ಕೊಪ್ಪಳ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಯಶೋಗಾಥೆ
ಕೊಪ್ಪಳ ಜಿಲ್ಲೆ ಸೋನಾಮಸೂರಿ ಅಕ್ಕಿಗೆ ಹೆಸರುವಾಸಿ, ಭತ್ತದ ಕಣಜ ಎಂದೇ ಜಿಲ್ಲೆ ಪ್ರಖ್ಯಾತಿ ಪಡೆದಿದೆ. ಜಿಲ್ಲೆಯ ಖ್ಯಾತಿ ಇಷ್ಟಕ್ಕೆ ಸೀಮಿತವಾಗಿಲ್ಲ, ಇಡೀ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿಯೇ ಕೊಪ್ಪಳ ಜಿಲ್ಲೆ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ಸಿರಿವಂತ ರೈತರ ಬೆಳೆ ಎಂದೇ ಕರೆಯಲ್ಪಡುವ ದ್ರಾಕ್ಷಿ ಬೆಳೆಗೆ ಉತ್ತರ ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಗೆ ಅಗ್ರಸ್ಥಾನವಿದೆ. ದಾಳಿಂಬೆ ಬೆಳೆಯು ಅಂಗಮಾರಿ ರೋಗಕ್ಕೆ ತುತ್ತಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಹಂತದಲ್ಲಿರುವಾಗ ರೈತರಿಗೆ ತುಸು ನೆಮ್ಮದಿಯ ನಿಟ್ಟುಸಿರು ಕೊಟ್ಟಿದ್ದು ಅಂದರೆ ’ದ್ರಾಕ್ಷಿ’ ಬೆಳೆ. ಕೊಪ್ಪಳ ಜಿಲ್ಲಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಯತ್ನದಿಂದಾಗಿ ಹಾಗೂ ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರದ ಸ್ಥಾಪನೆಯಿಂದಾಗಿ ಜಿಲ್ಲೆಯ ಅನೇಕ ರೈತರು ದ್ರಾಕ್ಷಿ ಬೆಳೆ ಬೆಳೆಯುತ್ತ ಆಸಕ್ತಿ ತೋರಿದ್ದು, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಲಾಭವನ್ನು ರೈತರು ಪಡೆಯಲು ಅನುಕೂಲವಾಗುವಂತೆ ತೋಟಗಾರಿಕಾ ಇಲಾಖೆ ಸಲಹಾ ಕೇಂದ್ರ ಸ್ಥಾಪಿಸಿದ ಪರಿಣಾಮವಾಗಿ, ಜಿಲ್ಲೆಯಲ್ಲಿ ಕೆಲವು ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾತ್ರ ಇದ್ದ ದ್ರಾಕ್ಷಿ ಬೆಳೆ ಇದೀಗ ಸುಮಾರು ೪೦೦ ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದೆ. ಅಲ್ಲದೆ ಕುಷ್ಟಗಿ ತಾಲೂಕಿನ ತಾವರಗೇರಾ ಹತ್ತಿರದ ಗರ್ಜನಾಳ ಗ್ರಾಮದಲ್ಲಿ ದ್ರಾಕ್ಷಾ ರಸ (ವೈನ್) ತಯಾರಿಕಾ ಘಟಕ ತಲೆಯೆತ್ತಿದೆ.
ಲಾಭದಾಯಕ ತೋಟಗಾರಿಕಾ ಉದ್ಯಮವೆಂದರೆ ಒಣದ್ರಾಕ್ಷಿ ಘಟಕ ಸ್ಥಾಪಿಸುವುದು, ಇದುವರೆಗೂ ಮಹಾರಾಷ್ಟ್ರ ರಾಜ್ಯ ಬಿಟ್ಟರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಣದ್ರಾಕ್ಷಿ ಮಾಡುವ ರೈತರು ಲಭ್ಯವಿರುವುದು ಕೇವಲ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾತ್ರ. ಆದರೆ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಣ ದ್ರಾಕ್ಷಿ ತಯಾರಿಸುವ ಘಟಕ ಸ್ಥಾಪನೆಯ ಸಾಹಸ ಮಾಡಿದವರು ಅಂದರೆ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಪ್ರಗತಿಪರ ರೈತ ರಾಜಾಸಾಬ್.
ಈಗಾಗಲೆ ರಾಜಾಸಾಬ್ ಅವರು ದ್ರಾಕ್ಷಿಯಲ್ಲಿ ಉತ್ತಮ ಇಳುವರಿ ಪಡೆದು ಉತ್ತಮ ರೈತನೆಂದು ಸೈ ಎನಿಸಿಕೊಂಡಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ದ್ರಾಕ್ಷಿ ಹಣ್ಣಿನ ಬೆಲೆ ಕುಸಿತ ಕಂಡುಬರುತ್ತಿದ್ದು, ದ್ರಾಕ್ಷಿ ಬೆಳೆಯಲು ವಿವಿಧ ಹಂತಗಳಲ್ಲಿ ತಗಲುವ ಖರ್ಚು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಆದಾಯ ಮಾತ್ರ ಇಳಿಮುಖವಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಪರಿಸ್ಥಿತಿ ಹೀಗಿರುವ ಸಮಯದಲ್ಲಿ ತೋಟಗಾರಿಕೆ ಇಲಾಖೆ ದ್ರಾಕ್ಷಿ ಬೆಳೆಗಾರರ ನೆರವಿಗೆ ಬಂದಿದ್ದು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಸ್.ಬಿ. ಭೋಗಿ, ತೋಟಗಾರಿಕೆ ಸಹಾಯಕ ಹಡಗಲಿ ಮತ್ತು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ವಿಷಯ ತಜ್ಞ ಮೂರ್ತಿ ಅವರ ಸಲಹೆ ಮೇರೆಗೆ ದ್ರಾಕ್ಷಿ ಹಣ್ಣನ್ನು ಒಣ ದ್ರಾಕ್ಷಿಯಾಗಿ (ರೇಜಿನ್) ಪರಿವರ್ತಿಸಿ, ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ ಮಾಡುವ ಸಾಹಸಕ್ಕೆ ರೈತ ರಾಜಾಸಾಬ್ ಕೈ ಹಾಕಿದರು. ತಮ್ಮ ೪ ಎಕರೆ ಜಮೀನಿನಲ್ಲಿ ಸುಮಾರು ೪೦ ಟನ್ ದ್ರಾಕ್ಷಿ ಹಣ್ಣಿನ ಇಳುವರಿ ನಿರೀಕ್ಷಿಸಿದ ರಾಜಾಸಾಬ್ ಪ್ರತಿ ಕೆ.ಜಿಗೆ ಸರಾಸರಿ ೨೦ ರೂ. ನಂತೆ ಇದುವರೆಗೂ ೧೫ ಟನ್‌ಗಳಷ್ಟು ದ್ರಾಕ್ಷಿ ಹಣ್ಣು ಮಾರಾಟ ಮಾಡಿದ್ದರೂ ಇದರ ಖರ್ಚು-ವೆಚ್ಚ ನೋಡಿದಾಗ ನಿವ್ವಳ ಲಾಭ ಅತ್ಯಂತ ಕಡಿಮೆ ಎಂದರಿತ ರಾಜಾಸಾಬ್ ಒಣ ದ್ರಾಕ್ಷಿ ಮಾಡಿ ಮಾರಾಟ ಮಾಡಿದರೆ ಉತ್ತಮ ಲಾಭ ಪಡೆಯಬಹುದು, ಪ್ರತಿ ಕೆ.ಜಿ.ಗೆ ರೂ. ೧೫೦ ರಿಂದ ೨೦೦ ರವರೆಗೂ ದೊರೆಯುವ ಸಾಧ್ಯತೆ ಇದೆ. ಪ್ರತಿ ಒಂದು ಕೆ.ಜಿ. ಒಣ ದ್ರಾಕ್ಷಿ ಮಾಡಲು ೪ ಕೆ.ಜಿ. ದ್ರಾಕ್ಷಿ ಹಣ್ಣು ಬೇಕಾಗುತ್ತದೆ. ಇದಕ್ಕೆ ತಗಲುವ ವೆಚ್ಚ ೩ ರಿಂದ ೪ ಸಾವಿರಗಳು. ಆದಾಗ್ಯೂ ಒಣದ್ರಾಕ್ಷಿ ಮಾರಾಟದಿಂದ ಹೆಚ್ಚಿನ ಲಾಭ ಪಡೆಯಬಹುದು ಎಂಬ ತೋಟಗಾರಿಕೆ ಅಧಿಕಾರಿಗಳ ಸಲಹೆಯಂತೆ ಕಾರ್ಯರೂಪಕ್ಕೆ ಇಳಿದೇ ಬಿಟ್ಟರು.
ಈ ವರ್ಷ ರಾಜಾಸಾಬ್ ೫ ಟನ್‌ಗಳಷ್ಟು ಹಣ್ಣನ್ನು ಒಣದ್ರಾಕ್ಷಿಯಾಗಿ ಮಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ. ಒಣದ್ರಾಕ್ಷಿ ಮಾಡಲು ಈಗ ಹೊಸ ತಾಂತ್ರಿಕತೆ ಲಭ್ಯವಿದ್ದು, ಹಿಂದೆಂದಿಗಿಂತಲೂ ಒಳ್ಳೆಯ ಗುಣಮಟ್ಟದ ಒಣ ದ್ರಾಕ್ಷಿ ತಯಾರಿಸಬಹುದಲ್ಲದೆ, ಗುಣಮಟ್ಟ ಕೆಡುವ ಶೇ. ಪ್ರಮಾಣ ಕೂಡ ಕಡಿಮೆ ಎನ್ನುವ ರಾಜಾಸಾಬ್ ಒಣದ್ರಾಕ್ಷಿ ಮಾಡುವ ವಿಧಾನವನ್ನು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಅದೇ ವಿಧಾನವನ್ನು ಅನುಸರಿಸುತ್ತಿದ್ದೇನೆ ಎಂದು ರಾಜಾಸಾಬ್ ವಿವರಿಸಿದ್ದು ಹೀಗೆ, ದ್ರಾಕ್ಷಿ ಹಣ್ಣುಗಳನ್ನು ಕುದಿಯುವ ಕಾಸ್ಟಿಕ್ ಸೋಡಾದಲ್ಲಿ ೩೦ ಸೆಕೆಂಡ್‌ವರೆಗೂ ಮುಳುಗಿಸಿ ತಕ್ಷಣವೇ ಹೊರತೆ ತೆಗೆದು, ತಣ್ಣೀರಿನಲ್ಲಿ ತೊಳೆಯಬೇಕು. ಇದನ್ನು ಶೇ. ೯೦ ರಷ್ಟು ನೆರಳು ಪರದೆ ಮಾಡಿ ಜಾಲಿ ಪರದೆಯ ಮೇಲೆ ಹಣ್ಣುಗಳನ್ನು ಹರಡಬೇಕು. ಇದಕ್ಕೆ ಗಂಧಕದ ಧೂಪದಿಂದ ಉಪಚರಿಸಿ ನಂತರ ಇಥೈಲ್ ಓಲಿಯೇಟ್ ಹಾಗೂ ಪೊಟ್ಯಾಷಿಯಮ್ ಕಾರ್ಬೋನೇಟ್ ದ್ರಾವಣದಿಂದ ಉಪಚರಿಸಿ ಸ್ವಲ್ಪ ಬಣ್ಣ ಬರುವ ದ್ರಾವಣ ಬೆರೆಸಿದರೆ ೧೫ ರಿಂದ ೨೨ ದಿನಗಳಲ್ಲಿ ಒಣದ್ರಾಕ್ಷಿ ರೆಡಿ. ಇದನ್ನು ಗ್ರೇಡಿಂಗ್ ಮಾಡಿ ೧ ಕೆ.ಜಿ. ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿ ತಿಂಗಳಾನುಗಟ್ಟಲೆ ಸಂಗ್ರಹಿಸಿಟ್ಟು ಯೋಗ್ಯ ಬೆಲೆ ಬಂದಾಗ ದೂರದೂರಿನ ಮಾರುಕಟ್ಟೆಗೆ ಸಾಗಿಸುವುದೂ ಸಹ ಸುಲಭ ಎನ್ನುತ್ತಾರೆ ರೈತ ರಾಜಾಸಾಬ್ ಹರ್ಷದಿಂದ. ಇದೀಗ ಜಿಲ್ಲೆಯ ಯಲಬುರ್ಗಾ ತಾಲೂಕು ಬೇವೂರು ಗ್ರಾಮದ ಪ್ರಗತಿಪರ ರೈತ ದೇವೇಂದ್ರಗೌಡ ಸಹ ಒಣದ್ರಾಕ್ಷಿ ಮಾಡುವ ಮೂಲಕ ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ ಮಾಡಲು ಮುಂದಾಗಿದ್ದು, ಮುಂಬರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ದ್ರಾಕ್ಷಿ ಬೆಳೆಗಾರರು ಒಣದ್ರಾಕ್ಷಿ ಮಾಡುವ ಸಾಹಸಕ್ಕೆ ಮುಂದಾದಲ್ಲಿ, ಜಿಲ್ಲೆಯ ದ್ರಾಕ್ಷಿ ಬೆಳೆ ಬೆಳೆಯುವ ವಿಸ್ತೀರ್ಣವೂ ವೃದ್ಧಿಸಿ, ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಯಾಗುವುದರಲ್ಲಿ ಸಂದೇಹವಿಲ್ಲ. ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ರಾಜಾಸಾಬ್- ೯೭೪೦೫೪೭೯೯೫, ದೇವೇಂದ್ರಗೌಡ- ೯೯೭೨೫೧೯೩೬೦, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ- ೦೮೫೩೯-೨೩೦೧೭೦ ಕ್ಕೆ ಸಂಪರ್ಕಿಸಬಹುದಾಗಿದೆ.
- ತುಕಾರಾಂ ರಾವ್ ಬಿ.ವಿ.
ಜಿಲ್ಲಾ ವಾರ್ತಾಧಿಕಾರಿ,
ವಾರ್ತಾ ಇಲಾಖೆ,
ಕೊಪ್ಪಳ.
0 comments:
Post a Comment