ ಯಡಿಯೂರಪ್ಪ ಭ್ರಷ್ಟರ ನಾಯಕನಾಗಿ, ಅಧಿಕಾರಕ್ಕಾಗಿ ಹಂಬಲಿಸುವ ಸರ್ವಾಧಿಕಾರಿಯಾಗಿಯೂ ಬಿಂಬಿತವಾಗಿದ್ದಾರೆ.ಆದರೆ ಬಿಜೆಪಿಯೊಳಗಿನ ಬ್ರಾಹ್ಮಣ್ಯ ರಾಜಕಾರಣದ ಬಲಿಪಶು ಅವರು ಎನ್ನುವುದನ್ನು ನಾವು ಗಮನಿಸಬೇಕಾಗಿದೆ.ಬಿಜೆಪಿಯನ್ನು ಕಟ್ಟಿ ಬೆಳೆಸಿದ ಯಡಿಯೂರಪ್ಪರನ್ನು ವರಿಷ್ಠರು ಅತ್ಯಂತ ಕೆಟ್ಟದಾಗಿ ಬಳಸಿಕೊಂಡರು. ಅವರನ್ನು ಮುಂದಿಟ್ಟುಕೊಂಡು ಕೋಟಿ ಗಟ್ಟಲೆ ಹಣವನ್ನು ದೋಚಿದ್ದು ಮಾತ್ರವಲ್ಲ, ಅದರ ಕಳಂಕವನ್ನೆಲ್ಲ ಯಡಿಯೂರಪ್ಪರ ತಲೆಗೆ ಕಟ್ಟಿದರು.
ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ. ಕಾನೂನಿನ ಕುಣಿಕೆಗೆ ಸಿಕ್ಕಿ ಬಿದ್ದಿದ್ದಾರೆ. ಅದರರ್ಥ ಉಳಿದವರೆಲ್ಲ ಸಾಚಾ ಎಂದಲ್ಲ. ಇಂದು ಯಡಿಯೂರಪ್ಪ ಅವರಿಗೆ ಬುದ್ಧಿ ಹೇಳುವ ಯಾವ ನೈತಿಕ ಹಕ್ಕನ್ನೂ ಬಿಜೆಪಿಯ ವರಿಷ್ಠರು ಉಳಿಸಿಕೊಂಡಿಲ್ಲ. ಆದುದರಿಂದಲೇ ತಾನು ಮುಳುಗುವುದಿದ್ದರೆ,ತನ್ನ ಜೊತೆಗೆ ಎಲ್ಲ ಭ್ರಷ್ಟರೂ ಮುಳುಗಲಿ ಎಂದು ಯಡಿಯೂರಪ್ಪ ಯೋಚಿಸಿದರೆ ಅದರಲ್ಲಿ ವಿಪರೀತವಾದುದೇನೂ ಇಲ್ಲ.ಇಡೀ ಸರಕಾರ ಮುಳುಗುವುದಕ್ಕೆ ಅರ್ಹವಾಗಿದೆ. ಅದು ಯಡಿಯೂರಪ್ಪ ಅವರಿಂದಲೇ ಆದರೆ, ಕೊಂದ ಪಾಪ ತಿಂದು ಪರಿಹಾರ ಎಂಬ ಗಾದೆ ಸಾರ್ಥಕವಾಗುತ್ತದೆ. - ವಾರ್ತಾಭಾರತಿ ಸಂಪಾದಕೀಯ
0 comments:
Post a Comment