ಅತಂತ್ರದಲ್ಲಿ ರಾಜ್ಯ ಸರಕಾರ : ಬೆಂಬಲಿಗರ ಜೊತೆ ಶಾಸಕತ್ವಕ್ಕೆ ಬಿಎಸ್‌ವೈ ರಾಜೀನಾಮೆ ಸಾಧ್ಯತೆ
ಬೆಂಗಳೂರು, ಮೇ 12: ಮಹತ್ವದ ಬೆಳವಣಿಗೆಯೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಆಪ್ತ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಈಗಾಗಲೆ 9 ಸಚಿವರು ಹಾಗೂ ಹತ್ತಕ್ಕೂ ಅಧಿಕ ಶಾಸಕರು ತಮ್ಮ ನಾಯಕ ಯಡಿಯೂರಪ್ಪನವರಿಗೆ ರಾಜೀನಾಮೆ ಪತ್ರವನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪನವರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದು, ಸೋಮವಾರ ಪಕ್ಷದ ವರಿಷ್ಠರಿಗೆ ರಾಜೀನಾಮೆ ಪತ್ರವನ್ನು ನೀಡುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಪರ ಹಾಗೂ ವಿರೋಧಿ ಮುಖಂಡರು ದಿಲ್ಲಿಗೆ ದೌಡಾಯಿಸಿದ್ದಾರೆ.
ಈ ನಡುವೆ ಯಡಿಯೂರಪ್ಪನವರೊಂದಿಗೆ ಆರೆಸ್ಸೆಸ್ ನಡೆಸಿದ ಸಂಧಾನ ವಿಫಲಗೊಂಡಿದ್ದು, ತನ್ನ ಬೆಂಬಲಿಗರ ಮಾತೇ ನನಗೆ ಅಂತಿಮ ಎಂದು ಯಡಿಯೂರಪ್ಪ ಆರೆಸ್ಸೆಸ್ ಮುಖಂಡರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿರುವ ಹಿನ್ನೆಲೆಯಲ್ಲಿ ಇಂದು ಯಡಿಯೂರಪ್ಪ ನಿವಾಸದಲ್ಲಿ ಅವರ ಆಪ್ತರು ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಅಂತಿಮವಾಗಿ ಅವರ ಆಪ್ತ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಜೀನಾಮೆ ಪತ್ರವನ್ನು ಯಡಿಯೂರಪ್ಪರಿಗೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಚಿವರಾದ ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಸೋಮಣ್ಣ, ಸಿ.ಎಂ.ಉದಾಸಿ, ರೇಣುಕಾಚಾರ್ಯ, ಉಮೇಶ್ ಕತ್ತಿ ಸೇರಿದಂತೆ ಮತ್ತಿತರ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಹಾಗೂ ಸಿಎಂ ಉದಾಸಿ ನಿವಾಸದಲ್ಲಿ ಹಲವು ಸುತ್ತಿನ ಸಭೆ ನಡೆಸಿರುವ ಬೆಂಬಲಿಗರು, ಮುಂದಿನ ರಾಜಕೀಯ ನಡೆಯ ಕುರಿತು ಚರ್ಚಿಸಿದ್ದು, ಕೊನೆಗೆ ರಾಜೀನಾಮೆ ಪತ್ರ ವನ್ನು ಯಡಿಯೂರಪ್ಪರಿಗೆ ನೀಡುವ ಮೂಲಕ ತಮ್ಮ ನಿಷ್ಠೆ ಪ್ರದರ್ಶಿಸಿದ್ದಾರೆ. ಹೈಕಮಾಂಡ್ ಸದಾನಂದ ಗೌಡರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸದಿದ್ದರೆ ಈ ಪತ್ರವನ್ನು ಸಾಮೂಹಿಕವಾಗಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪರಿಗೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆನ್ನಲಾಗಿದೆ.
0 comments:
Post a Comment