ನಾಗಮಂಗಲ, ಮೇ 12: ದಲಿತರು ಎಂಜಲೆಲೆ ಮೇಲೆ ಉರುಳುವ ಮಡೆ ಸ್ನಾನ ಪದ್ಧತಿ ಅತ್ಯಂತ ಅಮಾನ ನವೀಯವಾಗಿದ್ದು, ಬ್ರಾಹ್ಮಣರ ಇಂತಹ ಕುಚೋದ್ಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಖ್ಯಾತ ಕತೆಗಾರ ಹಾಗೂ ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರೆ ನೀಡಿದ್ದಾರೆ.
ತಾಲೂಕಿನ ಕದಬಳ್ಳಿಯಲ್ಲಿ ಶನಿವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರ ಅನಾವರಣ ಗೊಳಿಸಿ ಮಾತನಾಡಿದ ಅವರು, ಮಡೆ ಸ್ನಾನ, ಅಸ್ಪಶ್ಯತೆಯಂತಹ ಅಚರಣೆಗಳ ವಿರುದ್ಧ ಹೋರಾಟದ ಅಗತ್ಯವಿದೆ ಎಂದರು.
ಉಪನ್ಯಾಸ ನೀಡಿದ ಅಂಕಣಕಾರ ಬಿ.ಚಂದ್ರೇಗೌಡ ಅವರು, ಬಿಜೆಪಿ ಪಕ್ಷ ಶೋಷಿತರನ್ನು ಅಧಿಕಾರದಿಂದ ದೂರ ವಿರಿಸುವ ಹುನ್ನಾರ ಮಾಡುತ್ತಾ ಬಂದಿದ್ದು, ಅಸ್ಪಶ್ಯತೆಯ ಸುಳಿಗೆ ಸಿಲುಕಿ ಶೋಷಣೆಗೊಳಗಾದ ಜನರ ಬಗ್ಗೆ ಬಿಜೆಪಿ ತಾತ್ಸಾರ ಮನೋಭಾವ ಹೊಂದಿದೆ ಎಂದು ಆರೋಪಿಸಿದರು.
ಶೋಷಿತರ ಬಗ್ಗೆ ತಾತ್ಸಾರವಿದ್ದ ಕಾರಣ ಬಿಜೆಪಿ ಕಳೆದ ಚುನಾವಣೆಯಲ್ಲಿ ಮೀಸಲು ಕ್ಷೇತ್ರಗಳಲ್ಲಿ ಶೋಷಿತರಲ್ಲದ ಮಂದಿಗೆ ಟಿಕೇಟ್ ನೀಡಿತ್ತು ಎಂದು ಆಪಾದಿಸಿದ ಅವರು, ಶೋಷಿತರನ್ನು ಅಧಿಕಾರದಿಂದ ದೂರ ಇಟ್ಟು ಅನ್ಯಾಯ ಮಾಡಲಾಗಿದೆ ಎಂದು ಕಿಡಿಗಾರಿದರು.
ಆಧುನಿಕ ಯುಗದಲ್ಲಿಯೂ ಅಸ್ಪಶ್ಯತೆ ಶಾಪವಾಗಿ ಕಾಡುತ್ತಿದೆ. ವಿಶ್ವವಿದ್ಯಾನಿಲಯ, ನ್ಯಾಯಾಲಯ ಗಳಿಗೂ ಜಾತೀಯತೆ ಪ್ರವೇಶಿಸಿದೆ. ಸಮಾಜದಲ್ಲಿ ಸಮಾನತೆ ತರಬೇಕಾದ ಮಠಾಧೀಶರು ಕಿರೀಟ ಧರಿಸಿ, ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.
ಪುರೋಹಿತಶಾಹಿಗಳು ಇಂದಿಗೂ ಅಂಬೇಡ್ಕರ್ ಬರೆದ ಸಂವಿಧಾನವನ್ನು ಒಪ್ಪಿಲ್ಲ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಕಾರ್ಯ ಯೋಜನೆಯನ್ನು ಮುಂದುವರಿಸಿ ಕೊಂಡು ಬರುತ್ತಿದ್ದಾರೆ ಎಂದು ಚಂದ್ರೇಗೌಡ ತರಾಟೆಗೆ ತೆಗೆದುಕೊಂಡರು.
ಪರಿಶಿಷ್ಟರಿಗೆ ದೇವಾಲಯ ಪ್ರವೇಶಿಸುವುದೇ ಮುಖ್ಯ ವಿಚಾರವಾಗಬಾರದು. ಜತೆಗೆ ಶಿಕ್ಷಿತರಾಗಿ ಆರ್ಥಿಕವಾಗಿ ಸಬಲರಾಗುವುದು ಮುಖ್ಯವಾಗಬೇಕು. ಆ ಮೂಲಕ ತಮ್ಮ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು ಎಂದವರು ಸಲಹೆ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ಸುರೇಶ್ ಕಂಠಿ ಮಾತನಾಡಿ, ಪರಿಶಿಷ್ಟರಲ್ಲಿ ಎಡ-ಬಲ ಧೋರಣೆ ಹೋಗಬೇಕು. ಎಲ್ಲರೂ ಒಗ್ಗೂಡಿ ದೌರ್ಜನ್ಯ ತಡೆಗೆ ಮುಂದಾಗಬೇಕು. ಜಾತೀಯತೆಯ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ವೃತ್ತ ನಿರೀಕ್ಷಕ ಟಿ.ಡಿ.ರಾಜು ಸಮಾರಂಭ ಉದ್ಘಾಟಿಸಿದರು. ಅಧಿಕಾರಿ ನಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಲಾಳನಕೆರೆ ಚಂದ್ರು, ಬಿದರಕೆರೆ ಮಂಜು, ಬೆಳ್ಳೂರು ಶಿವಣ್ಣ, ಮುಳಕಟ್ಟೆ ಶಿವರಾಮ, ತೊಳಲಿ ಕೃಷ್ಣಮೂರ್ತಿ, ಸಿ.ಬಿ.ನಂಜುಂಡಪ್ಪ, ಕಂಚನಹಳ್ಳಿ ನಾಗರಾಜು, ವೆಂಕಟೇಶ್, ವರದಪ್ಪ ಉಪಸ್ಥಿತರಿದ್ದರು.
0 comments:
Post a Comment